Dec 13, 2025 Languages : ಕನ್ನಡ | English

ಕೆಲಸ ಸಿಕ್ಕಿಲ್ಲವೆಂದು ಲ್ಯಾಪ್ ಟಾಪ್ ಕಳ್ಳತನ !! ಬೆಂಗಳೂರಿನ ಈ ಪಿಜಿಗಳೇ ಟಾರ್ಗೆಟ್

ಹೌದು ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ಘಟನೆ ಬೆಂಗಳೂರು ನಗರದ ಪಿಜಿಗಳಲ್ಲಿ ನಡೆದಿರುವುದಾಗಿ ಕಂಡು ಬಂದಿದೆ. ದಿನೇ ದಿನೇ ಕಳ್ಳತನದ ಪ್ರಕರಣಗಳು ಸಹ ಹೆಚ್ಚಾಗುತ್ತಿದ್ದು ಇದೀಗ ಈ ಸುದ್ದಿ ನಿಮ್ಮನ್ನು ಬೆಚ್ಚಿ ಬೀಳಿಸಲಿದೆ ನೋಡಿ. ಬೆಂಗಳೂರು ನಗರದಲ್ಲಿ ಪಿ.ಜಿ.ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 20 ಲ್ಯಾಪ್‌ಟಾಪ್‌ಗಳು ಹಾಗೂ 1 ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದು, ಮೌಲ್ಯ ಸುಮಾರು 12.20 ಲಕ್ಷ ರೂಪಾಯಿಗಳಷ್ಟಾಗಿದೆ.

ಲ್ಯಾಪ್ ಟಾಪ್ ಕಳ್ಳತನ
ಲ್ಯಾಪ್ ಟಾಪ್ ಕಳ್ಳತನ

ದಿನಾಂಕ 06/11/2025 ರಂದು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಟಿಎಂ 2ನೇ ಹಂತದಲ್ಲಿರುವ ಪಿರ್ಯಾದುದಾರರು ದೂರನ್ನು ಸಲ್ಲಿಸಿದ್ದರು. ಅವರು ಮಧ್ಯಾಹ್ನ ಪಿ.ಜಿ.ಗೆ ಬಂದು ಲ್ಯಾಪ್‌ಟಾಪ್‌ನ್ನು ರೂಮಿನಲ್ಲಿ ಇಟ್ಟು, ಚಿಲಕ ಹಾಕಿಕೊಂಡು ಬಟ್ಟೆ ತರಲು ತೆರಳಿದಾಗ, ಅಪರಿಚಿತರು ಲ್ಯಾಪ್‌ಟಾಪ್, ಚಾರ್ಜರ್ ಹಾಗೂ ₹5000 ನಗದನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ ಪೊಲೀಸರು ಪಿಜಿ ನಡೆಸುತ್ತಿದ್ದವರ ಮೂಲಕ ಮಾಹಿತಿ ಪಡೆದು ಸಿಸಿ ಕ್ಯಾಮರಾ ವೀಕ್ಷಣೆ ಮಾಡಿ, 13/11/2025 ರಂದು ಎನ್.ಎಸ್.ಪಾಳ್ಯದ ಹೋಟೆಲ್ ಬಳಿ ಆರೋಪಿಯನ್ನು ಬಂಧಿಸಿ, ಕಳುವಾದ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಂಡರು.

ಆರೋಪಿಯ ವಿಚಾರಣೆಯಲ್ಲಿ, ಆತನು ಸುಮಾರು ನಾಲ್ಕು ತಿಂಗಳ ಹಿಂದೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದಿದ್ದು, ಕೆಲಸ ಸಿಗದ ಕಾರಣ ಪಿ.ಜಿ.ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ತನಿಖೆಯನ್ನು ಮುಂದುವರೆಸಿ, 14/11/2025 ರಂದು ಆತನ ವಾಸದ ಪಿ.ಜಿ. ಹಾಗೂ ಸ್ನೇಹಿತನಿಂದ 19 ಲ್ಯಾಪ್‌ಟಾಪ್‌ಗಳು ಮತ್ತು 1 ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡರು. ಒಟ್ಟಾರೆ 20 ಲ್ಯಾಪ್‌ಟಾಪ್‌ಗಳು ಹಾಗೂ 1 ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದು, 12.20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಹಿಂಪಡೆದು ಕೊಂಡಿದ್ದಾರೆ.  

ಈ ಬಂಧನದಿಂದ ಮೈಕೋಲೇಔಟ್ ಪೊಲೀಸ್ ಠಾಣೆಯ 2 ಪ್ರಕರಣಗಳು, ತಿಲಕನಗರ, ಎಸ್.ಜಿ.ಪಾಳ್ಯ ಹಾಗೂ ಹುಳಿಮಾವು ಠಾಣೆಗಳ ತಲಾ 1 ಪ್ರಕರಣ ಸೇರಿದಂತೆ ಒಟ್ಟು 5 ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ 15 ಲ್ಯಾಪ್‌ಟಾಪ್‌ಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಯನ್ನು 14/11/2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಾರಾ ಪಾತೀಮಾ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಶಿವಶಂಕರ್ ರೆಡ್ಡಿ ಹಾಗೂ ಇನ್ಸ್ಪೆಕ್ಟರ್ ನಟರಾಜು.ಡಿ.ಎನ್ ನೇತೃತ್ವದ ತಂಡ ಯಶಸ್ವಿಯಾಗಿ ಪತ್ತೆಹಚ್ಚಿದೆ. ಈ ಪ್ರಕರಣವು ನಗರದಲ್ಲಿ ಪಿ.ಜಿ.ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಎಚ್ಚರಿಕೆ ಗಂಟೆ ಆಗಿದೆ.

Latest News