ಬೆಂಗಳೂರು ಸೆಂಟ್ರಲ್ ಜೈಲ್ ಸದಾ ಅಕ್ರಮಗಳಿಗೆ ಹೆಸರುವಾಸಿಯಾಗಿತ್ತು ಆದರೆ ಇದೀಗ ಪ್ರಶಂಶೆಗೆ ಗುರಿಯಾಗಿದೆ. ಮಹಿಳಾ ಕೈದಿಗಳಿಂದ ತಯಾರಿಸಲಾದ ಕರಕುಶಲ ವಸ್ತುಗಳು, ಮಾಲೆಗಳು ಹಾಗೂ ಬೇಕರಿ ತಿನಿಸುಗಳು ದೇಶದ ಮಟ್ಟದಲ್ಲಿ ಡಿಮ್ಯಾಂಡ್ ಗಳಿಸುತ್ತಿವೆ.
ಹೌದು, ವಿಶಾಖಪಟ್ನಂನಲ್ಲಿ ನಡೆದ ಕಾರಾಗೃಹ ಇಲಾಖೆಯ ಕಾರ್ಯಾಗಾರದಲ್ಲಿ ಕರ್ನಾಟಕ ಸೆಂಟ್ರಲ್ ಜೈಲ್‌ನ ಉತ್ಪನ್ನಗಳು ಪ್ರದರ್ಶನಗೊಂಡವು. ಈ ವೇಳೆ ಆಂಧ್ರ ಪ್ರದೇಶದ ಹೋಮ್ ಮಿನಿಸ್ಟರ್ ಅನಿತಾ ಹಾಗೂ ಕೇಂದ್ರ ಸಚಿವ ಬಂಡಿ ಸಂಜಯ್ ಮಹಿಳಾ ಕೈದಿಗಳ ತಯಾರಿಕೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. “ನಮ್ಮ ರಾಜ್ಯದ ಕಾರಾಗೃಹದಲ್ಲೂ ಇಂತಹ ತರಬೇತಿ ನೀಡಬೇಕು” ಎಂದು ಕಾರ್ಯಕ್ರಮದ ಬಳಿಕ ಬಂಡಿ ಸಂಜಯ್ ಅವರು ಘೋಷಿಸಿದರು.
ಮಹಿಳಾ ಕೈದಿಗಳಿಂದ ತಯಾರಿಸಲಾದ ಮಾಲೆಗಳು, ಟವಲ್, ಕರ್ಚಿಪ್, ಬ್ರೆಶೀಟ್‌ಗಳು ಹಾಗೂ ಬೇಕರಿ ತಿನಿಸುಗಳು ಎಲ್ಲರ ಗಮನ ಸೆಳೆದವು. ಬೇಕರಿ ತಿನಿಸುಗಳ ಸ್ವಾದಕ್ಕೆ ಆಂಧ್ರ ಹೋಮ್ ಮಿನಿಸ್ಟರ್ ಮಾರುಹೋದರೆ, ಕರಕುಶಲ ವಸ್ತುಗಳ ಗುಣಮಟ್ಟಕ್ಕೆ ಕೇಂದ್ರ ಸಚಿವರಿಂದ ಶಹಬ್ಬಾಸ್ ಎಂಬ ಮಾತುಗಳು ಸಹ ಕೇಳಿ ಬಂದವು.
ಕಾರಾಗೃಹ ಇಲಾಖೆಯ ಕಾರ್ಯಾಗಾರದಲ್ಲಿ ದೇಶದ ಎಲ್ಲಾ ರಾಜ್ಯಗಳ ಕೈಗಾರಿಕಾ ಉತ್ಪನ್ನಗಳನ್ನು ಹೋಲಿಕೆ ಮಾಡಿದಾಗ, ಬೆಂಗಳೂರು ಸೆಂಟ್ರಲ್ ಜೈಲ್‌ನ ಉತ್ಪನ್ನಗಳು ಅತ್ಯುತ್ತಮವೆಂದು ಅಭಿಪ್ರಾಯ ವ್ಯಕ್ತವಾಯಿತು. ಒಟ್ಟು 200 ಮಹಿಳಾ ಹಾಗೂ ಸಜಾಬಂಧಿ ಕೈದಿಗಳು ಕೈಗಾರಿಕಾ ಉತ್ಪನ್ನ ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಲಾಯಿತು.
ಇನ್ಮುಂದೆ ಸರ್ಕಾರಿ ಕಟ್ಟಡಗಳ ಬಳಿ ಜೈಲಿನ ಬೇಕರಿ ತಿಂಡಿಗಳನ್ನು ಮಾರಾಟ ಮಾಡಲು ತಯಾರಿ ನಡೆಯುತ್ತಿದೆ. ವಿಧಾನಸೌಧ, ಹೈಕೋರ್ಟ್, ವಿಕಾಸಸೌಧ ಹಾಗೂ ಎಮ್.ಎಸ್. ಬಿಲ್ಡಿಂಗ್ ಬಳಿ ವ್ಯಾನ್‌ಗಳ ಮೂಲಕ ಮಾರಾಟ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಒಟ್ಟಾರೆ, ಸೆಂಟ್ರಲ್ ಜೈಲ್‌ನ ಮಹಿಳಾ ಕೈದಿಗಳ ಕೈಗಾರಿಕಾ ಉತ್ಪನ್ನಗಳು ಕೇವಲ ಪ್ರಶಂಶೆಗೆ ಗುರಿಯಾಗಿಲ್ಲ, ಅವರ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿವೆ. ಸಮಾಜದಲ್ಲಿ ಪುನರ್ವಸತಿ ಹಾಗೂ ಸ್ವಾವಲಂಬನೆಯ ಸಂದೇಶವನ್ನು ಈ ಕಾರ್ಯವು ನೀಡುತ್ತಿದೆ.