May 9, 2026 Languages : ಕನ್ನಡ | English

ಕೆಕೆಆರ್ ಇತಿಹಾಸದಲ್ಲೇ ಶತಕ ಸಿಡಿಸಿ ಯಾರು ಮಾಡದ ದಾಖಲೆ ಮಾಡಿದ ಒಪನರ್ ಫಿನ್ ಅಲೆನ್ - ಗ್ರೇಟ್ ಎಂದ ಫ್ಯಾನ್ಸ್!!

ಐಪಿಎಲ್ 2026ರ ಕಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೆಕೆಆರ್ ಸ್ಫೋಟಕ ಗೆಲುವು ಸಾಧಿಸುವುದರ ಜೊತೆಗೆ, ತಂಡದ ಓಪನರ್ ಫಿನ್ ಅಲೆನ್ ಅವರು ಐಪಿಎಲ್ ಇತಿಹಾಸದಲ್ಲೇ ಕೆಕೆಆರ್ ಪರ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ಬರೆದಿದ್ದಾರೆ.

ಡೆಲ್ಲಿ ವಿರುದ್ಧ ಅಲೆನ್ ಅಬ್ಬರ: 18 ವರ್ಷಗಳ ದಾಖಲೆ ಬ್ರೇಕ್;
ಡೆಲ್ಲಿ ವಿರುದ್ಧ ಅಲೆನ್ ಅಬ್ಬರ: 18 ವರ್ಷಗಳ ದಾಖಲೆ ಬ್ರೇಕ್;

ಡೆಲ್ಲಿ ಬ್ಯಾಟರ್‌ಗಳ ವೈಫಲ್ಯ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡ ಡೆಲ್ಲಿ ಕೇವಲ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ತಂಡಕ್ಕೆ ಇದು ಸುಲಭದ ಗುರಿಯಾಗಿದ್ದರೂ, ಪಂದ್ಯದ ಅಸಲಿ ಕಿಕ್ ಶುರುವಾಗಿದ್ದೇ ಚೇಸಿಂಗ್ ವೇಳೆ!

ಫಿನ್ ಅಲೆನ್ ಅಬ್ಬರ.. ಶತಕದ ಸನಿಹದಲ್ಲಿ ಹೈಡ್ರಾಮಾ!

144 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ಪರ ಫಿನ್ ಅಲೆನ್ ಆರಂಭದಿಂದಲೇ ಸಿಕ್ಸರ್-ಬೌಂಡರಿಗಳ ಮಳೆ ಸುರಿಸಿದರು. ಪಂದ್ಯದ 15ನೇ ಓವರ್ ಶುರುವಾದಾಗ ಕೆಕೆಆರ್ ಗೆಲುವಿನ ಹೊಸ್ತಿಲಲ್ಲಿತ್ತು. ಅಚ್ಚರಿಯ ವಿಷಯವೆಂದರೆ, ತಂಡ ಗೆಲ್ಲಲು ಕೇವಲ 3 ರನ್‌ಗಳು ಬೇಕಿತ್ತು ಮತ್ತು ಅತ್ತ ಅಪ್ಪಟ ಬ್ಯಾಟರ್ ಫಿನ್ ಅಲೆನ್ 96 ರನ್ ಗಳಿಸಿ ತಮ್ಮ ಚೊಚ್ಚಲ ಶತಕಕ್ಕೆ ಕೇವಲ 4 ರನ್‌ಗಳ ದೂರದಲ್ಲಿದ್ದರು.

