Apr 24, 2026 Languages : ಕನ್ನಡ | English

ಚಿನ್ನಸ್ವಾಮಿಯಲ್ಲಿ ಕೊನೆಯ ಪಂದ್ಯಕ್ಕೆ ಕಪ್ಪು ಬಣ್ಣದ ಮೆರುಗು - ಇಂದು ಬ್ಲಾಕ್ ಜೆರ್ಸಿಯಲ್ಲಿ ಮಿಂಚಲಿದೆ ಆರ್‌ಸಿಬಿ!!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ.. ಇಲ್ಲಿನ ಗಾಳಿಯಲ್ಲೂ ಆರ್‌ಸಿಬಿ ಹವಾ ಇರುತ್ತೆ. ಸಾಮಾನ್ಯವಾಗಿ ಸ್ಟೇಡಿಯಂನ ಅಣುಅಣುವಿನಲ್ಲೂ ಕೆಂಪು ಬಣ್ಣ ರಾರಾಜಿಸುತ್ತಿರುತ್ತೆ. ಆದರೆ ಇಂದು ಮಾತ್ರ ದೃಶ್ಯವೇ ಬೇರೆ! ಗುಜರಾತ್ ಟೈಟಾನ್ಸ್ ವಿರುದ್ಧದ ಇಂದಿನ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಕಪ್ಪು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ!

ಚಿನ್ನಸ್ವಾಮಿಯಲ್ಲಿ ಕೊನೆಯ ಪಂದ್ಯ – RCB vs GT!! | Photo Credit: https://www.instagram.com/cricflixindia/reels/
ಚಿನ್ನಸ್ವಾಮಿಯಲ್ಲಿ ಕೊನೆಯ ಪಂದ್ಯ – RCB vs GT!! | Photo Credit: https://www.instagram.com/cricflixindia/reels/

ಇದು ಕೇವಲ ಹೊಸ ವಿನ್ಯಾಸದ ಜೆರ್ಸಿ ಅಲ್ಲ, ಇದರ ಹಿಂದೆ ಪ್ರತಿ ಅಭಿಮಾನಿಯ ಎದೆಯನ್ನ ಭಾರವಾಗಿಸುವ ಒಂದು ಕಣ್ಣೀರಿನ ಕಥೆಯಿದೆ..!

2025ರ ಜೂನ್ ತಿಂಗಳು.. ಆರ್‌ಸಿಬಿ ವಿಜಯೋತ್ಸವ ಆಚರಿಸುತ್ತಿದ್ದ ಆ ಕ್ಷಣ ಪ್ರತಿಯೊಬ್ಬ ಕನ್ನಡಿಗನಿಗೆ ನೆನಪಿದೆ. ಆದರೆ ಅದೇ ಸಂಭ್ರಮದ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ತಂಡದ ಗೆಲುವಿಗಾಗಿ ಹಗಲಿರುಳು ಪ್ರಾರ್ಥಿಸುತ್ತಿದ್ದ ಆ ಜೀವಗಳು, ಸಂಭ್ರಮದ ಕ್ಷಣದಲ್ಲೇ ಮರೆಯಾದದ್ದು ಅತಿದೊಡ್ಡ ದುರಂತ. ಆ 11 ಆರ್‌ಸಿಬಿ ಸೈನಿಕರ ನೆನಪಿಗಾಗಿ, ಅವರಿಗೆ ಗೌರವ ಸಲ್ಲಿಸಲು ತಂಡ ಇಂದು ಬ್ಲಾಕ್ ಜೆರ್ಸಿ ಧರಿಸುತ್ತಿದೆ.

