Mar 11, 2026 Languages : ಕನ್ನಡ | English

6 ಪುಟಗಳ ಡೆತ್‌ನೋಟ್ ಬಿಚ್ಚಿಟ್ಟ ಭೀಕರ ಸತ್ಯ - ಪ್ರೀತಿ ಹೆಸರಲ್ಲಿ ಕಿರುಕುಳ ನೀಡಿದ ಫಜಲ್ ಬಂಧನ!!

ಮುಂಬೈನ ಆಂಟೋಪ್ ಹಿಲ್ ಪ್ರದೇಶದಲ್ಲಿ ದಂತ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (MDS) ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯುವತಿ ಸ್ತುತಿ ಸೋನಾವಾನೆ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ವರದಿಯಾಗಿದೆ.

ವೈದ್ಯಕೀಯ ವಿದ್ಯಾರ್ಥಿನಿ ಬಲಿ ಪಡೆದ 'ನಂಬಿಕೆ ದ್ರೋಹ' ಮತ್ತು 'ಮಾನಸಿಕ ಹಿಂಸೆ'
ವೈದ್ಯಕೀಯ ವಿದ್ಯಾರ್ಥಿನಿ ಬಲಿ ಪಡೆದ 'ನಂಬಿಕೆ ದ್ರೋಹ' ಮತ್ತು 'ಮಾನಸಿಕ ಹಿಂಸೆ'

ಈ ಸಾವು ಕೇವಲ ವೈಯಕ್ತಿಕ ನಿರ್ಧಾರವಾಗಿರದೆ, ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆದ ಮಾನಸಿಕ ಕಿರುಕುಳದ ಫಲಶ್ರುತಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ತುತಿ ತನ್ನ ಮನೆಯಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದರು. ಘಟನೆಯ ದಿನ ಬೆಳಗ್ಗೆ 11 ಗಂಟೆಯಾದರೂ ಸ್ತುತಿ ತನ್ನ ಕೋಣೆಯಿಂದ ಹೊರಬರದಿದ್ದಾಗ ಆತಂಕಗೊಂಡ ಪೋಷಕರು ಬಾಗಿಲು ಒಡೆದು ನೋಡಿದಾಗ, ಆಕೆ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಸ್ತುತಿ ಬರೆದಿದ್ದ ಆರು ಪುಟಗಳ ಸುದೀರ್ಘ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಈ ಪತ್ರದಲ್ಲಿ ತನ್ನ ಸಾವಿಗೆ ಕಾರಣವಾದ ಅಂಶಗಳನ್ನು ಆಕೆ ವಿವರವಾಗಿ ಬರೆದಿದ್ದಾಳೆ. ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಫಜಲ್ ಮೊಹಮ್ಮದ್ ಖಾನ್ ಎಂಬ ಯುವಕ ತನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಈ ಇಬ್ಬರೂ ಸುಮಾರು ಒಂದು ವರ್ಷದ ಹಿಂದೆ ಒಂದು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಕಾಲಕ್ರಮೇಣ ಇವರ ಸ್ನೇಹ ಪ್ರೇಮ ಸಂಬಂಧಕ್ಕೆ ತಿರುಗಿತ್ತು. ಆದರೆ, ಈ ಸಂಬಂಧದಲ್ಲಿ ಸ್ತುತಿ ಅನುಭವಿಸಿದ ಮಾನಸಿಕ ವೇದನೆ ಆಕೆಯನ್ನು ಸಾವಿನ ದವಡೆಗೆ ತಳ್ಳಿದೆ. ಪತ್ರದಲ್ಲಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಫಜಲ್ ಮೊಹಮ್ಮದ್ ಖಾನ್‌ನನ್ನು ಬಂಧಿಸಿದ್ದಾರೆ.

ಪೋಷಕರು ನೀಡಿರುವ ದೂರಿನ ಅನ್ವಯ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿನಿ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವಾದ ಆ ಕಹಿ ಘಟನೆಗಳೇನು ಎಂಬುದನ್ನು ಪೊಲೀಸರು ಈಗ ಆಳವಾಗಿ ತನಿಖೆ ಮಾಡುತ್ತಿದ್ದಾರೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಆಗುವ ಪರಿಚಯಗಳು ಕೆಲವೊಮ್ಮೆ ಎಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ತುತಿಯ ಸಾವಿನಿಂದ ಆಕೆಯ ಕುಟುಂಬ ಮತ್ತು ವೈದ್ಯಕೀಯ ಲೋಕ ಕಂಬನಿ ಮಿಡಿದಿದೆ. ಸದ್ಯಕ್ಕೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಆರು ಪುಟಗಳ ಪತ್ರದಲ್ಲಿರುವ ಪ್ರತಿಯೊಂದು ಸಾಲುಗಳ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.