ಲಂಚ ಸ್ವೀಕರಿಸುತ್ತಿದ್ದಾಗ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಿಬಿಐ ಬಲೆಗೆ ಬಿದ್ದಿದ್ದಾರೆ. ಖಾಸಗಿ ಕಂಪನಿಯೊಂದರ ಜಿಎಸ್‌ಟಿ ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪಂಚಕುಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಜಿಎಸ್‌ಟಿ ಅಧೀಕ್ಷಕ ಲವ್‌ಕುಶ್ ಕುಮಾರ್ ಅವರನ್ನು ಸಿಬಿಐ ಬಂಧಿಸಿದೆ.
ಅಧಿಕಾರಿಯನ್ನು ಬಂಧಿಸಿದ ಬೆನ್ನಲ್ಲೇ ಅವರ ನಿವಾಸದ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆ, ಬರೋಬ್ಬರಿ 1.86 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ, ಚಿನ್ನದ ಗಟ್ಟಿ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ನವಂಬರ್ 19ರಂದು ಸಿಬಿಐ ಅಧಿಕಾರಿಗಳು ಪಂಚಕುಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಅಧಿಕಾರಿ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಖಾಸಗಿ ಸಂಸ್ಥೆಯೊಂದರ ಪಾಲುದಾರರು ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಈ ಬಲೆ ಹೆಣೆದಿತ್ತು. ಸಂಸ್ಥೆಯ ವಿರುದ್ಧ ನಡೆಯುತ್ತಿದ್ದ ಜಿಎಸ್‌ಟಿ ವಿಚಾರಣೆಯಲ್ಲಿ ದಂಡ ವಿಧಿಸದಂತೆ ಮತ್ತು ಹೆಚ್ಚುವರಿ ತೆರಿಗೆ ಬೇಡಿಕೆ ನೋಟಿಸ್‌ಗಳನ್ನು ನೀಡದಂತೆ ಅನುಕೂಲ ಮಾಡಿಕೊಡಲು ಅಧಿಕಾರಿ ಲಂಚ ಕೇಳಿದ್ದರು ಎಂಬುದು ಆರೋಪವಾಗಿದೆ.
50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ
ಸಿಬಿಐಗೆ ದೂರು ನೀಡಿದ್ದ ಖಾಸಗಿ ಕಂಪನಿಯ ಪಾಲುದಾರರು, ಜಿಎಸ್‌ಟಿ ವಿಚಾರಣೆಯಲ್ಲಿ ಅನುಕೂಲ ಮಾಡಿಕೊಡಲು ಅಧಿಕಾರಿ ಆರಂಭದಲ್ಲಿ 50 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎಂದು ಆರೋಪಿಸಿದ್ದಾರೆ. ನಂತರ ಮಾತುಕತೆಯಲ್ಲಿ ಲಂಚದ ಮೊತ್ತವನ್ನು ಬದಲಾಯಿಸಲಾಗಿತ್ತು. ಸಿಬಿಐ ಪರಿಶೀಲನೆಯ ವೇಳೆ 10 ಲಕ್ಷ ರೂಪಾಯಿಯನ್ನು ಮೊದಲ ಕಂತಾಗಿ ಸ್ವೀಕರಿಸಲು ಒಪ್ಪಿಕೊಂಡಿರುವುದು ಪ್ರಾಥಮಿಕವಾಗಿ ದೃಢಪಟ್ಟಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಸಿಬಿಐ ಅಧಿಕಾರಿಗಳು ಪಂಚಕುಲದಲ್ಲಿ ಕಾರ್ಯಾಚರಣೆ ನಡೆಸಿ, ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಮನೆಯಲ್ಲಿ ಸಿಕ್ಕಿದ್ದೇನು? 1.86 ಕೋಟಿ ರೂ. ಮೌಲ್ಯದ ವಸ್ತು ವಶ
ಅಧಿಕಾರಿಯನ್ನು ಬಂಧಿಸಿದ ಬಳಿಕ ನವೆಂಬರ್ 20ರಂದು ಸಿಬಿಐ ತಂಡ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಭಾರತೀಯ ಕರೆನ್ಸಿಯಲ್ಲಿ 24.29 ಲಕ್ಷ ರೂಪಾಯಿ ಪತ್ತೆಯಾಗಿದೆ. ವಿದೇಶಿ ಕರೆನ್ಸಿಯ ಮೌಲ್ಯ ಸುಮಾರು 15.65 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ಸುಮಾರು 1.46 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಚಿನ್ನದ ಗಟ್ಟಿಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗದು ಮತ್ತು ಬೆಲೆಬಾಳುವ ಲೋಹಗಳು ಸೇರಿದಂತೆ ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 1.86 ಕೋಟಿ ರೂಪಾಯಿ ಎಂದು ಸಿಬಿಐ ಮಾಹಿತಿ ನೀಡಿದೆ.
