CSK ಪ್ಲೇಯಿಂಗ್ 11 ಬದಲಾವಣೆ: ಕಾರ್ತಿಕ್ ಶರ್ಮಾಗೆ ಕೊಕ್, ಡಿವಾಲ್ಡ್ ಬ್ರೆವಿಸ್ ಇನ್ - ಧೋನಿ ಬರ್ತಾರಾ ಮುಂದಿನ ಪಂದ್ಯಕ್ಕೆ?

ಐಪಿಎಲ್ 2026ರ ಸೀಸನ್ ಚೆನ್ನೈ ತಂಡಕ್ಕೆ ಅಂದುಕೊಂಡಷ್ಟು ಚೆನ್ನಾಗಿ ಶುರುವಾಗಿಲ್ಲ. ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಋತುರಾಜ್ ಗಾಯಕ್ವಾಡ್ ಪಡೆ ಈಗ ಗೆಲುವಿನ ಹಾದಿಗೆ ಮರಳಲು ಹವಣಿಸುತ್ತಿದೆ. ಏಪ್ರಿಲ್ 11, ಶನಿವಾರದಂದು ಚೆನ್ನೈನ ಚೆಪಾಕ್ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಈ ಬಾರಿ ತಂಡದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದೆ.

ಐಪಿಎಲ್ 2026: ಧೋನಿ ಎಂಟ್ರಿ ಕೊಡ್ತಾರಾ? CSK vs DC ಪಂದ್ಯ ವಿಶ್ಲೇಷಣೆ!! | Photo Credit: CSK/IANS
ಐಪಿಎಲ್ 2026: ಧೋನಿ ಎಂಟ್ರಿ ಕೊಡ್ತಾರಾ? CSK vs DC ಪಂದ್ಯ ವಿಶ್ಲೇಷಣೆ!! | Photo Credit: CSK/IANS

ಯುವ ಆಟಗಾರ ಕಾರ್ತಿಕ್ ಶರ್ಮಾ ಕಳಪೆ ಫಾರ್ಮ್‌ನಿಂದಾಗಿ ಹೊರಬೀಳುವ ಸಾಧ್ಯತೆ ಇದ್ದರೆ, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ.

ಧೋನಿ ಆಡ್ತಾರಾ? ಇನ್ನು ಮುಗಿಯದ ಸಸ್ಪೆನ್ಸ್!

ಎಲ್ಲರ ಕಣ್ಣು ಇರೋದು ನಮ್ಮ 'ತಲಾ' ಮಹೇಂದ್ರ ಸಿಂಗ್ ಧೋನಿ ಮೇಲೆ. ಸ್ನಾಯು ಸೆಳೆತದ ಕಾರಣದಿಂದ ಮೊದಲ ಮೂರು ಪಂದ್ಯಗಳಿಂದ ದೂರವಿದ್ದ 44 ವರ್ಷದ ಧೋನಿ, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರದ ಪಂದ್ಯಕ್ಕೆ ಅವರು ಫಿಟ್ ಆಗಲಿದ್ದಾರೆಯೇ ಎಂಬುದು ಇನ್ನು ಕುತೂಹಲವಾಗಿಯೇ ಉಳಿದಿದೆ. ಒಂದು ವೇಳೆ ಫಿಟ್ ಆದರೆ ಅವರು ಪ್ಲೇಯಿಂಗ್ ಎಲೆವನ್‌ನಲ್ಲಿ ಇರುತ್ತಾರೋ ಅಥವಾ 'ಇಂಪ್ಯಾಕ್ಟ್ ಸಬ್' ಆಗಿ ಬರ್ತಾರೋ ಅಂತ ಕಾದು ನೋಡಬೇಕಿದೆ.

CSK ಸಂಭಾವ್ಯ ಪ್ಲೇಯಿಂಗ್ XI ಹೇಗಿರಲಿದೆ?

1. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ಓಪನರ್): ಸ್ಟಾರ್ ಬ್ಯಾಟರ್ ಸಂಜು ಇಂದಿನ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಅವರು ಅಬ್ಬರಿಸಿಲ್ಲ, ಹಾಗಾಗಿ ಚೆಪಾಕ್ ಅಂಗಳದಲ್ಲಿ ಸ್ಫೋಟಕ ಆರಂಭ ನೀಡುವ ಜವಾಬ್ದಾರಿ ಅವರ ಮೇಲಿದೆ.

2. ಋತುರಾಜ್ ಗಾಯಕ್ವಾಡ್ (ನಾಯಕ): ಕ್ಯಾಪ್ಟನ್ ಋತುರಾಜ್ ಮೇಲೆ ಈಗ ತಂಡವನ್ನು ಗೆಲ್ಲಿಸುವ ದೊಡ್ಡ ಒತ್ತಡವಿದೆ. ಸಂಜು ಜೊತೆ ಸೇರಿ ಇವರು ಪವರ್ ಪ್ಲೇನಲ್ಲಿ ರನ್ ಚಚ್ಚಿದರೆ ಸಿಎಸ್‌ಕೆಗೆ ಗೆಲುವು ಸುಲಭ.

3. ಆಯುಷ್ ಮ್ಹಾತ್ರೆ: ಈ ಸೀಸನ್‌ನ ಯುವ ಸೆನ್ಸೇಷನ್ ಆಯುಷ್, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇವರ ಭಯವಿಲ್ಲದ ಆಟ ಡೆಲ್ಲಿ ಬೌಲರ್‌ಗಳಿಗೆ ತಲೆನೋವಾಗುವುದರಲ್ಲಿ ಸಂಶಯವಿಲ್ಲ.

