ಆರ್ಸಿಬಿ ತಂಡಕ್ಕೆ ಮತ್ತೊಂದು ಕಿರೀಟ ಒಲಿದ ಕ್ಷಣ - ತಮ್ಮದೇ ಶೈಲಿಯಲ್ಲಿ ಶುಭಕೋರಿದ ಸಿದ್ದರಾಮಯ್ಯ!!

ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ವಡೋದರಾದ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಈ ಫೈನಲ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು ದೆಹಲಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆರ್‌ಸಿಬಿ ಮಹಿಳೆಯರ ಭರ್ಜರಿ ಗೆಲುವು
ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆರ್‌ಸಿಬಿ ಮಹಿಳೆಯರ ಭರ್ಜರಿ ಗೆಲುವು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಸಿಬಿ ಮಹಿಳಾ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಟ್ವೀಟ್ ಮಾಡುತ್ತಾ, “ಇಡೀ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡಿದ ನಮ್ಮ ಆರ್‌ಸಿಬಿ ತಂಡವು ಫೈನಲ್‌ನಲ್ಲಿ ಸಂಘಟಿತ ಹೋರಾಟದ ಮೂಲಕ ಟ್ರೋಫಿ ಗೆದ್ದಿದೆ. ಡೆಲ್ಲಿ ತಂಡವೂ ಕೊನೆಯವರೆಗೂ ಹೋರಾಡಿದ್ದು ಶ್ಲಾಘನೀಯ. Ee Sala Cup Namdu!” ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಸಂತೋಷ ವ್ಯಕ್ತಪಡಿಸಿ, “ಆರ್‌ಸಿಬಿ ಮತ್ತೊಮ್ಮೆ ಡಬ್ಲ್ಯೂಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆತ್ಮವಿಶ್ವಾಸ, ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸಿದ ತಂಡವು ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಸಲ ಕೂಡ ಕಪ್ ನಮ್ಮದೇ!” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, “2026ರ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದು ಮಹಿಳಾ ಕ್ರಿಕೆಟ್‌ನಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಬರೆದ ಆರ್‌ಸಿಬಿ ಮಹಿಳೆಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸ್ಮೃತಿ ಮಂಧಾನ ಅವರ ಸ್ಫೂರ್ತಿದಾಯಕ ನಾಯಕತ್ವ ಮತ್ತು ತಂಡದ ಪ್ರತಿಯೊಬ್ಬ ಸದಸ್ಯರ ಸಂಘಟಿತ ಪ್ರದರ್ಶನದಿಂದ #RCB ಮಹಿಳೆಯರು ತಮ್ಮ 2ನೇ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ” ಎಂದು ಹೇಳಿದ್ದಾರೆ.

ಈ ಸಾಧನೆಯು ಭಾರತದಲ್ಲಿ ಮಹಿಳಾ ಕ್ರೀಡಾಪಟುಗಳ ಶಿಸ್ತು, ಸಮರ್ಪಣೆ ಮತ್ತು ಸಾಧನೆಯ ವೈಭವವನ್ನು ಮತ್ತೊಮ್ಮೆ ಸುವರ್ಣಾಕ್ಷರಗಳಲ್ಲಿ ಬರೆದಂತಾಗಿದೆ. ಮಹಿಳಾ ಕ್ರಿಕೆಟ್‌ಗೆ ಇದು ದೊಡ್ಡ ಉತ್ತೇಜನವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂಬ ಹಾರೈಕೆ ವ್ಯಕ್ತವಾಗಿದೆ. ಆರ್‌ಸಿಬಿ ಮಹಿಳಾ ತಂಡದ ಈ ಗೆಲುವು ಅಭಿಮಾನಿಗಳಿಗೆ ಅಪಾರ ಸಂತೋಷ ತಂದಿದ್ದು, “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಮತ್ತೆ ಜಗತ್ತಿನ ಕ್ರಿಕೆಟ್ ಲೋಕದಲ್ಲಿ ಮೊಳಗುತ್ತಿದೆ. 

Latest News