ಸೀಸನ್ ಆರಂಭದಿಂದಲೇ ಶುರುವಾಗಿತ್ತು ಈ ಗೌರವ

ಈ 2026ರ ಸೀಸನ್‌ನ ಮೊದಲ ಪಂದ್ಯದಲ್ಲೇ (ಹೈದರಾಬಾದ್ ವಿರುದ್ಧ) ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ಆಚರಿಸಿದ್ದರು. ಈಗ ತವರು ಮೈದಾನದಲ್ಲಿ ಈ ಸೀಸನ್‌ನ ಕೊನೆಯ ಪಂದ್ಯ ಆಡುತ್ತಿರುವಾಗ, ಆ 11 ಅಭಿಮಾನಿಗಳಿಗೆ ಸಲ್ಲಿಸಬಹುದಾದ ಅತಿದೊಡ್ಡ ನಮನವಾಗಿ ಇಡೀ ತಂಡವೇ ಕಪ್ಪು ಜೆರ್ಸಿಯಲ್ಲಿ ಮಿಂಚಲಿದೆ. ಈ ಜೆರ್ಸಿಯನ್ನು ಆರ್‌ಸಿಬಿ ಮಾಲಕಿ ಅನನ್ಯಾ ಬಿರ್ಲಾ ಮತ್ತು ಕಿಂಗ್ ಕೊಹ್ಲಿ ವಿಶೇಷವಾಗಿ ಅನಾವರಣಗೊಳಿಸಿದ್ದರು.

ಕಿಂಗ್ ಕೊಹ್ಲಿ vs ಪ್ರಿನ್ಸ್ ಗಿಲ್: ಹಣಾಹಣಿ ಯಾರ ನಡುವೆ?

ಭಾವನಾತ್ಮಕವಾಗಿ ಈ ಪಂದ್ಯ ಎಷ್ಟು ಮುಖ್ಯವೋ, ಆಟದ ದೃಷ್ಟಿಯಿಂದಲೂ ಅಷ್ಟೇ ಕುತೂಹಲ ಮೂಡಿಸಿದೆ. ಒಂದು ಕಡೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿರೋ ವಿರಾಟ್ ಕೊಹ್ಲಿ, ಇನ್ನೊಂದೆಡೆ ಯುವ ತಾರೆ ಶುಭಮನ್ ಗಿಲ್. ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳ ಜಿದ್ದಾಜಿದ್ದಿ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇಂದು ಆರೆಂಜ್ ಕ್ಯಾಪ್ ಯಾರ ಪಾಲಾಗುತ್ತೆ ಅನ್ನೋದೇ ಬಿಗ್ ಸಸ್ಪೆನ್ಸ್.

ಅಭಿಮಾನಿಗಳೇ ಆರ್‌ಸಿಬಿಯ ಶಕ್ತಿ!

ಈ ಸಲ ಕಪ್ ನಮ್ದೇ ಅನ್ನೋ ಘೋಷಣೆಗಿಂತಲೂ ಹೆಚ್ಚಾಗಿ, ಆರ್‌ಸಿಬಿ ತನ್ನ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತದೆ ಎಂಬುದಕ್ಕೆ ಇಂದಿನ ಈ ಬ್ಲಾಕ್ ಜೆರ್ಸಿ ನಿರ್ಧಾರವೇ ಸಾಕ್ಷಿ. ತಮ್ಮನ್ನು ಪ್ರೋತ್ಸಾಹಿಸಲು ಬಂದು ಪ್ರಾಣ ಕಳೆದುಕೊಂಡ ಆ 11 ಜೀವಗಳಿಗಾಗಿ ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಡೆ ರಣಾಂಗಣಕ್ಕಿಳಿಯಲಿದೆ.

ನಮ್ಮ ಅನಿಸಿಕೆ - ಆರ್‌ಸಿಬಿ ತಂಡದ ಈ ನಡೆಯು ಕ್ರೀಡಾ ಲೋಕದಲ್ಲಿ ಹೊಸ ಮೈಲಿಗಲ್ಲು. ಆಟದ ಜೊತೆಗೆ ಮಾನವೀಯತೆಗೂ ಬೆಲೆ ನೀಡುವ ಈ ತಂಡಕ್ಕೆ ನಮ್ಮ ಕಡೆಯಿಂದ ಒಂದು ದೊಡ್ಡ ಸಲ್ಯೂಟ್!

Latest News