ಕಿಂಗ್ ಕೊಹ್ಲಿ ಐತಿಹಾಸಿಕ ರೆಕಾರ್ಡ್ - ರೋಹಿತ್, ಧೋನಿಯನ್ನು ಹಿಂದಿಕ್ಕಿ ಐಪಿಎಲ್ ಹಿಸ್ಟರಿಯಲ್ಲೇ ಮಹಾ ದಾಖಲೆ!!

ಕ್ರಿಕೆಟ್ ಪ್ರಿಯರೇ ಸಿಕ್ರೆಟ್ ಏನಂದ್ರೆ, ನಮ್ಮ ರನ್ ಮಷಿನ್, ಕಿಂಗ್ ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿ ದೊಡ್ಡ ಮಹಾ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ನಾಳೆ, ಅಂದರೆ ಮೇ 26 ರಂದು ನಡೆಯಲಿರುವ ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಇಡೀ ಕ್ರಿಕೆಟ್ ಲೋಕವೇ ಅವರತ್ತ ತಿರುಗಿ ನೋಡಲಿದೆ. ಯಾಕಂದ್ರೆ, ಅಂದು ಕೊಹ್ಲಿ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಮ್ಯಾಚ್ ಆಡಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ರೇಸ್‌ನಲ್ಲಿ ಅವರು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ನಮ್ಮ ತಲಾ ಎಂ.ಎಸ್. ಧೋನಿ ಇಬ್ಬರನ್ನೂ ಹಿಂದಿಕ್ಕಲಿದ್ದಾರೆ.

ರೋಹಿತ್-ಧೋನಿಯನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ನಂಬರ್ ಒನ್! | Photo Credit: https://www.instagram.com/virat.kohli/?hl=en
ರೋಹಿತ್-ಧೋನಿಯನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ನಂಬರ್ ಒನ್! | Photo Credit: https://www.instagram.com/virat.kohli/?hl=en

ಸದ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ತಲಾ 281 ಐಪಿಎಲ್ ಪಂದ್ಯಗಳನ್ನಾಡಿ ಸಮಬಲದಲ್ಲಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಸೆಕೆಂಡ್ ರೌಂಡ್‌ಗೆ ಕ್ವಾಲಿಫೈ ಆಗದ ಕಾರಣ ರೋಹಿತ್ ಶರ್ಮಾ ಅವರ ಐಪಿಎಲ್ ಜರ್ನಿ ಲೀಗ್ ಹಂತದಲ್ಲೇ ಮುಗಿದುಹೋಗಿದೆ. ಇತ್ತ ನಮ್ಮ ಆರ್ಸಿಬಿ ಕ್ವಾಲಿಫೈಯರ್ ತಲುಪಿರುವುದರಿಂದ ಕೊಹ್ಲಿಗೆ ರೋಹಿತ್‌ರನ್ನು ದಾಟಿ ಮುಂದೆ ಹೋಗಲು ಬಂಪರ್ ಚಾನ್ಸ್ ಸಿಕ್ಕಿದೆ. ನಾಳೆ ಗುಜರಾತ್ ವಿರುದ್ಧ ಕೊಹ್ಲಿ ಆಡಲಿರೋದು ಬರೋಬ್ಬರಿ 282ನೇ ಮ್ಯಾಚ್! ವಿಶೇಷ ಏನೆಂದರೆ, ಈ ರೆಕಾರ್ಡ್ ಮುರಿಯಲು ಕನಿಷ್ಠ ಐಪಿಎಲ್ 2027 ರವರೆಗಾದರೂ ಯಾರ ಕೈಯಲ್ಲೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಸೀಸನ್‌ನಿಂದ ಧೋನಿ ಔಟ್; ಕೊಹ್ಲಿಗೆ ಪ್ಲಸ್ ಪಾಯಿಂಟ್!

