ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ, ತಮ್ಮ ವಿಭಿನ್ನ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ವ್ಯಕ್ತಿ ಎಂದರೆ ಅದು ಡಾಗ್ ಸತೀಶ್. ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು, ಸಂದರ್ಶನಗಳು ಸದಾ ಟ್ರೋಲ್ ಪೇಜ್‌ಗಳಿಗೆ ಮತ್ತು ನೆಟ್ಟಿಗರಿಗೆ ದೊಡ್ಡ ಆಹಾರವಾಗುತ್ತಿರುತ್ತವೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದಿರದ ಸತೀಶ್, ಸದಾ ಒಂದಿಲ್ಲೊಂದು ವಿವಾದಾತ್ಮಕ ಅಥವಾ ವಿಚಿತ್ರ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಮಗ ಹರ್ಷನ ಸ್ಯಾಂಡಲ್‌ವುಡ್ ಎಂಟ್ರಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಬಿಚ್ಚುನುಡಿಗಳನ್ನು ಆಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದಾರೆ. "ನನ್ನ ಮಗನಿಗೆ 40 ವರ್ಷ ತುಂಬುವವರೆಗೂ ನಾನು ಮದುವೆ ಮಾಡೋದಿಲ್ಲ" ಎಂದು ಸತೀಶ್ ನೀಡಿರುವ ಹೇಳಿಕೆ ಈಗ ಗಾಂಧಿನಗರದಿಂದ ಹಿಡಿದು ಇನ್‌ಸ್ಟಾಗ್ರಾಮ್ ರೀಲ್ಸ್‌ವರೆಗೆ ಭಾರೀ ಸಂಚಲನ ಸೃಷ್ಟಿಸಿದೆ.
ಮಗನ ಸ್ಯಾಂಡಲ್‌ವುಡ್ ಎಂಟ್ರಿಗೆ ಭರ್ಜರಿ ತಯಾರಿ
ತಮ್ಮ ಮಗ ಹರ್ಷನನ್ನ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪರಿಚಯಿಸಲು ಡಾಗ್ ಸತೀಶ್ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಂದಿನ ಟ್ರೆಂಡ್‌ನಂತೆ ಮಗನಿಗೆ ಜಿಮ್, ಸಿಕ್ಸ್ ಪ್ಯಾಕ್ ಎಂದು ಕಷ್ಟಪಡಿಸಲು ಅವರು ಸಿದ್ದರಿಲ್ಲ. ಇಂದಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಬರುವ ಪ್ರತಿಯೊಬ್ಬ ಯುವಕನೂ ಜಿಮ್ ಸೇರಿ, ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಸತೀಶ್ ಆಲೋಚನೆಯೇ ಬೇರೆ ಇದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ನೇರವಾಗಿ ಮಾತನಾಡಿರುವ ಅವರು ಜಿಮ್ ಸಂಸ್ಕೃತಿಯನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ.
