Dec 16, 2025 Languages : ಕನ್ನಡ | English

ರಸ್ತೆ ಬದಿ ನಿಂತ ಬೈಕ್ ಕದ್ದು ಸಿಕ್ಕಿಬಿದ್ದ ಖದೀಮರು!! ಬೆಂಗಳೂರಿಗರೇ ಹುಷಾರ್

ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿ-ಚಕ್ರ ವಾಹನ ಕಳವು ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ, ಒಟ್ಟು 13 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂಪಾಯಿಗಳಷ್ಟಾಗಿದೆ. 23/09/2025 ರಂದು ಬಂಡೇಪಾಳ್ಯದಲ್ಲಿ ವಾಸವಿರುವ ಫಿರಾದುದಾರರು ದೂರನ್ನು ಸಲ್ಲಿಸಿದ್ದು, ಅಗರ ಲೇಕ್ ಪಾರ್ಕ್‌ನ ಪ್ಲೇಓವರ್ ಕೆಳಗೆ ನಿಲ್ಲಿಸಿದ್ದ ತಮ್ಮ ದ್ವಿ-ಚಕ್ರ ವಾಹನವನ್ನು ಅಪರಿಚಿತರು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Representational Image
Representational Image

ತನಿಖೆಯನ್ನು ಮುಂದುವರೆಸಿದ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಕೆಲವರಿಂದ ಮಾಹಿತಿ ಪಡೆದು, 29/10/2025 ರಂದು ಬಿ.ಡಬ್ಲ್ಯೂ.ಎಸ್.ಎಸ್.ಬಿ ವಾಟರ್ ಟ್ಯಾಂಕ್ ಬಳಿ ಇಬ್ಬರನ್ನು ಎರಡು ವಾಹನಗಳೊಂದಿಗೆ ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನ ವಿವಿಧ ಕಡೆಗಳಲ್ಲಿ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡರು.

ಆರೋಪಿಗಳ ಮಾಹಿತಿಯ ಮೇರೆಗೆ, 30 ಮತ್ತು 31/10/2025 ರಂದು ಮಿಲಿಟರಿ ಕಾಂಪೌಂಡ್ ಹಾಗೂ ಸಿ.ಪಿ.ಡಬ್ಲ್ಯೂ ಕ್ವಾಟ್ರಸ್ ಪಕ್ಕದ ಖಾಲಿ ಜಾಗಗಳಿಂದ 11 ವಾಹನಗಳನ್ನು ವಶಪಡಿಸಿಕೊಂಡರು. ಈ ಮೂಲಕ ಒಟ್ಟು 13 ವಾಹನಗಳನ್ನು ವಶಪಡಿಸಿಕೊಂಡಿದ್ದು, 7 ಪ್ರಕರಣಗಳು ಹೆಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ಹಾಗೂ ತಿಲಕನಗರ, ಸುದ್ದಗುಂಟೆ ಪಾಳ್ಯ, ಮಡಿವಾಳ, ಬನ್ನೇರುಘಟ್ಟ, ಬೆಳ್ಳಂದೂರು, ರಾಜಾಜೀನಗರ ಠಾಣೆಗಳ ತಲಾ 1 ಪ್ರಕರಣ ಸೇರಿದಂತೆ 13 ಕಳವು ಪ್ರಕರಣಗಳು ಪತ್ತೆಯಾಗಿವೆ.

31/10/2025 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತ ಸಾರಾ ಪಾತೀಮಾ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ವಾಸುದೇವ್ ಹಾಗೂ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಪಿ.ಎಂ ನೇತೃತ್ವದ ತಂಡ ಈ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ.

Latest News