Feb 16, 2026 Languages : ಕನ್ನಡ | English

2026ರ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತವೆಯಾ? ಅಂತ್ಯಗೊಂಡ ಹಗ್ಗಜಗ್ಗಾಟ!!

ಬೆಂಗಳೂರು ನಗರದ ಚಿನ್ನಸ್ವಾಮಿ ಸ್ಟೇಡಿಯಂಗೆ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಇಂದು ಅಂತ್ಯ ಸಿಗುವ ಸಾಧ್ಯತೆ ಇದೆ. ಗೃಹಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಹೈ ವೋಲ್ಟೇಜ್ ಸಭೆಯಲ್ಲಿ, ಕುನ್ಹಾ ವರದಿ ಶಿಫಾರಸುಗಳನ್ನು ಪರಿಶೀಲಿಸಲು ರಚನೆಯಾದ ಎಕ್ಸ್‌ಪರ್ಟ್ ಕಮಿಟಿ ಚರ್ಚೆ ನಡೆಸುತ್ತಿದೆ. ಈ ಕಮಿಟಿಯಲ್ಲಿ ಜಿಬಿಎ ಆಯುಕ್ತರು, ಬೆಂಗಳೂರು ಪೊಲೀಸ್ ಕಮಿಷನರ್, PWD ಅಧಿಕಾರಿಗಳು, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್
ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್

ಮಾರ್ಚ್ 26ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಹಿನ್ನಲೆಯಲ್ಲಿ, ಗೃಹ ಇಲಾಖೆಯಿಂದ ತಾತ್ಕಾಲಿಕ ಅನುಮತಿ ಸಿಕ್ಕಿದೆ. ಆದರೆ, ಕಳೆದ ಎಂಟು ತಿಂಗಳಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಮಹಿಳಾ ವಿಶ್ವಕಪ್, ಮಹಿಳಾ ಐಪಿಎಲ್ ಹಾಗೂ ವಿಜಯ ಹಜಾರೆ ಟ್ರೋಫಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲಾಗದೆ, ಬೇರೆಡೆಗೆ ಶಿಫ್ಟ್ ಮಾಡಲಾಗಿತ್ತು. ಈ ಬಾರಿ ಐಪಿಎಲ್ ಪಂದ್ಯಗಳ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕುನ್ಹಾ ವರದಿಯ ಶಿಫಾರಸುಗಳನ್ನು ಕೆಎಸ್‌ಸಿಎ ಪೂರೈಸುತ್ತಿದೆಯೇ ಎಂಬ ಪ್ರಶ್ನೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ವರದಿಯಲ್ಲಿ ಉಲ್ಲೇಖಿಸಿರುವ ಸಲಹೆಗಳ ಆಧಾರದ ಮೇಲೆ ಈಗಾಗಲೇ ಸ್ಟೇಡಿಯಂ ಒಳಗಾಂಣದಲ್ಲಿ ಸಿವಿಲ್ ವರ್ಕ್ ನಡೆಯುತ್ತಿದೆ. ನಾಲ್ಕು ಬಾರಿ ಎಕ್ಸ್‌ಪರ್ಟ್ ಕಮಿಟಿ ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ಸಭೆಗೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೂ ಆಹ್ವಾನ ನೀಡಲಾಗಿದೆ. ಅಭಿಮಾನಿಗಳ ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ AI ಕ್ಯಾಮರಾಗಳನ್ನು ಅಳವಡಿಸುವಂತೆ ಆರ್‌ಸಿಬಿ ಮನವಿ ಮಾಡಿದ್ದು, ಅದರ ವೆಚ್ಚವನ್ನು ತಾವೇ ನಿಭಾಯಿಸುವುದಾಗಿ ತಿಳಿಸಿದೆ. ಇದರಿಂದಾಗಿ, ಅಭಿಮಾನಿಗಳ ಸುರಕ್ಷತೆ ಮತ್ತು ಅನುಭವವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸಭೆ ಬಳಿಕ ಅಧಿಕೃತವಾಗಿ ಆರ್‌ಸಿಬಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ, ಆರ್‌ಸಿಬಿ ಅಭಿಮಾನಿಗಳಿಗೆ ಇಂದು ನಿಜಕ್ಕೂ ಬಿಗ್ ಡೇ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳು ನಡೆಯುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಒಟ್ಟಾರೆ, ಈ ಸಭೆಯ ಫಲಿತಾಂಶವು ಕೇವಲ ಆರ್‌ಸಿಬಿ ಅಭಿಮಾನಿಗಳಿಗಷ್ಟೇ ಅಲ್ಲ, ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಸಂತೋಷದ ಸುದ್ದಿ ತರಲಿದೆ. 

Latest News