"ಸಿನಿಮಾದಲ್ಲಿ ಕ್ಲಿಕ್ ಆಗಲು ಸಿಕ್ಸ್ ಪ್ಯಾಕ್ ಇರಲೇಬೇಕಾ? ಸಿಕ್ಸ್ ಪ್ಯಾಕ್ ಇದ್ದೋರು ಮಾತ್ರ ಇಷ್ಟರವರೆಗೆ ಸಿನಿಮಾದಲ್ಲಿ ಕ್ಲಿಕ್ ಆಗಿದ್ದಾರಾ? ಅದೆಲ್ಲಾ ಬರೀ ಪ್ರದರ್ಶನ ಅಷ್ಟೇ. ನಾನು ಅವನನ್ನ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿಸಲು ಫೈಟಿಂಗ್ ಕ್ಲಾಸ್‌ಗೆ (ಥಾಯ್ ಬಾಕ್ಸಿಂಗ್) ಸೇರಿಸಿದ್ದೇನೆ. ಇದರ ಜೊತೆಗೆ ಹಾರ್ಸ್ ರೈಡಿಂಗ್ (ಕುದುರೆ ಸವಾರಿ) ಹಾಗೂ ಆಕ್ಟಿಂಗ್ ಕ್ಲಾಸ್‌ಗೆ ಸೇರಿಸಿದ್ದೇನೆ. ಒಬ್ಬ ನಟನಿಗೆ ಇವುಗಳು ಅತ್ಯಂತ ಮುಖ್ಯ. ಇಷ್ಟು ಕಲಿತರೆ ಸಾಕು.. ಸಿಕ್ಸ್ ಪ್ಯಾಕ್ ಮಾಡೋಕೆ ಹೋಗಿ, ಇತ್ತೀಚಿನ ದಿನಗಳಲ್ಲಿ ಎಷ್ಟೋ ಜನ ಹೆಂಗೆಂಗೋ ಆಗಿಬಿಟ್ಟಿದ್ದಾರೆ, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಅದೆಲ್ಲಾ ನಮಗೆ ಯಾಕೆ ಬೇಕು? ನೋಡಿ ನಾನು ಹುಟ್ಟಿದಾಗಿನಿಂದ ಇಂದಿನವರೆಗೂ ವಾಕಿಂಗ್ ಹೋಗಿಲ್ಲ, ಜಿಮ್‌ಗೂ ಹೆಜ್ಜೆ ಇಟ್ಟಿಲ್ಲ. ಆದರೆ, ನಾನೇನಾದರೂ ಜಿಮ್‌ಗೆ ಹೋಗಿದ್ರೆ ಇಷ್ಟೊತ್ತಿಗೆ ವಯಸ್ಸಾಗಿರೋ ಮುದುಕ ತರಹ ಕಾಣ್ತಿದ್ದೆ" ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜಿಮ್ ಸಂಸ್ಕೃತಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಗನ ಮದುವೆಗೆ ಸತೀಶ್ ಹಾಕಿದ ಬ್ರೇಕ್
ಸಂದರ್ಶನದಲ್ಲಿ ಮಗ ಹರ್ಷನ ಮದುವೆ ಹಾಗೂ ಪ್ರೀತಿಯ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಡಾಗ್ ಸತೀಶ್ ನೀಡಿರುವ ಉತ್ತರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮಗನ ಭವಿಷ್ಯದ ದೃಷ್ಟಿಯಿಂದ ತಾವು ಈಗಾಗಲೇ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿರುವುದಾಗಿ ಅವರು ತಿಳಿಸಿದ್ದಾರೆ. "ಇಲ್ಲ.. ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟ ಅನೌನ್ಸ್‌ಮೆಂಟ್ ಮಾಡಿಬಿಟ್ಟಿದ್ದೀನಿ. ನನ್ನ ಮಗನಿಗೆ 40 ವರ್ಷ ವಯಸ್ಸಾಗೋವರ್ಗೂ ನಾನು ಮದುವೆ ಮಾಡಲ್ಲ. ಅವನು ಚಿತ್ರರಂಗದಲ್ಲಿ ಹೀರೋ ಆಗಿ ಬೆಳೆಯಬೇಕಾಗಿದೆ. ಅವನು ಹೀರೋ ಆಗಿ ನೆಲೆ ನಿಲ್ಲುವ ಮೊದಲೇ ಮದುವೆಯಾದರೆ, ಅವನ ಮಾರ್ಕೆಟ್ ಮತ್ತು ವ್ಯಾಲ್ಯೂ ಖಂಡಿತಾ ಡೌನ್ ಆಗುತ್ತದೆ. ಚಿತ್ರರಂಗದಲ್ಲಿ ಹೀರೋಗಳಿಗೆ ಇರುವ ಕ್ರೇಜ್ ಮದುವೆಯಾದ ನಂತರ ಕಮ್ಮಿಯಾಗುತ್ತದೆ ಎಂಬುದು ನನ್ನ ನಂಬಿಕೆ" ಎಂದಿದ್ದಾರೆ.
