ಮಂಡ್ಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮತ್ತೊಂದು ಬಣ್ಣ ತುಂಬಿದ್ದು ಬಿಗ್ ಬಾಸ್ ಗಿಲ್ಲಿ ನಟನ ಕ್ರೇಜ್ ಎನ್ನಬಹುದು. ಹೌದು ಹಬ್ಬದ ಸಂಭ್ರಮದ ನಡುವೆ ಅಭಿಮಾನಿಗಳಲ್ಲಿ ಗಿಲ್ಲಿ ಫೀವರ್ ಹೆಚ್ಚುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಸಂಕ್ರಾಂತಿ ಹಬ್ಬದ ಆಚರಣೆಯ ಜೊತೆಗೆ ಗಿಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಗಿಲ್ಲಿ ಅಭಿಮಾನಿಗಳ ಹುಚ್ಚು ಹವೆಗೆ ಸಾಕ್ಷಿಯಾದ ಘಟನೆ ನಿನ್ನೆ ಮಂಡ್ಯದಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಹಸುಗಳಿಗೆ ಶೃಂಗಾರ ಮಾಡುತ್ತಿದ್ದ ಅಭಿಮಾನಿಗಳು, ಒಂದು ಗೂಳಿಯ ಮೇಲೆ ಗಿಲ್ಲಿ ನಟನ ಭಾವಚಿತ್ರವನ್ನು ಬರೆಸಿದ್ದಾರೆ. ಈ ಚಿತ್ರವನ್ನು ನೋಡಿದ ಅಭಿಮಾನಿಗಳು ತಮ್ಮ ಭಕ್ತಿಯನ್ನೇ ತೋರಿಸುವಂತೆ ತೆಂಗಿನಕಾಯಿ ನಿವಾಳಿಸಿ ದೃಷ್ಟಿ ತೆಗೆದಿದ್ದಾರೆ. ಅಲ್ಲದೆ, ಗಿಲ್ಲಿ ಚಿತ್ರಕ್ಕೆ ಹೂವು ಹಾಗೂ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಮತ್ತಷ್ಟು ಗಾಢಗೊಳಿಸಿದ್ದಾರೆ.
ಮಂಡ್ಯದಲ್ಲಿ ಗಿಲ್ಲಿ ಅಭಿಮಾನಿಗಳ ಈ ರೀತಿಯ ಕ್ರೇಜ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. "ಎಲ್ಲರೂ ಸೈಲೆಂಟ್ ಆಗಿರಬೇಕು, ಗೆಲ್ಲೋದು ಗಿಲ್ಲಿನೇ" ಎಂಬ ಘೋಷಣೆ ಕೂಗುತ್ತಿರುವ ಅಭಿಮಾನಿಗಳ ಉತ್ಸಾಹವು ಸ್ಥಳೀಯವಾಗಿ ದೊಡ್ಡ ಸಂಭ್ರಮಕ್ಕೆ ಕಾರಣವಾಯಿತು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ನಡೆ, ಮಾತು, ಆಟ ಎಲ್ಲವೂ ಅಭಿಮಾನಿಗಳ ಮನ ಗೆದ್ದಿರುವುದರಿಂದ, ಈ ರೀತಿಯ ಹುಚ್ಚು ಹವಾ ಕಾಣಿಸುತ್ತಿದೆ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸಾಮಾನ್ಯವಾಗಿ ಎತ್ತು-ಗೂಳಿಗಳಿಗೆ ಶೃಂಗಾರ ಮಾಡುವ ಪದ್ಧತಿ ಇದ್ದರೂ, ಈ ಬಾರಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಅದರಲ್ಲಿ ಸೇರಿಸಿಕೊಂಡಿರೋದು ವಿಶೇಷ. ಇದು ಅಭಿಮಾನಿಗಳ ಪ್ರೀತಿಯ ತೀವ್ರತೆಯನ್ನು ತೋರಿಸುವುದರ ಜೊತೆಗೆ, ಬಿಗ್ ಬಾಸ್ ಕಾರ್ಯಕ್ರಮದ ಜನಪ್ರಿಯತೆಯನ್ನೂ ಪ್ರತಿಬಿಂಬಿಸುತ್ತದೆ.
ಮಂಡ್ಯದಲ್ಲಿ ಗಿಲ್ಲಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭಿಮಾನಿಗಳ ಈ ರೀತಿಯ ಭಾವನಾತ್ಮಕ ಅಭಿವ್ಯಕ್ತಿ ಸ್ಥಳೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಗಿಲ್ಲಿ ನಟನ ಹವಾ ಮತ್ತಷ್ಟು ಬಲವಾಗಿ ವ್ಯಕ್ತವಾಗಿದ್ದು, ಅಭಿಮಾನಿಗಳ ಹೃದಯದಲ್ಲಿ ಗಿಲ್ಲಿ ಗೆಲ್ಲಬೇಕು ಎಂಬ ಆಶಯ ಸ್ಪಷ್ಟವಾಗಿ ಇದೀಗ ಗೋಚರಿಸಿದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ, ಮಂಡ್ಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಗಿಲ್ಲಿ ಕ್ರೇಜ್ ಹೊಸ ಬಣ್ಣ ತುಂಬಿದ್ದು, ಅಭಿಮಾನಿಗಳ ಹುಚ್ಚು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.