Dec 13, 2025 Languages : ಕನ್ನಡ | English

ರಾಮೇಶ್ವರಂ ಕೆಫೆ ಹುಳ ಪ್ರಕರಣ: ದೂರು ಕೊಟ್ಟು ತಾವೇ ಸಂಕಷ್ಟಕ್ಕೆ ಸಿಲುಕಿಕೊಂಡ್ರಾ ಮಾಲೀಕರು?

ಬೆಂಗಳೂರು ಏರ್ಪೋರ್ಟ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್‌ನಲ್ಲಿ ಹುಳ ಸಿಕ್ಕ ಪ್ರಕರಣ ಇದೀಗ ದೊಡ್ಡ ತಿರುವು ಪಡೆದಿದೆ. ಜುಲೈ 24ರಂದು ಗುವಾಹಟಿಗೆ ಪ್ರಯಾಣ ಬೆಳೆಸುತ್ತಿದ್ದ ನಿಖಿಲ್ ಹಾಗೂ ಸ್ನೇಹಿತರು ಕೆಫೆಯಲ್ಲಿ ಪೊಂಗಲ್ ಮತ್ತು ಕಾಫಿ ಖರೀದಿಸಿದ್ದರು. ಆಹಾರದಲ್ಲಿ ಹುಳ ಸಿಕ್ಕಿದೆ ಎಂದು ಆರೋಪಿಸಿ, ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ರಾಮೇಶ್ವರಂ ಕೆಫೆ ಹುಳ ಪ್ರಕರಣ
ರಾಮೇಶ್ವರಂ ಕೆಫೆ ಹುಳ ಪ್ರಕರಣ

ಈ ಪ್ರಕರಣದ ನಂತರ ಕೆಫೆ ಮ್ಯಾನೇಜರ್ ಸುಮಂತ್, ಗ್ರಾಹಕರು 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣ ವೈಯಾಲಿಕಾವಲ್ ಠಾಣೆಗೆ ವರ್ಗಾವಣೆಗೊಂಡು ತನಿಖೆ ಮುಂದುವರಿಯಿತು. ಆದರೆ ತನಿಖೆಯಲ್ಲಿ ಬ್ಲಾಕ್‌ಮೇಲ್ ಮಾಡಿರುವವರು ಪೊಂಗಲ್ ಖರೀದಿಸಿದ ಗ್ರಾಹಕರಲ್ಲ, ಬೇರೊಬ್ಬ ಯುವಕ ಘಟನೆಯನ್ನು ಬಂಡವಾಳ ಮಾಡಿಕೊಂಡಿದ್ದಾನೆಂಬುದು ಬೆಳಕಿಗೆ ಬಂದಿದೆ.

ಈ ಬೆಳವಣಿಗೆಯ ನಂತರ, ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಸುಳ್ಳು ದೂರು ನೀಡಿ ಮಾನಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿರುವ ಪೊಲೀಸರು, ದೂರಿನಲ್ಲಿ ಉಲ್ಲೇಖಿಸಿರುವ ಫೋನ್ ನಂಬರ್‌ಗೂ ಗ್ರಾಹಕರಿಗೆ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬ್ಲಾಕ್‌ಮೇಲ್ ಕರೆ ಬಂದ ಸಮಯದಲ್ಲಿ ನಿಖಿಲ್ ಹಾಗೂ ಸ್ನೇಹಿತರು ಬೆಳಗ್ಗೆ 10.27ಕ್ಕೆ ವಿಮಾನದಲ್ಲಿದ್ದರು ಎಂಬುದೂ ತನಿಖೆಯಲ್ಲಿ ದೃಢಪಟ್ಟಿದೆ. ಇದರಿಂದ ಕೆಫೆ ಮಾಲೀಕರು ತಾವೇ ದೂರು ಕೊಟ್ಟು ತಾವೇ ಸಂಕಷ್ಟಕ್ಕೆ ಸಿಲುಕಿಕೊಂಡಂತಾಗಿದೆ.

ಸದ್ಯ ಮಾನಹಾನಿ ಸೇರಿದಂತೆ ಅಹಿತಕರ ಆಹಾರ ನೀಡಿದ ಆರೋಪದಡಿ ಏರ್ಪೋರ್ಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದಾರೆ. ಈ ಪ್ರಕರಣವು ಆಹಾರ ಸುರಕ್ಷತೆ, ಗ್ರಾಹಕರ ಹಕ್ಕುಗಳು ಹಾಗೂ ವ್ಯವಹಾರಿಕ ಹೊಣೆಗಾರಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖಾ ವರದಿ ಹಾಗೂ ನ್ಯಾಯಾಲಯದ ತೀರ್ಪು ನಿರ್ಣಾಯಕವಾಗಲಿದೆ.

Latest News