ಆದಿತ್ಯ ಬಿರ್ಲಾ ಗ್ರೂಪ್ ಆರ್‌ಸಿಬಿ ತಂಡವನ್ನು ಪಡೆದುಕೊಂಡ ನಂತರ ಅನನ್ಯಾ ಬಿರ್ಲಾ ಹೆಸರು ಎಲ್ಲೆಡೆ ಚರ್ಚೆಗೆ ಬಂದಿದೆ. ಅವರು ಕುಮಾರ ಮಂಗಲಂ ಬಿರ್ಲಾ ಅವರ ಮಗಳು. ಈಗಾಗಲೇ ಯಶಸ್ವಿ ಉದ್ಯಮಿಯಾಗಿರುವ ಅವರು, ಈಗ ಆರ್‌ಸಿಬಿ ಜೊತೆ ಕಾಣಿಸಿಕೊಳ್ಳ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಆರ್‌ಸಿಬಿ ಮಾರಾಟವಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅನನ್ಯಾ ಬಗ್ಗೆ ಮಾತುಕತೆಗಳು ಜೋರಾಗಿವೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಾವ್ಯಾ ಮಾರನ್ ಹೇಗೆ ಪಂದ್ಯಗಳ ವೇಳೆ ತಂಡವನ್ನು ಬೆಂಬಲಿಸುತ್ತಾ ಕಾಣಿಸಿಕೊಳ್ಳ್ತಾರೋ, ಅದೇ ರೀತಿ ಅನನ್ಯಾ ಕೂಡ ಆರ್‌ಸಿಬಿ ತಂಡದ ಮುಖವಾಗ್ತಾರಾ ಅನ್ನೋ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಮಾರ್ಚ್ 28ರಂದು ನಡೆಯಲಿರುವ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ಈ ಚರ್ಚೆಗೆ ಇನ್ನಷ್ಟು ಕುತೂಹಲ ತಂದಿದೆ.

ಹಿಂದೆ ಡಿಯೋಜಿಯೋ ಬಳಿ ಇದ್ದ ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಮತ್ತು ಟೈಮ್ಸ್ ಇಂಟರ್ನೆಟ್ ಒಕ್ಕೂಟ ಸುಮಾರು 1.78 ಬಿಲಿಯನ್ ಡಾಲರ್‌ಗೆ ಖರೀದಿಸಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಆರ್ಯಮಾನ್ ಬಿರ್ಲಾ ತಂಡದ ಅಧ್ಯಕ್ಷರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಹೋದರಿ ಅನನ್ಯಾ ಬಿರ್ಲಾ ಹೆಸರು ಕೂಡ ಮುಂದಕ್ಕೆ ಬಂದಿದೆ. ಅವರು ತಂಡದ ಪರವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಇದೆ.

ಅನನ್ಯಾ ಬಿರ್ಲಾ 1994ರಲ್ಲಿ ಮುಂಬೈನಲ್ಲಿ ಜನಿಸಿದ್ದಾರೆ. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಕೇವಲ 17ನೇ ವಯಸ್ಸಿನಲ್ಲಿ ‘ಸ್ವತಂತ್ರ ಮೈಕ್ರೋಫಿನ್’ ಸಂಸ್ಥೆಯನ್ನು ಆರಂಭಿಸಿ, ಗ್ರಾಮೀಣ ಮಹಿಳೆಯರಿಗೆ ಸಾಲ ನೀಡುವ ಕೆಲಸ ಮಾಡುತ್ತಿದ್ದಾರೆ. ‘ಎಂ ಪವರ್’ ಎಂಬ ವೇದಿಕೆಯ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಅವರಿಗೆ ಸಂಗೀತದಲ್ಲೂ ಆಸಕ್ತಿ ಇದೆ.

ಅವರ ಆಸ್ತಿ ಸುಮಾರು 1000 ರಿಂದ 1700 ಕೋಟಿ ರೂಪಾಯಿಗಳ ನಡುವೆ ಇದೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದು, ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಈಗ ಸೋಷಿಯಲ್ ಮೀಡಿಯಾದಲ್ಲಿ ಅನೇಕರು, ಕಾವ್ಯಾ ಮಾರನ್ ಹಾಗೆ ಅನನ್ಯಾ ಕೂಡ ಮೈದಾನದಲ್ಲಿ ಕಾಣಿಸಿಕೊಳ್ಳ್ತಾರಾ ಎಂದು ಊಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಒಟ್ಟಿನಲ್ಲಿ, ಆರ್‌ಸಿಬಿ ತಂಡದ ಹೊಸ ಮಾಲೀಕತ್ವದ ಬಳಿಕ ಅನನ್ಯಾ ಬಿರ್ಲಾ ಹೆಸರು ಐಪಿಎಲ್ ವಲಯದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯಲ್ಲಿ ತಂಡದ ಜೊತೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.