Jan 24, 2026 Languages : ಕನ್ನಡ | English

ಗಿಲ್ಲಿನ ಮನೆಗೆ ಕರೆಸಿ ದುಡ್ಡು ಕೊಟ್ಟ ಕಿಚ್ಚ ಸುದೀಪ್ ಹೇಳಿದ ಮಾತುಗಳೇನು ? - ಗಿಲ್ಲಿ ನಟ ಭಾವುಕ

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ವಿಜೇತರಾಗಿ ಹೊರಹೊಮ್ಮಿದ ಗಿಲ್ಲಿ ನಟ , ತನ್ನ ಗೆಲುವಿನ ನಂತರ ಬಹುಮಾನ ಹಣದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ತೆರೆ ಎಳೆದಿದ್ದಾರೆ. “ಬಿಗ್‌ಬಾಸ್‌ ಗೆದ್ದ 50 ಲಕ್ಷ ರೂಪಾಯಿ ಬಹುಮಾನ ಖಂಡಿತವಾಗಿಯೂ ಸಿಕ್ಕೆ ಸಿಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಗ್‌ಬಾಸ್‌ ವೇದಿಕೆಯಿಂದ ಗಿಲ್ಲಿಗೆ ಸಿಕ್ಕ ಜೀವನ ಪಾಠ
ಬಿಗ್‌ಬಾಸ್‌ ವೇದಿಕೆಯಿಂದ ಗಿಲ್ಲಿಗೆ ಸಿಕ್ಕ ಜೀವನ ಪಾಠ

ಫಿನಾಲೆ ವೇದಿಕೆಯಲ್ಲೇ ನಿರೂಪಕ ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್‌ ಅವರು ಗಿಲ್ಲಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ಗಿಲ್ಲಿ ಸ್ಪಷ್ಟನೆ ನೀಡುತ್ತಾ, “ಸುದೀಪಣ್ಣ ಫೈನಲ್‌ ದಿನವೇ 10 ಲಕ್ಷ ಕೊಡ್ತೀನಿ ಅಂತ ಹೇಳಿದ್ರು. ಅವರು ಕೊಟ್ಟ ಮಾತು ಉಳಿಸಿಕೊಂಡರು. ತಮ್ಮ ಮನೆಗೆ ಕರೆಸಿ ಆತ್ಮೀಯವಾಗಿ ಮಾತನಾಡಿಸಿ, ಆ ಹಣವನ್ನು ಸ್ವತಃ ನನ್ನ ಕೈಗೆ ನೀಡಿ ಶುಭ ಹಾರೈಸಿದರು” ಎಂದು ಹೇಳಿದ್ದಾರೆ.

ಗಿಲ್ಲಿ, ಫೈನಲ್‌ ವೇದಿಕೆಯಲ್ಲಿನ ಆ ಕ್ಷಣಗಳನ್ನು ಜೀವನದಲ್ಲಿ ಮರೆಯಲಾಗದ ಅನುಭವವೆಂದು ವಿವರಿಸಿದ್ದಾರೆ. ಸುದೀಪ್‌ ಅವರು ನೀಡಿದ ಅಮೂಲ್ಯ ಸಲಹೆಗಳನ್ನು ನೆನಪಿಸಿಕೊಂಡು, “ನಾನು ಮತ್ತು ರಕ್ಷಿತಾ ಶೆಟ್ಟಿ ಉಳಿದಿದ್ದಾಗ, ಯಾರೇ ಗೆದ್ದರೂ ಸರಿಯೇ. ಆದರೆ ಗೆಲುವಿನ ನಂತರ ಅದನ್ನು ತಲೆಗೆತ್ತಿಕೊಳ್ಳಬೇಡಿ. ತಗ್ಗಿ ಬಗ್ಗಿ ನಡೆಯಿರಿ. ಮುಂದೆ ಇನ್ನಷ್ಟು ಸವಾಲುಗಳು ಬರುತ್ತವೆ. ಪ್ರತಿಯೊಂದು ಹೆಜ್ಜೆ ಎಚ್ಚರಿಕೆಯಿಂದ ಇಡಿ” ಎಂದು ಹೇಳಿದರು ಎಂದು ಗಿಲ್ಲಿ ಹಂಚಿಕೊಂಡಿದ್ದಾರೆ.

ಹೆಸರು, ಹಣ ಮತ್ತು ಜನಪ್ರಿಯತೆ ಬಂದಾಗಲೂ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಸುದೀಪ್‌ ಅವರು ತಂದೆಯಂತೆ ಬುದ್ಧಿಮಾತು ಹೇಳಿ ಕಳಿಸಿದರೆಂದು ಗಿಲ್ಲಿ ಹೇಳಿದ್ದಾರೆ. “ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡಿ ನಡೆಯಬೇಕು. ಗೆಲುವಿನ ಕ್ಷಣದಲ್ಲಿ ಹಿಗ್ಗದೆ, ಸೋಲಿನ ಸಮಯದಲ್ಲಿ ಕುಗ್ಗದೆ ಮುಂದೆ ಸಾಗಬೇಕು ಎಂಬ ಅವರ ಮಾತುಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದಿವೆ” ಎಂದು ಗಿಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಗಿಲ್ಲಿ, ಬಿಗ್‌ಬಾಸ್‌ ವೇದಿಕೆಯಿಂದ ಸಿಕ್ಕ ಗೆಲುವು ಕೇವಲ ಟ್ರೋಫಿ ಅಥವಾ ಹಣವಲ್ಲ, ಬದುಕಿನ ಪಾಠವೂ ಹೌದು ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್‌ ಅವರ ಬೆಂಬಲ, ಮಾರ್ಗದರ್ಶನ ಮತ್ತು ಆಶೀರ್ವಾದ ತನ್ನ ಮುಂದಿನ ಬದುಕು ಹಾಗೂ ವೃತ್ತಿಜೀವನಕ್ಕೆ ದಿಟ್ಟ ಶಕ್ತಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest News