Mar 11, 2026 Languages : ಕನ್ನಡ | English

ಹೋಟೆಲ್ ಉದ್ಯಮಕ್ಕೆ 'ಗ್ಯಾಸ್' ಗಂಡಾಂತರ - ಸಿಲಿಂಡರ್ ಅಭಾವಕ್ಕೆ ಕರ್ನಾಟಕದ ಸಾವಿರಾರು ಹೋಟೆಲ್‌ಗಳು ಬಂದ್!!

ಕರ್ನಾಟಕದಾದ್ಯಂತ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ರಾಜ್ಯದ ಹೋಟೆಲ್ ಉದ್ಯಮವು ಹಿಂದೆಂದೂ ಕಾಣದಂತಹ ಸಂಕಷ್ಟಕ್ಕೆ ಸಿಲುಕಿದೆ. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಮೈಸೂರು ಹಾಗೂ ಬೆಳಗಾವಿಯಂತಹ ಪ್ರಮುಖ ನಗರಗಳಲ್ಲಿ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದಾರೆ.

ದೋಸೆ, ಪುರಿ ಮೆನು ಲಿಸ್ಟ್‌ನಿಂದ ಔಟ್! ಸಿಲಿಂಡರ್ ಸಿಗದೆ ಕಂಗಾಲಾದ ಹೋಟೆಲ್ ಮಾಲೀಕರು
ದೋಸೆ, ಪುರಿ ಮೆನು ಲಿಸ್ಟ್‌ನಿಂದ ಔಟ್! ಸಿಲಿಂಡರ್ ಸಿಗದೆ ಕಂಗಾಲಾದ ಹೋಟೆಲ್ ಮಾಲೀಕರು

ಅಡುಗೆ ಮಾಡಲು ಇಂಧನವೇ ಇಲ್ಲದ ಕಾರಣ ಅನೇಕ ಹೋಟೆಲ್‌ಗಳು ಈಗಾಗಲೇ ಬಾಗಿಲು ಹಾಕುತ್ತಿವೆ. ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಈ ಉದ್ಯಮ ಈಗ ಕುಸಿತದ ಹಾದಿಯಲ್ಲಿದ್ದು, ಕಾರ್ಮಿಕರು "ನಮ್ಮ ಕುಟುಂಬದ ಗತಿ ಏನು?" ಎಂದು ಕಣ್ಣೀರು ಹಾಕುವಂತಾಗಿದೆ.

ಹುಬ್ಬಳ್ಳಿಯಲ್ಲಿ ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ ಮಾಲೀಕರು ಅಡುಗೆ ತಯಾರಿಕೆಯಲ್ಲಿ ಕಡಿತ ಮಾಡಿದ್ದಾರೆ. ಹೆಚ್ಚು ಗ್ಯಾಸ್ ಬಳಸುವ ದೋಸೆ ಮತ್ತು ಪುರಿಯಂತಹ ಜನಪ್ರಿಯ ತಿಂಡಿಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಕೇವಲ ಸೀಮಿತ ಪ್ರಮಾಣದ ಆಹಾರವನ್ನು ಮಾತ್ರ ತಯಾರಿಸಿ ಹೋಟೆಲ್ ನಡೆಸಲಾಗುತ್ತಿದೆ.

ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತಿರುವ ಉದ್ಯಮಿಗಳು, "ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಸರ್ಕಾರವೇ ಹೋಟೆಲ್‌ಗಳನ್ನು ವಹಿಸಿಕೊಂಡು ನಡೆಸಲಿ" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಗ್ಯಾಸ್ ಸಿಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೆಳಗಾವಿಯಲ್ಲಿ ಕೇವಲ ಮೂರೇ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 500 ರಿಂದ 600 ರೂಪಾಯಿಗಳಷ್ಟು ಏರಿಕೆಯಾಗಿದೆ. ಮೊದಲು 1,600 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಬೆಲೆ ಈಗ 2,200 ರೂಪಾಯಿಗೆ ತಲುಪಿದೆ. ದುಬಾರಿ ಹಣ ನೀಡಲು ಸಿದ್ಧವಿದ್ದರೂ ಮಾರುಕಟ್ಟೆಯಲ್ಲಿ ಸಿಲಿಂಡರ್‌ಗಳು ಲಭ್ಯವಿಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ.

ವ್ಯಾಪಾರ ಕುಸಿಯುತ್ತಿರುವ ಕಾರಣ ಅನಿವಾರ್ಯವಾಗಿ ಹೋಟೆಲ್ ಮಾಲೀಕರು ತಮ್ಮ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದ್ದಾರೆ. ಇದರಿಂದಾಗಿ ಹೋಟೆಲ್ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ.

ರಾಜ್ಯದಲ್ಲಿ ಕೋಟ್ಯಂತರ ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೋಟೆಲ್ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ದೊಡ್ಡ ಹೋಟೆಲ್‌ಗಳು ತಮಗಿರುವ ದಾಸ್ತಾನು ಮುಗಿಯುವವರೆಗೆ ಮಾತ್ರ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ. ಆದರೆ ಸಣ್ಣ ಹೋಟೆಲ್‌ಗಳು ಈಗಾಗಲೇ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮರ್ಪಕ ಗ್ಯಾಸ್ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ. ಈ ಬಿಕ್ಕಟ್ಟು ಕೇವಲ ಉದ್ಯಮಕ್ಕಲ್ಲದೆ, ಹೊರಗಿನ ಆಹಾರವನ್ನು ನಂಬಿರುವ ಸಾಮಾನ್ಯ ಜನರಿಗೂ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

Latest News