ಐಪಿಎಲ್ ಇತಿಹಾಸದಲ್ಲೇ ಇಂಥದ್ದೊಂದು ದಿನ ಬರುತ್ತೆ ಅಂತ ಯಾವ ಸಿಎಸ್‌ಕೆ ಫ್ಯಾನ್ ಕೂಡ ಅನ್ಕೊಂಡಿರಲಿಲ್ಲ! ಐದು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಪ್ ಗೆದ್ದುಕೊಟ್ಟಿರೋ ನಮ್ಮ ತಲಾ, ಎಂ.ಎಸ್. ಧೋನಿ (MS Dhoni) ಇಡೀ ಐಪಿಎಲ್ ಸೀಸನ್‌ನಲ್ಲಿ ಒಂದೇ ಒಂದು ಬಾಲ್ ಕೂಡ ಆಡದೇ ಈ ಬಾರಿಯ ಅವರ ಐಪಿಎಲ್ ಜರ್ನಿ ಮುಗಿದುಹೋಗಿದೆ.
ಹೌದು, 2026ರ ಐಪಿಎಲ್ ಸೀಸನ್‌ಗಾಗಿ ಧೋನಿ ಸಿಎಸ್‌ಕೆ ತಂಡದಲ್ಲೇ ಇದ್ದರೂ, ಕಾಡುತ್ತಿರುವ ನಿರಂತರ ಇಂಜುರಿ (ಗಾಯದ ಸಮಸ್ಯೆ) ಕಾರಣದಿಂದಾಗಿ ಅವರಿಗೆ ಒಂದೂ ಪಂದ್ಯ ಆಡಲು ಸಾಧ್ಯವಾಗಲಿಲ್ಲ. ಚೆನ್ನೈ ಆಡಿದ ಎಲ್ಲಾ 14 ಲೀಗ್ ಪಂದ್ಯಗಳಲ್ಲೂ ಧೋನಿ ಕೇವಲ ಡಗೌಟ್‌ನಲ್ಲಿ ಕೂರಬೇಕಾಯಿತು. ಇದು ಸಿಎಸ್‌ಕೆ ಫ್ಯಾನ್ಸ್‌ಗೆ ತುಂಬಾನೇ ಬೇಸರ ತರಿಸಿದೆ.
ಗುರುವಾರ (ಮೇ 21) ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೋತ ಬೆನ್ನಲ್ಲೇ ನಡೆದ ಪ್ರೆಸ್ ಮೀಟ್‌ನಲ್ಲಿ ಸಿಎಸ್‌ಕೆ ಬೌಲಿಂಗ್ ಕೋಚ್ ಎರಿಕ್ ಸೈಮನ್ಸ್ ಅವರಿಗೆ ಧೋನಿ ಭವಿಷ್ಯದ ಬಗ್ಗೆ ಒಂದು ನೇರ ಪ್ರಶ್ನೆ ಎದುರಾಯಿತು. "ಮುಂದಿನ ಸೀಸನ್‌ನಲ್ಲಿ ಧೋನಿ ಆಟಗಾರನಾಗಿ ಮರಳಿ ಬರ್ತಾರಾ?" ಅನ್ನೋ ಚರ್ಚೆಗೆ ಸೈಮನ್ಸ್ ಈಗ ಒಂದು ಕ್ಲಾರಿಟಿ ಕೊಟ್ಟಿದ್ದಾರೆ.
ಧೋನಿ ನಿವೃತ್ತಿ ಗಾಸಿಪ್‌ಗೆ ಕೋಚ್ ಕೊಟ್ಟ ಉತ್ತರವೇನು?
