ಐಪಿಎಲ್ ಅಭಿಮಾನಿಗಳಿಗೆ ಇಂದು ಸೂಪರ್ ಸಾಟರ್ಡೇ ಧಮಾಕಾ ಶನಿವಾರದ ಮೊದಲ ಪಂದ್ಯದಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಯಾಕೆಂದರೆ ಆರ್.ಸಿ.ಬಿ ಈ ಸೀಸನ್‌ನಲ್ಲಿ ಫುಲ್ ಫಾರ್ಮ್‌ನಲ್ಲಿದೆ, ಇತ್ತ ಡೆಲ್ಲಿ ತಂಡ ಸತತ ಸೋಲುಗಳಿಂದ ಕಂಗೆಟ್ಟು ಕಂಬ್ಯಾಕ್ ಮಾಡಲು ಹವಣಿಸುತ್ತಿದೆ.
ಈ ಬಾರಿಯ ಸೀಸನ್‌ನಲ್ಲಿ ರಜತ್ ಪಾಟಿದಾರ್ ನೇತೃತ್ವದ ಆರ್.ಸಿ.ಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿದ ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಸೋತಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಭರ್ಜರಿ ಸ್ಥಾನದಲ್ಲಿದೆ. ಆದರೆ ಅಭಿಮಾನಿಗಳಿಗೆ ಒಂದು ಸಣ್ಣ ಆತಂಕವಿದೆ, ಅದು ಕಿಂಗ್ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಬಗ್ಗೆ.
ಕಳೆದ ಪಂದ್ಯದಲ್ಲಿ ಕೊಹ್ಲಿ ಸಣ್ಣ ಗಾಯದ ಸಮಸ್ಯೆಯಿಂದಾಗಿ ಕೇವಲ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಕಣಕ್ಕಿಳಿದಿದ್ದರು. ಇಂದಿನ ಪಂದ್ಯದಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಆಡುತ್ತಾರಾ ಇಲ್ವಾ ಅನ್ನೋದರ ಮೇಲೆ ತಂಡದ ಬಲ ನಿರ್ಧರಿತವಾಗಲಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೇಕಬ್ ಡಫಿ ಬದಲಿಗೆ ಅನುಭವಿ ಜೋಶ್ ಹ್ಯಾಜಲ್‌ವುಡ್ ಬಂದಿರುವುದು ತಂಡಕ್ಕೆ ಆನೆ ಬಲ ತಂದಿದೆ.
ಆರ್.ಸಿ.ಬಿ ಸಂಭಾವ್ಯ ಪ್ಲೇಯಿಂಗ್-11:
ರಜತ್ ಪಾಟಿದಾರ್ (ಕ್ಯಾಪ್ಟನ್), ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸುಯಶ್ ಶರ್ಮಾ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಅಭಿನಂದನ್ ಸಿಂಗ್. (ವಿರಾಟ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗುವ ಸಾಧ್ಯತೆ ಇದೆ).
ಡೆಲ್ಲಿ ಕ್ಯಾಪಿಟಲ್ಸ್ ಕಂಬ್ಯಾಕ್ ಮಾಡುತ್ತಾ?
ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ ಈ ಸೀಸನ್ ಅಷ್ಟೇನು ಹೇಳಿಕೊಳ್ಳುವಂತಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿಗೆ ಇಂದು ಗೆಲುವು ಅನಿವಾರ್ಯ. ತಂಡದಲ್ಲಿ ದೊಡ್ಡ ಹೆಸರುಗಳಿದ್ದರೂ ಗೆಲುವು ಮಾತ್ರ ಮರೀಚಿಕೆಯಾಗಿದೆ. ಇಂದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮತ್ತು ಪಥುಮ್ ನಿಸಂಖ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಪೃಥ್ವಿ ಶಾ ಅವರಿಗೆ ಈ ಸೀಸನ್‌ನಲ್ಲಿ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ, ಹಾಗಾಗಿ ಇಂದು ಅವರಿಗೆ ಚಾನ್ಸ್ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಇನ್ನು ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆಯಿಂದ ಇನ್ನೂ ತಂಡಕ್ಕೆ ಮರಳಿಲ್ಲದಿರುವುದು ಡೆಲ್ಲಿಗೆ ದೊಡ್ಡ ಮೈನಸ್ ಪಾಯಿಂಟ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್-11:
ಅಕ್ಷರ್ ಪಟೇಲ್ (ಕ್ಯಾಪ್ಟನ್), ಕೆ.ಎಲ್ ರಾಹುಲ್, ಡೇವಿಡ್ ಮಿಲ್ಲರ್, ಪಥುಮ್ ನಿಸಂಖ, ಅಭಿಷೇಕ್ ಪೋರೆಲ್, ಟ್ರಿಸ್ಟಾನ್ ಸ್ಟಬ್ಸ್, ಸಮೀರ್ ರಿಜ್ವಿ, ಲುಂಗಿ ಎನ್ಗಿಡಿ, ಕುಲದೀಪ್ ಯಾದವ್, ಮುಖೇಶ್ ಕುಮಾರ್.
ಪಿಚ್ ಮತ್ತು ಮೈದಾನದ ರಿಪೋರ್ಟ್
ಚಿನ್ನಸ್ವಾಮಿ ಮೈದಾನ ಅಂದ್ರೆ ಅದು ಬ್ಯಾಟರ್‌ಗಳ ಸ್ವರ್ಗ. ಇಲ್ಲಿ ಬೌಂಡರಿಗಳು ಚಿಕ್ಕದಾಗಿರುವುದರಿಂದ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಯುವುದು ಗ್ಯಾರಂಟಿ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ಚೇಸಿಂಗ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಜೆ ವೇಳೆ ಪಂದ್ಯ ನಡೆಯುವುದರಿಂದ ಮಳೆ ಬರುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಒಟ್ಟಿನಲ್ಲಿ ಇಂದಿನ ಪಂದ್ಯ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿರುವುದಂತೂ ಖಚಿತ. ನಮ್ಮ ಆರ್.ಸಿ.ಬಿ ಜಯಭೇರಿ ಬಾರಿಸಿ ಪ್ಲೇ ಆಫ್ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಾ ಅಥವಾ ಡೆಲ್ಲಿ ಶಾಕ್ ನೀಡುತ್ತಾ ಅಂತ ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಇವತ್ತು ಯಾರು ಗೆಲ್ತಾರೆ? ಕಾಮೆಂಟ್ ಮಾಡಿ ತಿಳಿಸಿ!
ಈ ಪಂದ್ಯದ ನಂತರ ರಾತ್ರಿ 7:30ಕ್ಕೆ ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ತಂಡಗಳ ನಡುವೆ ಮತ್ತೊಂದು ರೋಚಕ ಪಂದ್ಯ ನಡೆಯಲಿದೆ.