ನಿಮಗೆ ಗೊತ್ತಿರಲಿ, ಐಪಿಎಲ್ 2026 ರ ಸೀಸನ್ ಶುರುವಾಗುವುದಕ್ಕಿಂತ ಮುಂಚೆ ಅತ್ಯಂತ ಹೆಚ್ಚು ಪಂದ್ಯಗಳನ್ನಾಡಿದ ಲಿಸ್ಟ್‌ನಲ್ಲಿ ಸಿಎಸ್‌ಕೆಯ ಎಂ.ಎಸ್. ಧೋನಿ ಅವರೇ ನಂಬರ್ ಒನ್ ಸ್ಥಾನದಲ್ಲಿದ್ದರು. ಧೋನಿ ಒಟ್ಟು 278 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ದುರದೃಷ್ಟವಶಾತ್, ಈ ಬಾರಿ ಟೂರ್ನಿ ಆರಂಭವಾಗುವ ಮೊದಲೇ ಕಾಲಿನ ಸ್ನಾಯು ಸೆಳೆತದ (ಮಸಲ್ ಇಂಜುರಿ) ಸಮಸ್ಯೆಯಿಂದಾಗಿ ಧೋನಿ ಇಡೀ ಸೀಸನ್‌ನಲ್ಲಿ ಒಂದೇ ಒಂದು ಮ್ಯಾಚ್ ಆಡಲಾಗದೆ ಬೆಂಚ್ ಕಾಯಬೇಕಾಗಿ ಬಂತು. ಹೀಗಾಗಿ ಧೋನಿ ಈ ರೇಸ್‌ನಲ್ಲಿ ಕೊಂಚ ಹಿಂದೆ ಬಿದ್ದರು.

ಇನ್ನು ಆರ್ಸಿಬಿ ಈ ಬಾರಿ ಫೈನಲ್ ತಲುಪಲು ಕೊಹ್ಲಿ ಕನಿಷ್ಠ 2 ಪಂದ್ಯಗಳನ್ನಾದರೂ ಆಡಲೇಬೇಕಾಗುತ್ತದೆ. ಒಂದು ವೇಳೆ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್ಸಿಬಿ ಸೋತು, ಆಮೇಲೆ ಎರಡನೇ ಕ್ವಾಲಿಫೈಯರ್ ಆಡಿ ಫೈನಲ್ ತಲುಪಿದರೆ ಕೊಹ್ಲಿ ಈ ಸೀಸನ್‌ನಲ್ಲಿ ಇನ್ನು ಮೂರು ಮ್ಯಾಚ್ ಆಡಲಿದ್ದಾರೆ.

2008 ರಿಂದ ಶುರುವಾದ ಕಿಂಗ್ ಜರ್ನಿ;

ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ನಡುವಿನ ಬಾಂಡಿಂಗ್ ಇವತ್ತು ನೆನ್ನೆಯದಲ್ಲ. 2008 ರ ಮೊದಲ ಐಪಿಎಲ್ ಸೀಸನ್‌ನಿಂದಲೂ ಕೊಹ್ಲಿ ಬೆಂಗಳೂರು ತಂಡದ ಜೊತೆಯಲ್ಲೇ ಇದ್ದಾರೆ. ಕೊಹ್ಲಿ ಅವರಲ್ಲಿದ್ದ ಬೆಂಕಿ ಬ್ಯಾಟಿಂಗ್ ಪ್ರತಿಭೆಯನ್ನು ಗುರುತಿಸಿದ್ದ ಆರ್ಸಿಬಿ ಮ್ಯಾನೇಜ್ಮೆಂಟ್, 2011 ರ ಮೆಗಾ ಹರಾಜಿಗಿಂತ ಮುಂಚೆ ಇಡೀ ಟೀಮ್‌ನಲ್ಲಿ ರಿಟೇನ್ ಮಾಡಿಕೊಂಡ ಏಕೈಕ ಪ್ಲೇಯರ್ ಅಂದ್ರೆ ಅದು ವಿರಾಟ್ ಮಾತ್ರ. ಅದಾದ ಬಳಿಕ 2011 ರಲ್ಲಿ ಮೊದಲ ಬಾರಿಗೆ ಆರ್ಸಿಬಿ ನಾಯಕತ್ವ ವಹಿಸಿಕೊಂಡ ಕೊಹ್ಲಿ, 2013 ರಿಂದ ಫುಲ್ ಟೈಮ್ ಕ್ಯಾಪ್ಟನ್ ಆದರು.

