ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿರುವ ಯುದ್ಧವು ಈಗ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಇರಾನ್ ತನ್ನ ಅತಿ ದೊಡ್ಡ ಮತ್ತು ರಹಸ್ಯವಾದ ಭೂಗತ ಕ್ಷಿಪಣಿ ನಗರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಇಡೀ ಜಗತ್ತನ್ನ ಬೆಚ್ಚಿಬೀಳಿಸಿದೆ. ಕಿಲೋಮೀಟರ್‌ಗಟ್ಟಲೆ ಉದ್ದವಿರುವ ಈ ಸುರಂಗಗಳಲ್ಲಿ ಸಾಲು ಸಾಲು ಶಾಹೆದ್ ಡ್ರೋನ್‌ಗಳು, ಅತ್ಯಾಧುನಿಕ ಕ್ಷಿಪಣಿಗಳನ್ನ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಇದು ಇರಾನ್‌ನ ಸೇನಾ ಸಾಮರ್ಥ್ಯದ ದರ್ಶನ ಮಾಡಿಸುವುದರ ಜೊತೆಗೆ, ಯುದ್ಧವು ಕೇವಲ ಭೂಮಿ ಮೇಲಲ್ಲ, ಭೂಮಿಯ ಒಳಗೂ ಸಿದ್ಧವಾಗಿದೆ ಎಂಬ ಸಂದೇಶ ನೀಡಿದೆ.
ಈ ಯುದ್ಧದ ಅತ್ಯಂತ ಕುತೂಹಲಕಾರಿ ಮತ್ತು ಆತಂಕಕಾರಿ ವಿಷಯವೆಂದರೆ ಅದರ 'ವೆಚ್ಚ'. ಇರಾನ್ ಬಳಸುತ್ತಿರುವ 'ಶಾಹೆದ್' ಡ್ರೋನ್‌ಗಳ ತಯಾರಿಕಾ ವೆಚ್ಚ ಕೇವಲ ಕೆಲವು ಸಾವಿರ ಡಾಲರ್‌ಗಳು ಮಾತ್ರ. ಆದರೆ, ಇವುಗಳನ್ನು ಆಕಾಶದಲ್ಲೇ ಹೊಡೆದುರುಳಿಸಲು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಬಳಸುತ್ತಿರುವ 'ಪೇಟ್ರಿಯಾಟ್' (Patriot) ಕ್ಷಿಪಣಿಗಳ ಬೆಲೆ ಒಂದಕ್ಕೆ ಅಂದಾಜು $4 ರಿಂದ $5 ಮಿಲಿಯನ್ (ಸುಮಾರು ₹33 ರಿಂದ ₹41 ಕೋಟಿ).
ಇನ್ನು ಶಕ್ತಿಶಾಲಿ ಥಾಡ್ (THAAD) ಕ್ಷಿಪಣಿ ಬ್ಯಾಟರಿಗಳ ಬೆಲೆ ಒಂದಕ್ಕೆ ಸುಮಾರು $13 ಮಿಲಿಯನ್ (ಸುಮಾರು ₹108 ಕೋಟಿ) ಆಗುತ್ತದೆ. ಅಂದರೆ, ಇರಾನ್ ಎಸೆಯುವ ಒಂದು ಅಗ್ಗದ ಡ್ರೋನ್ ಅನ್ನು ತಡೆಯಲು ಅಮೆರಿಕ ಮತ್ತು ಇಸ್ರೇಲ್ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಇದು ದೀರ್ಘಕಾಲದ ಯುದ್ಧದಲ್ಲಿ ಅಮೆರಿಕದಂತಹ ದೊಡ್ಡ ರಾಷ್ಟ್ರದ ಆರ್ಥಿಕತೆಗೂ ಪೆಟ್ಟು ನೀಡಬಲ್ಲದು.