ಸೋಷಿಯಲ್ ಮೀಡಿಯಾದಲ್ಲಂತೂ ಧೋನಿ ಇನ್ಮುಂದೆ ಆಟಗಾರನಾಗಿ ಕಾಣಿಸಿಕೊಳ್ಳಲ್ಲ, ಅವರು ಸಿಎಸ್‌ಕೆ ತಂಡದ ಸಹಾಯಕ ಸಿಬ್ಬಂದಿ (Support Staff) ಅಥವಾ ಮೆಂಟರ್ ಪಾತ್ರದಲ್ಲಿ ಇರಲಿದ್ದಾರೆ ಅನ್ನೋ ಊಹಾಪೋಹಗಳು ಸಖತ್ ವೈರಲ್ ಆಗ್ತಿವೆ. ಪ್ರೆಸ್ ಮೀಟ್‌ನಲ್ಲಿ ಕೋಚ್ ಸೈಮನ್ಸ್ ಅವರಿಗೆ ಮುಂದಿನ ವರ್ಷ ಧೋನಿ ಆಡೋದನ್ನ ನೋಡಲು ತಂಡ ಕಾಯ್ತಾ ಇದೆಯಾ ಅಂತ ಕೇಳಿದಾಗ, ಅವರು ಮುಗುಳ್ನಗುತ್ತಾ ಹೀಗೆ ಉತ್ತರಿಸಿದ್ದಾರೆ:
"ಸರಿ, ನೀವು ನಿಜವಾಗಿಯೂ ಈ ಪ್ರಶ್ನೆಯನ್ನು ಸೀರಿಯಸ್ ಆಗಿ ಕೇಳ್ತಾ ಇದ್ದೀರಾ? ಖಂಡಿತವಾಗಿಯೂ ನಾವು ಯಾವಾಗಲೂ ಧೋನಿ ಆಡಲಿ ಅಂತಾನೇ ಆಶಿಸುತ್ತೇವೆ. ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ನೆಟ್ಸ್‌ನಲ್ಲಿ ಧೋನಿ ಬ್ಯಾಟಿಂಗ್ ಮಾಡ್ತಿರೋದನ್ನ ನೋಡಿದ್ರೆ ಈಗಲೂ ಬಾಲ್ ಸಖತ್ ಆಗಿ ಕನೆಕ್ಟ್ ಮಾಡ್ತಿದ್ದಾರೆ. ಆದರೆ ಅವರಿಗೆ ಕಾಲಿನ ಗಾಯದ ಸಮಸ್ಯೆ ತುಂಬಾ ಇತ್ತು. ಅವರಿಗೆ ಮೈದಾನದಲ್ಲಿ ಓಡಾಡಲು ತುಂಬಾನೇ ಕಷ್ಟ ಆಗ್ತಿತ್ತು, ಅದೇ ಕಾರಣಕ್ಕೆ ಈ ಸೀಸನ್‌ನಲ್ಲಿ ಅವರಿಗೆ ಆಡಲು ಸಾಧ್ಯವಾಗಲಿಲ್ಲ. ನೆಟ್ಸ್‌ನಲ್ಲಿ ಮಾತ್ರ ಅವರ ಬ್ಯಾಟಿಂಗ್ ಸೂಪರ್ ಆಗಿದೆ."
ಮುಂದುವರಿದು ಮಾತನಾಡಿದ ಸೈಮನ್ಸ್, "ನಾನು ಇದನ್ನ ಮೊದಲಿಂದಲೂ ಹೇಳ್ತಾ ಇದ್ದೀನಿ, ಮುಂದಿನ ನಿರ್ಧಾರ ಏನಿದ್ದರೂ ಅದು ಎಂಎಸ್‌ಗೆ ಮಾತ್ರ ಗೊತ್ತು. ತಾವು ಯಾವಾಗ ರೆಡಿ ಇರ್ತಾರೆ, ಯಾವಾಗ ಮೈದಾನಕ್ಕೆ ಇಳಿಬೇಕು ಅನ್ನೋದನ್ನ ಅವರೇ ಡಿಸೈಡ್ ಮಾಡ್ತಾರೆ. ಧೋನಿ ಯಾವುದೇ ನಿರ್ಧಾರ ತಗೊಂಡ್ರೂ ಅದು ತಂಡದ ಹಿತದೃಷ್ಟಿಯಿಂದ ಇರುತ್ತದೆಯೇ ಹೊರತು, ಅವರ ಸ್ವಂತ ಲಾಭಕ್ಕಾಗಿ ಅಲ್ಲ. ಅವರು ತಂಡದ ಜೊತೆ ಇರೋದೇ ನಮಗೆ ದೊಡ್ಡ ಶಕ್ತಿ," ಎಂದಿದ್ದಾರೆ.