4. ಸರ್ಫರಾಜ್ ಖಾನ್: ನಾಲ್ಕನೇ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಮಾಡಲಿದ್ದಾರೆ. ಈಗಾಗಲೇ ಕೆಲವು ಇಂಪ್ರೆಸಿವ್ ಇನ್ನಿಂಗ್ಸ್ ಆಡಿರುವ ಇವರು ತಂಡದ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.

5. ಡಿವಾಲ್ಡ್ ಬ್ರೆವಿಸ್: ಗಾಯದಿಂದ ಚೇತರಿಸಿಕೊಂಡಿರುವ 'ಬೇಬಿ ಎಬಿ' ಖ್ಯಾತಿಯ ಬ್ರೆವಿಸ್, ₹14.20 ಕೋಟಿ ಬೆಲೆಯ ಕಾರ್ತಿಕ್ ಶರ್ಮಾ ಬದಲಿಗೆ ತಂಡಕ್ಕೆ ಬರಲಿದ್ದಾರೆ. ಬ್ರೆವಿಸ್ ಬಂದರೆ ಸಿಎಸ್‌ಕೆ ಬ್ಯಾಟಿಂಗ್ ಲೈನ್ ಅಪ್ ಗೆ ಮತ್ತಷ್ಟು ಬಲ ಸಿಗಲಿದೆ.

6. ಶಿವಂ ದುಬೆ: ಸ್ಪಿನ್ ಬೌಲರ್‌ಗಳನ್ನು ದಂಡಿಸುವುದರಲ್ಲಿ ದುಬೆ ಎತ್ತಿದ ಕೈ. ಈ ಪಂದ್ಯದಲ್ಲೂ ಇವರು ಸಿಎಸ್‌ಕೆಯ ಎನ್‌ಫೋರ್ಸರ್ ಆಗಿ ಕೆಲಸ ಮಾಡಲಿದ್ದಾರೆ. ಪಾರ್ಟ್ ಟೈಮ್ ಬೌಲಿಂಗ್ ಕೂಡ ಇವರ ಪ್ಲಸ್ ಪಾಯಿಂಟ್.

7. ಜೇಮೀ ಓವರ್ಟನ್: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬ್ಯಾಲೆನ್ಸ್ ನೀಡುವ ಜೇಮೀ, ತಂಡದ ಪ್ರಮುಖ ಆಲ್ ರೌಂಡರ್. ಇವರು ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

8. ಎಂ.ಎಸ್. ಧೋನಿ / ಬೌಲರ್: ಧೋನಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದರೆ ಎಂಟನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಧೋನಿ ಬಂದರೆ ಸ್ಟೇಡಿಯಂನಲ್ಲಿ ಹಳದಿ ಅಲೆ ಎದ್ದೇಳುವುದು ಗ್ಯಾರಂಟಿ.

9. ಮ್ಯಾಟ್ ಹೆನ್ರಿ: ನ್ಯೂಜಿಲೆಂಡ್ ವೇಗಿ ಹೆನ್ರಿ ಹೊಸ ಬಾಲ್‌ನಲ್ಲಿ ಸ್ವಿಂಗ್ ಮಾಡುವಲ್ಲಿ ಎಕ್ಸ್‌ಪರ್ಟ್. ಡೆಲ್ಲಿಯ ಆರಂಭಿಕ ವಿಕೆಟ್ ಪಡೆಯುವ ಜವಾಬ್ದಾರಿ ಇವರ ಮೇಲಿದೆ.

10. ನೂರ್ ಅಹ್ಮದ್: ಅಫ್ಘಾನಿಸ್ತಾನದ ಈ ಮಿಸ್ಟರಿ ಸ್ಪಿನ್ನರ್ ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮೋಡಿ ಮಾಡಲಿದ್ದಾರೆ. ಇವರ ಬೌಲಿಂಗ್ ಅರ್ಥ ಮಾಡಿಕೊಳ್ಳುವುದು ಡೆಲ್ಲಿ ಬ್ಯಾಟರ್‌ಗಳಿಗೆ ಅಷ್ಟು ಸುಲಭವಲ್ಲ.

11. ಖಲೀಲ್ ಅಹ್ಮದ್: ಎಡಗೈ ವೇಗಿಯಾಗಿ ಖಲೀಲ್ ತಂಡಕ್ಕೆ ವೆರೈಟಿ ನೀಡಲಿದ್ದಾರೆ. ಪವರ್ ಪ್ಲೇನಲ್ಲಿ ಇವರ ಸ್ವಿಂಗ್ ಬೌಲಿಂಗ್ ತಂಡಕ್ಕೆ ಆಸರೆಯಾಗಲಿದೆ.

ಇಂಪ್ಯಾಕ್ಟ್ ಸಬ್ ಅಸ್ತ್ರ: ಪ್ರಶಾಂತ್ ವೀರ್, ರಾಮಕೃಷ್ಣ ಘೋಷ್ ಅಥವಾ ಶ್ರೇಯಸ್ ಗೋಪಾಲ್ ಅವರನ್ನು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲು ಸಿಎಸ್‌ಕೆ ಪ್ಲಾನ್ ಮಾಡಿದೆ.

ಶನಿವಾರ ಚೆಪಾಕ್‌ನಲ್ಲಿ 'ಹಳದಿ ಹಬ್ಬ' ಶುರುವಾಗಲಿದ್ದು, ಗೆಲುವಿನ ಖಾತೆ ತೆರೆಯಲು ಸಿಎಸ್‌ಕೆ ರೆಡಿಯಾಗಿದೆ. ಧೋನಿ ಎಂಟ್ರಿ ಕೊಡುತ್ತಾರಾ ಅನ್ನೋದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ನಿಮ್ಮ ಪ್ರಕಾರ ಯಾರು ಗೆಲ್ಲಬಹುದು? ಕಾಮೆಂಟ್ ಮಾಡಿ ತಿಳಿಸಿ.

Latest News