Apr 26, 2026 Languages : ಕನ್ನಡ | English

ವಿನ್ನರ್ ಗಿಲ್ಲಿ ನಟ – ‘ಸೂಪರ್ ಹಿಟ್’ ಸಿನಿಮಾ ಫೆ.27ರಂದು ರಿಲೀಸ್!!

‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟ ಅಭಿನಯದ ಸಿನಿಮಾ ‘ಸೂಪರ್ ಹಿಟ್’ ಫೆಬ್ರವರಿ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವುದಕ್ಕೂ ಮುನ್ನವೇ ಗಿಲ್ಲಿ ನಟ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಇದೀಗ ಅವರಿಗೆ ಬಂದಿರುವ ಅಪಾರ ಜನಪ್ರಿಯತೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಗಿಲ್ಲಿ ನಟನ ಮೊದಲ ಪ್ರಮುಖ ಸಿನಿಮಾ
ಗಿಲ್ಲಿ ನಟನ ಮೊದಲ ಪ್ರಮುಖ ಸಿನಿಮಾ

ಇತ್ತೀಚೆಗೆ ‘ಸೂಪರ್ ಹಿಟ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗಿಲ್ಲಿ ನಟ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ನಿರ್ಮಾಪಕ ಜಿ. ಉಮೇಶ್ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಟೀಸರ್ ಮೂಲಕ ಅಧಿಕೃತವಾಗಿ ಫೆ.27ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಘೋಷಿಸಲಾಯಿತು.

ಈ ಚಿತ್ರವನ್ನು ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಾನಂದ್, ಕಥೆ ಬರೆಯಲು ಆರಂಭಿಸಿದ ದಿನದಿಂದಲೂ ಸಿನಿಮಾ ಸಲೀಸಾಗಿ ಮೂಡಿ ಬಂದಿದ್ದು, ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕೊರತೆ ಆಗದಂತೆ ಚಿತ್ರವನ್ನು ನಿರ್ಮಾಣ ಮಾಡಿದ ನಿರ್ಮಾಪಕ ಜಿ. ಉಮೇಶ್ ಅವರ ಸಿನಿಮಾಪ್ರೇಮವನ್ನು ಅವರು ಮುಕ್ತವಾಗಿ ಕೊಂಡಾಡಿದರು. ಸಿನಿಮಾ ಮೂಡಿಬಂದ ರೀತಿ ಬಗ್ಗೆ ತಮಗೆ ಅಪಾರ ಹೆಮ್ಮೆ ಇದೆ ಎಂದು ಹೇಳಿದ ವಿಜಯಾನಂದ್, ‘ಸೂಪರ್ ಹಿಟ್’ ಖಂಡಿತ ಹಿಟ್ ಆಗಲಿದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು. ಇದರ ಜೊತೆಗೆ, ಈಗಾಗಲೇ ಹೊಸ ಒಟಿಟಿ ಸಂಸ್ಥೆಯೊಂದು ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ ಎಂಬ ಸಿಹಿ ಸುದ್ದಿಯನ್ನೂ ಹಂಚಿಕೊಂಡರು. ಅಂದರೆ, ಸಿನಿಮಾ ಬಿಡುಗಡೆಯಾಗುವ ಮೊದಲೇ ಒಟಿಟಿ ಡಿಮ್ಯಾಂಡ್ ಶುರುವಾಗಿದೆ.

ನಟ ಸಾಧುಕೋಕಿಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಿಲ್ಲಿ ನಟರ ಅಭಿನಯ ಹಾಗೂ ಅವರ ಸರಳ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಿಲ್ಲಿಯ ಜನಪ್ರಿಯತೆ ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದು ಸಂಗೀತ ನಿರ್ದೇಶಕ ಹಾಗೂ ನಟ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಅವರು ಈ ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯ ಬರೆದು, ಒಂದು ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ‘ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್’ ಬ್ಯಾನರ್ ಅಡಿಯಲ್ಲಿ ಜಿ. ಉಮೇಶ್ ಅವರು ‘ಸೂಪರ್ ಹಿಟ್’ ಸಿನಿಮಾ ನಿರ್ಮಿಸಿದ್ದಾರೆ. 

ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿ ನಾಯಕರು, ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್.ಡಿ. ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಟಿನಿಸ್ ಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ಬಳಗ ಸಿನಿಮಾದಲ್ಲಿದೆ. ಗಿಲ್ಲಿ ನಟನ ಮೊದಲ ಪ್ರಮುಖ ರಿಲೀಸ್ ಆಗಿರುವ ಕಾರಣ, ‘ಸೂಪರ್ ಹಿಟ್’ ಸಿನಿಮಾ ಮೇಲೆ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ

Latest News