ನೆನಪಿಸಿಕೊಳ್ಳಿ, 2016 ರ ಸೀಸನ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ ತಲುಪಿತ್ತಾದರೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. ಆದರೆ ಆ ಸೀಸನ್‌ನಲ್ಲಿ ಕೊಹ್ಲಿ ಬರೋಬ್ಬರಿ 973 ರನ್ ಚಚ್ಚಿ 'ಆರೆಂಜ್ ಕ್ಯಾಪ್' ಗೆದ್ದಿದ್ದು ಇಂದಿಗೂ ಒಂದು ಅನ್-ಬ್ರೇಕಬಲ್ ರೆಕಾರ್ಡ್. 2021 ರ ನಂತರ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟರಾದರೂ ತಂಡದ ಮೇಲಿನ ಪ್ರೀತಿ ಕಮ್ಮಿ ಆಗ್ಲಿಲ್ಲ. ಕೊನೆಗೂ ಕಳೆದ ವರ್ಷ, ಅಂದರೆ 2025 ರಲ್ಲಿ ರಜತ್ ಪಾಟೀದಾರ್ ಕ್ಯಾಪ್ಟನ್ಸಿಯಲ್ಲಿ ಆರ್ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಾಗ ವಿರಾಟ್ ಕೊಹ್ಲಿ ಅವರ ವರ್ಷಗಳ ಕಾಲದ ಐಪಿಎಲ್ ಕಪ್ ಗೆಲ್ಲುವ ಕನಸು ನನಸಾಯಿತು.

ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಯ ರೆಕಾರ್ಡ್ಸ್!

ವಿರಾಟ್ ಕೊಹ್ಲಿ ಹೆಸರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಐಪಿಎಲ್‌ನಲ್ಲೂ ಬೆಟ್ಟದಷ್ಟು ದಾಖಲೆಗಳಿವೆ:

ರನ್‌ಗಳ ಸರದಾರ್ - 281 ಪಂದ್ಯಗಳಿಂದ ಬರೋಬ್ಬರಿ 9218 ರನ್ ಗಳಿಸಿರೋ ವಿರಾಟ್, ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ರನ್ ಸ್ಕೋರರ್. ಇವರನ್ನು ಬಿಟ್ಟರೆ ಬೇರೆ ಯಾವ ಬ್ಯಾಟರ್ ಕೂಡ ಇನ್ನು 7500 ರನ್ ಗಡಿ ದಾಟಿಲ್ಲ!

ಶತಕಗಳ ಸರದಾರ - ಐಪಿಎಲ್‌ನಲ್ಲಿ ಕೊಹ್ಲಿ ಹೆಸರಲ್ಲಿ ಬರೋಬ್ಬರಿ 9 ಸೆಂಚುರಿ ಹಾಗೂ 67 ಹಾಫ್ ಸೆಂಚುರಿಗಳಿವೆ.

ಒನ್ ಮ್ಯಾನ್ ಒನ್ ಫ್ರಾಂಚೈಸಿ - ಐಪಿಎಲ್ ಆರಂಭವಾದಾಗಿನಿಂದ ಇಂದಿನವರೆಗೂ ಒಂದೇ ಒಂದು ಬಾರಿ ಬೇರೆ ಟೀಮ್‌ಗೆ ಹೋಗದೆ, ಕೇವಲ ಒಂದೇ ಫ್ರಾಂಚೈಸಿಯನ್ನು (RCB) ಪ್ರತಿನಿಧಿಸುತ್ತಿರುವ ಜಗತ್ತಿನ ಏಕೈಕ ಕ್ರಿಕೆಟರ್ ನಮ್ಮ ಕಿಂಗ್ ಕೊಹ್ಲಿ.

ನಾಳೆ ನಡೆಯಲಿರೋ ಬಿಗ್ ಮ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಇತಿಹಾಸ ಸೃಷ್ಟಿಸೋದಂತೂ ಪಕ್ಕಾ ಆಗಿದೆ. ಈ ಮ್ಯಾಚ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ ಮತ್ತೊಂದು ಬಿಗ್ ಸೆಂಚುರಿ ಬರುತ್ತಾ? ನಮ್ಮ ಆರ್ಸಿಬಿ ಈ ಸೀಸನ್‌ನಲ್ಲೂ ಕಪ್ ಗೆಲ್ಲುತ್ತಾ ಇಲ್ವಾ ಅನ್ನೋದನ್ನ ನಮಗೆ ಕಾಮೆಂಟ್ ಮಾಡಿ ತಿಳಿಸಿ!

Latest News