ಭದ್ರತಾ ತಜ್ಞರಾದ ಕಿರ್ಸ್ಟಿ ಗ್ರಿಕೊ ಅವರ ವಿಶ್ಲೇಷಣೆಯ ಪ್ರಕಾರ, ಇರಾನ್ ತನ್ನತ್ತ ಎಸೆದ ಶೇ. 92ರಷ್ಟು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುಎಇ ಯಶಸ್ವಿಯಾಗಿ ತಡೆದಿದೆ. ಆದರೆ ಈ ರಕ್ಷಣೆಗೆ ಆದ ವೆಚ್ಚ ಮಾತ್ರ ಭಯಾನಕವಾಗಿದೆ. ಯುಎಇ ಮೇಲೆ ದಾಳಿ ಮಾಡಲು ಇರಾನ್ ಸುಮಾರು $11 ರಿಂದ $27 ಮಿಲಿಯನ್ ಖರ್ಚು ಮಾಡಿದ್ದರೆ, ಆ ದಾಳಿಯನ್ನು ತಡೆಯಲು ಯುಎಇ ಸುಮಾರು $253 ಮಿಲಿಯನ್‌ನಿಂದ $759 ಮಿಲಿಯನ್ (ಸುಮಾರು ₹2,112 ಕೋಟಿಯಿಂದ ₹6,337 ಕೋಟಿ) ವರೆಗೆ ಹಣ ವ್ಯಯಿಸಿದೆ. ಅಂದರೆ, ದಾಳಿ ಮಾಡುವವನಿಗಿಂತ ರಕ್ಷಿಸಿಕೊಳ್ಳುವವನು ಸುಮಾರು 30 ಪಟ್ಟು ಹೆಚ್ಚು ಹಣವನ್ನು ವೆಚ್ಚ ಮಾಡಬೇಕಾಗಿದೆ.
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಭಾಗಶಃ ಹಿಡಿತ ಸಾಧಿಸಿದ್ದರಿಂದ, ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $82 ದಾಟಿದೆ. ಇದು ಕಳೆದ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಅಮೆರಿಕ ಈಗಾಗಲೇ ಇರಾನ್‌ನ 2,000ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಮಾಡಿದೆ. ಈ ಯುದ್ಧದಲ್ಲಿ ಇದುವರೆಗೆ ಸುಮಾರು 800 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಯುದ್ಧವು ರಾಜತಾಂತ್ರಿಕವಾಗಿಯೂ ದೊಡ್ಡ ಬಿರುಕು ಸೃಷ್ಟಿಸಿದೆ. ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಇರಾನ್ ಮೇಲಿನ ದಾಳಿಗೆ ತಮ್ಮ ದೇಶದ ಮಿಲಿಟರಿ ನೆಲೆಗಳನ್ನು ಬಳಸಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಡೊನಾಲ್ಡ್ ಟ್ರಂಪ್, ಸ್ಪೇನ್ ಜೊತೆಗಿನ ವ್ಯಾಪಾರ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಇದು ಯುರೋಪ್ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲೂ ಬಿಕ್ಕಟ್ಟು ತಂದಿದೆ.
Iran’s Revolutionary Guard unveils a new underground “missile city”.
— Dr. Fundji M Benedict-VL (@Fundji3) March 26, 2025
(Open Source Intel on X) pic.twitter.com/7awRLJv048
ಈ ಯುದ್ಧವು ಕೇವಲ ಕ್ಷಿಪಣಿಗಳ ಸಂಘರ್ಷವಾಗಿ ಉಳಿಯದೆ, ಆರ್ಥಿಕ ಸಾಮರ್ಥ್ಯದ ಪರೀಕ್ಷೆಯಾಗಿ ಬದಲಾಗಿದೆ. ಯಾರು ಹೆಚ್ಚು ಕಾಲ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಉಳಿಸಿಕೊಳ್ಳಬಲ್ಲರೋ ಅವರೇ ಈ ಯುದ್ಧದಲ್ಲಿ ಮೇಲುಗೈ ಸಾಧಿಸಲಿದ್ದಾರೆ.