ಅಷ್ಟೇ ಅಲ್ಲದೆ, ಈ ನಿರ್ಧಾರದ ಹಿಂದೆ ತಮ್ಮದೇ ಆದ ವೈಯಕ್ತಿಕ ಕಹಿ ಅನುಭವವೂ ಇದೆ ಎಂಬುದನ್ನು ಸತೀಶ್ ಬಿಚ್ಚಿಟ್ಟಿದ್ದಾರೆ. "ನಾನು ಮದುವೆಯಾಗಿ ಬರೀ ಮೂರೇ ಮೂರು ತಿಂಗಳಿಗೆ, ನರಕಯಾತನೆ ಅನುಭವಿಸಿಬಿಟ್ಟಿದ್ದೇನೆ. ವೈವಾಹಿಕ ಜೀವನದ ಆ ಕಷ್ಟಗಳು ನನಗೆ ಚೆನ್ನಾಗಿ ಗೊತ್ತಿವೆ. ಆ ಕಾರಣದಿಂದಾಗಿ, ನನ್ನ ಮಗನ ಜೀವನ ಹಾಳಾಗೋದೇ ಬೇಡ. ಅವನು ಯಾವುದೇ ಜವಾಬ್ದಾರಿ, ಕಿರಿಕಿರಿ ಇಲ್ಲದೆ ಹೀಗೆ ಬಿಂದಾಸ್ ಆಗಿ ಇರಲಿ. ಅವನಿಗೆ ನಾನು ಈಗಲೇ ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದೇನೆ, ಯಾರನ್ನೂ ಲವ್ ಮಾಡಬೇಡಪ್ಪ ಅಂತ. ಸೋಷಿಯಲ್ ಮೀಡಿಯಾ ಅಥವಾ ಬೇರೆಲ್ಲೇ ಏನೇ ಆದರೂ ಸರಿ, 40 ವರ್ಷದವರೆಗೂ ಅವನಿಗೆ ಮದುವೆ ಎಂಬ ಬಂಧನ ಇಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.
"ನನ್ನ ಮಗನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ"
ಮಗನ ಶಿಸ್ತಿನ ಜೀವನದ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಸತೀಶ್, "ನಾವು ನಮ್ಮ ಮಗನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮ್ಮ ಮಗನಿಗೆ ಫ್ರೀ ಆಗಿ ಬಿಟ್ಟಿರೋದ್ರಿಂದ, ಅವನು ಯಾವುದೇ ಕೆಟ್ಟ ಅಭ್ಯಾಸವನ್ನೂ ಕಲ್ತಿಲ್ಲ. ಅತಿಯಾದ ಒತ್ತಡ ಹೇರಿದರೆ ಮಕ್ಕಳು ಹಾದಿ ತಪ್ಪುತ್ತಾರೆ, ಆದರೆ ನಾವು ಅವನಿಗೆ ಒಳ್ಳೆಯ ಸಂಸ್ಕಾರ ನೀಡಿದ್ದೇವೆ. ಅವನಿಗೂ ನಾನು ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ, ನಾನು ಮದುವೆ ಮಾಡೋ ಟೈಮ್‌ನಲ್ಲಿ ನಾನೇ ಹುಡುಗಿ ನೋಡಿ ಮದುವೆ ಮಾಡ್ತೇನೆ, ಅಲ್ಲಿವರೆಗೂ ಬರೀ ಸಿನಿಮಾ, ನಟನೆ ಅಷ್ಟೇ ನಿನ್ನ ಗುರಿಯಾಗಿರಬೇಕು. ಇನ್ನೂ 20 ವರ್ಷ ಅವನಿಗೆ ಮದುವೆ ಅನ್ನೋ ಯೋಚನೆಯೇ ಬೇಡ" ಎಂದು ಮಗನಿಗೆ ನೀಡಿರುವ ಡೆಡ್‌ಲೈನ್ ಬಗ್ಗೆ ವಿವರಿಸಿದ್ದಾರೆ.