The Central Bureau of Investigation (CBI) has recovered cash, foreign currency, gold and silver worth approximately Rs. 1.86 crore during searches conducted at the residential premises of a Superintendent of Central Goods and Services Tax (CGST), posted at Panchkula, Haryana, who was arrested in a bribery case on 19.11.2026. The CBI had registered the case on 19.11.2026 against the accused Superintendent on allegations of demanding illegal gratification for extending undue favour in GST proceedings against a private firm. The accused was caught red-handed while accepting a bribe of Rs. 10 lakh from the complainant during a trap laid at Panchkula on 19.11.2026. During subsequent searches conducted on 20.11.2026 , Indian currency amounting to Rs. 24.29 lakh, foreign currency equivalent to approximately Rs. 15.65 lakh, and gold jewellery, gold bullion and silver collectively valued at approximately Rs. 1.46 crore were recovered. The total value of these recoveries is approximately Rs. 1.86 crore. The searches also led to the recovery of documents relating to six bank accounts, investment portfolios, a life insurance policy and multiple immovable properties. Documents relating to a vehicle and financial transactions of the accused and his family members were also found. The recovered financial and property-related documents are being examined to ascertain the assets, investments and financial transactions of the accused and his family members: CBI
— IANS (@ians_india) November 21, 2026
ಆರು ಬ್ಯಾಂಕ್ ಖಾತೆಗಳು, ಹೂಡಿಕೆ ದಾಖಲೆಗಳೂ ಪತ್ತೆ
ಶೋಧ ಕಾರ್ಯಾಚರಣೆ ವೇಳೆ ಕೇವಲ ನಗದು ಮತ್ತು ಚಿನ್ನಾಭರಣ ಮಾತ್ರವಲ್ಲದೆ, ಅಧಿಕಾರಿಗೆ ಸಂಬಂಧಿಸಿದ ಹಲವು ಹಣಕಾಸು ದಾಖಲೆಗಳೂ ಪತ್ತೆಯಾಗಿವೆ. ಆರು ಬ್ಯಾಂಕ್ ಖಾತೆಗಳು, ಹೂಡಿಕೆ ಪೋರ್ಟ್‌ಫೋಲಿಯೊಗಳು, ಜೀವ ವಿಮಾ ಪಾಲಿಸಿ ಹಾಗೂ ಹಲವು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ.
ಇದರ ಜೊತೆಗೆ ವಾಹನಗಳ ಮಾಲೀಕತ್ವ ಮತ್ತು ಅಧಿಕಾರಿ ಹಾಗೂ ಅವರ ಕುಟುಂಬ ಸದಸ್ಯರ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಪತ್ತೆಹಚ್ಚಲಾಗಿದೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಆದಾಯ, ಹೂಡಿಕೆ ಮತ್ತು ಆಸ್ತಿ ವಿವರಗಳ ಬಗ್ಗೆ ತನಿಖೆ ಮುಂದುವರಿಸಲಾಗುತ್ತಿದೆ.
ಒಟ್ಟಿನಲ್ಲಿ, ಕೇವಲ 10 ಲಕ್ಷ ರೂಪಾಯಿ ಲಂಚ ಪ್ರಕರಣದ ತನಿಖೆ ಆರಂಭಿಸಿದ ಸಿಬಿಐಗೆ ಅಧಿಕಾರಿಯ ನಿವಾಸದಲ್ಲಿ 1.86 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳು ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಇದೀಗ ಪತ್ತೆಯಾಗಿರುವ ಆಸ್ತಿಗಳ ಮೂಲ, ಬ್ಯಾಂಕ್ ವಹಿವಾಟುಗಳು ಮತ್ತು ಇತರ ದಾಖಲೆಗಳ ಕುರಿತು ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಅಕ್ರಮ ಆಸ್ತಿ ವಿವರಗಳು ಹೊರಬರುತ್ತವೆಯೇ ಎಂಬ ಕುತೂಹಲ ಮೂಡಿದೆ.
Comments