ಯುವ ಆಟಗಾರರಿಗೆ ಸಿಕ್ಕ ಸುವರ್ಣ ಅವಕಾಶ
ಧೋನಿ ಈ ಸೀಸನ್‌ನಲ್ಲಿ ಆಡದಿದ್ದರೂ, ಸಿಎಸ್‌ಕೆ ಈ ಲೈನಪ್ ಬದಲಾವಣೆಯನ್ನು ಯುವ ಆಟಗಾರರನ್ನು ಬೆಳೆಸಲು ಬಳಸಿಕೊಂಡಿತು. ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ ಮತ್ತು ಆಯುಷ್ ಮಾತ್ರೆ ಅವರಂತಹ ಯುವ ಪ್ರತಿಭೆಗಳಿಗೆ ಈ ಬಾರಿ ಲೀಗ್‌ನಲ್ಲಿ ನಿಯಮಿತವಾಗಿ ಚಾನ್ಸ್ ನೀಡಲಾಯಿತು.
ಇದರಲ್ಲಿ ಕಾರ್ತಿಕ್ ಶರ್ಮಾ ಸಿಎಸ್‌ಕೆಯ ಮಿಡಲ್ ಆರ್ಡರ್ ಬ್ಯಾಟಿಂಗ್‌ನಲ್ಲಿ ಭರವಸೆಯ ಆಟಗಾರನಾಗಿ ಮೂಡಿಬಂದಿದ್ದಾರೆ. ಇನ್ನು ಉರ್ವಿಲ್ ಪಟೇಲ್ ಮತ್ತು ಡೆವಾಲ್ಡ್ ಬ್ರೆವಿಸ್ ಸಿಕ್ಕ ಕೆಲವೇ ಅವಕಾಶಗಳಲ್ಲಿ ತಮ್ಮ ಪವರ್ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಧೋನಿ ಮುಂದಿನ ಪ್ಲಾನ್ ಏನು? ಕಾಡುತ್ತಿದೆ ತೀವ್ರ ಚರ್ಚೆ!
ಚೆನ್ನೈ ಸೂಪರ್ ಕಿಂಗ್ಸ್ ಈಗ ಒಂದು ಟ್ರಾನ್ಸಿಶನ್ (ಪರಿವರ್ತನೆ) ಹಂತದಲ್ಲಿದೆ. ಧೋನಿ ಮುಂದಿನ ವರ್ಷ ಕಮ್‌ಬ್ಯಾಕ್ ಮಾಡ್ತಾರಾ ಅಥವಾ ಅವರ ಈ ಗೈರುಹಾಜರಿ ತಂಡದ ದೀರ್ಘಕಾಲದ ಪ್ಲಾನ್‌ಗಳಿಗೆ ಅಡ್ಡಿಪಡಿಸುತ್ತಾ ಅನ್ನೋ ಚರ್ಚೆ ಕ್ರಿಕೆಟ್ ಪಂಡಿತರ ನಡುವೆ ಜೋರಾಗಿದೆ. 2026ರ ಸೀಸನ್ ಅಂತೂ ಧೋನಿ ಬ್ಯಾಟಿಂಗ್ ನೋಡದೆಯೇ ಮುಗಿದುಹೋಗಿದೆ.
ಧೋನಿ ಮುಂದಿನ ವರ್ಷ ಐಪಿಎಲ್ ಆಡ್ತಾರಾ ಇಲ್ವಾ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ಕೋಚ್ ಸೈಮನ್ಸ್ ಹೇಳಿರೋ ಹಾಗೆ ಧೋನಿ ನೆಟ್ಸ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡ್ತಾ ಇರೋದ್ರಿಂದ, ಅವರ ಕಾಲಿನ ಗಾಯ ವಾಸಿಯಾದರೆ 2027ರ ಐಪಿಎಲ್‌ನಲ್ಲಿ ಮತ್ತೊಮ್ಮೆ 'ಥಲಾ' ದರ್ಶನ ಸಿಕ್ಕರೂ ಸಿಗಬಹುದು. ಅಲ್ಲಿಯವರೆಗೆ ಸಿಎಸ್‌ಕೆ ಅಭಿಮಾನಿಗಳು ಕಾಯಲೇಬೇಕು!