ಮನೆಗೆ ಬರುವ ಸೊಸೆ ಹೇಗಿರಬೇಕು? ಸತೀಶ್ ಅವರ ನಿರೀಕ್ಷೆಗಳು
ತಮ್ಮ ಮಗನಿಗೆ 40 ವರ್ಷಕ್ಕೆ ಮದುವೆ ಮಾಡುವುದಾಗಿ ಹೇಳಿರುವ ಸತೀಶ್, ತಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು ಎಂಬ ಬಗ್ಗೆಯೂ ತಮ್ಮದೇ ಆದ ಕೆಲವು ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. "ನಮ್ಮ ಮನೆಗೆ ಬರುವ ಹುಡುಗಿ ತುಂಬಾ ಲಕ್ಷಣವಾಗಿರಬೇಕು, ಸಾಂಪ್ರದಾಯಿಕವಾಗಿರಬೇಕು. ಉದಾಹರಣೆಗೆ ಹೇಳಬೇಕೆಂದರೆ, ಇತ್ತೀಚೆಗೆ ಪ್ರಸಾರವಾಗುತ್ತಿರುವ ʻಅಗ್ನಿಸಾಕ್ಷಿ’ ಸೀರಿಯಲ್ ಇದೆಯಲ್ಲಾ? ಅದರಲ್ಲಿ ಬರುವ ಆ ಮುಖ್ಯ ಹುಡುಗಿಯ ಕ್ಯಾರೆಕ್ಟರ್ ಇದೆಯಲ್ಲಾ? ಆ ತರಹ ಇರಬೇಕು. ಎಲ್ರನ್ನೂ ನಮ್ಮ ಮನೆಯವರು, ನಮ್ಮ ವಸ್ತು, ನಮ್ಮವರು ಅನ್ನೋ ತರಹ ಪ್ರೀತಿಯಿಂದ ಕಾಣುವ ಗುಣ ಆಕೆಗೆ ಇರಬೇಕು. ಅಂತ ಸಂಸ್ಕಾರವಂತ ಹುಡುಗಿಯನ್ನೇ ನಾನು ಸೊಸೆಯಾಗಿ ತರುತ್ತೇನೆ" ಎಂದು ಸತೀಶ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿರುವ '40 ಇಯರ್ಸ್ ರೂಲ್ಸ್'
ಒಟ್ಟಾರೆಯಾಗಿ, ಮಗನನ್ನ ಹೇಗಾದರೂ ಮಾಡಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹೀರೋ ಮಾಡಬೇಕು ಎಂಬ ಹಠಕ್ಕೆ ಬಿದ್ದಿರುವ ಡಾಗ್ ಸತೀಶ್ ಅವರ ಈ ‘40 ವರ್ಷಗಳ ನೋ ಮ್ಯಾರೇಜ್ ರೂಲ್ಸ್’ ಹಾಗೂ ಜಿಮ್ ಸಂಸ್ಕೃತಿಯ ವಿರೋಧ ಇವೆಲ್ಲವೂ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದೆ. ನೆಟ್ಟಿಗರು ಈ ಬಗ್ಗೆ ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
"40 ವರ್ಷಕ್ಕೆ ಮದುವೆ ಆದರೆ ಮಕ್ಕಳು ಯಾವಾಗ ಆಗಬೇಕು ಸತೀಶ್ ಅವರೇ?" ಎಂದು ಕೆಲವರು ಪ್ರಶ್ನಿಸುತ್ತಿದ್ದರೆ,
ಇನ್ನು ಕೆಲವರು "ಜಿಮ್‌ಗೆ ಹೋಗದಿದ್ದರೆ ಮುದುಕರ ತರ ಕಾಣ್ತೀರಾ ಅನ್ನೋ ನಿಮ್ಮ ಲಾಜಿಕ್ ಎಲ್ಲೂ ಇಲ್ಲ" ಎಂದು ಕಾಲೆಳೆಯುತ್ತಿದ್ದಾರೆ.
"ಅಗ್ನಿಸಾಕ್ಷಿ ಸೀರಿಯಲ್ ಹಳೇಯದಾಯಿತು, ಸತೀಶ್ ಅವರೇ ಇನ್ನು ಸೀರಿಯಲ್ ಪ್ರಪಂಚದಿಂದ ಹೊರಗೆ ಬನ್ನಿ" ಎಂದು ಇನ್ನು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.