ಕ್ಯಾಮರೂನ್ ಗ್ರೀನ್ ಅವರ ದೊಡ್ಡ ಮನಸ್ಸು

ಈ ಹಂತದಲ್ಲಿ ಸ್ಟ್ರೈಕ್‌ನಲ್ಲಿದ್ದವರು ಆಸ್ಟ್ರೇಲಿಯಾದ ಆಲ್-ರೌಂಡರ್ ಕ್ಯಾಮರೂನ್ ಗ್ರೀನ್. ಮುಖೇಶ್ ಕುಮಾರ್ ಅವರ 15ನೇ ಓವರ್‌ನ ಮೊದಲ ಎಸೆತ ಎದುರಿಸಿದ ಗ್ರೀನ್, ತಾವೇ ದೊಡ್ಡ ಶಾಟ್ ಹೊಡೆದು ಪಂದ್ಯ ಮುಗಿಸಬಹುದಿತ್ತು. ಆದರೆ, ತಮ್ಮ ಜೊತೆಗಾರನ ಶತಕಕ್ಕಾಗಿ ಗ್ರೀನ್ ಅವರು ಕೇವಲ ಒಂದು ರನ್ ತೆಗೆದು ಸ್ಟ್ರೈಕ್ ಅನ್ನು ಅಲೆನ್‌ಗೆ ಬಿಟ್ಟುಕೊಟ್ಟರು. ಅಷ್ಟೇ ಅಲ್ಲದೆ, "ಬಾಲ್ ಸಿಕ್ಸರ್ ಹೊಡೆದು ಸೆಂಚುರಿ ಪೂರೈಸು" ಎಂದು ಅಲೆನ್ ಬೆನ್ನುತಟ್ಟಿದರು.

ಗ್ರೀನ್ ಹೇಳಿದಂತೆಯೇ ಫಿನ್ ಅಲೆನ್ ಎರಡನೇ ಎಸೆತವನ್ನೇ ಮುಗಿಲೆತ್ತರದ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಅಲೆನ್ ಅವರ ಶತಕವೂ ಪೂರೈಕೆಯಾಯಿತು ಮತ್ತು ಕೆಕೆಆರ್ ಗೆಲುವಿನ ನಗೆ ಬೀರಿತು. ಅಚ್ಚರಿಯೆಂದರೆ ಅಲೆನ್ ಶತಕ ಸಿಡಿಸಿದಾಗ ಅವರಿಗಿಂತ ಹೆಚ್ಚಾಗಿ ಕ್ಯಾಮರೂನ್ ಗ್ರೀನ್ ಸಂಭ್ರಮಿಸಿದ್ದು ಮೈದಾನದಲ್ಲಿದ್ದವರ ಮನಗೆದ್ದಿತು.

18 ವರ್ಷಗಳ ದಾಖಲೆ ಬ್ರೇಕ್!

ಫಿನ್ ಅಲೆನ್ ಅವರ ಈ ಶತಕ ಕೆಕೆಆರ್ ಪಾಲಿಗೆ ಅತ್ಯಂತ ವಿಶೇಷವಾದುದು. ಯಾಕೆಂದರೆ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕೆಕೆಆರ್ ಪರ ಚೇಸಿಂಗ್ ಮಾಡುವಾಗ ಯಾರೂ ಶತಕ ಬಾರಿಸಿರಲಿಲ್ಲ.

  • 2008ರಲ್ಲಿ ಬ್ರೆಂಡಮ್ ಮೆಕ್ಕಲಮ್
  • 2023ರಲ್ಲಿ ವೆಂಕಟೇಶ್ ಅಯ್ಯರ್
  • 2024ರಲ್ಲಿ ಸುನಿಲ್ ನರೈನ್

ಈ ಮೂವರೂ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಆದರೆ ಪಂದ್ಯದ ಎರಡನೇ ಇನ್ನಿಂಗ್ಸ್ (Chasing) ನಲ್ಲಿ ಶತಕ ಸಿಡಿಸಿದ ಮೊದಲ ಕೆಕೆಆರ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಈಗ ಫಿನ್ ಅಲೆನ್ ಪಾತ್ರರಾಗಿದ್ದಾರೆ.

ಅಲೆನ್ ಕೇವಲ 47 ಎಸೆತಗಳಲ್ಲಿ 5 ಫೋರ್ ಹಾಗೂ ಬರೋಬ್ಬರಿ 10 ಸಿಕ್ಸರ್‌ಗಳ ನೆರವಿನಿಂದ ಈ ಐತಿಹಾಸಿಕ ಶತಕ ಪೂರೈಸಿದರು. ಈ ಗೆಲುವಿನಿಂದ ಕೆಕೆಆರ್ ಪ್ಲೇಆಫ್ ಹಾದಿ ಈಗ ಮತ್ತಷ್ಟು ಸುಗಮವಾಗಿದೆ. 

Latest News