ದೇಶದ ಭ್ರಷ್ಟ ವ್ಯವಸ್ಥೆ ಹಾಗೂ ಪೇಪರ್ ಲೀಕ್ ದಂಧೆಕೋರರ ಅಟ್ಟಹಾಸಕ್ಕೆ ಮತ್ತೊಬ್ಬ ಪ್ರತಿಭಾವಂತ ನೀಟ್ ಆಕಾಂಕ್ಷಿ ಬಲಿಯಾಗಿದ್ದಾನೆ. ಮೇ 3 ರಂದು ದೇಶಾದ್ಯಂತ ನಡೆದಿದ್ದ NEET UG 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಕನ್ಫರ್ಮ್ ಆದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ವರ್ಷಗಟ್ಟಲೆ ಹಗಲು-ರಾತ್ರಿ ಕಷ್ಟಪಟ್ಟು ಓದಿದ್ದ ಪರೀಕ್ಷೆ ದಿಢೀರನೆ ರದ್ದಾದ ಸುದ್ದಿ ಕೇಳಿ ತೀವ್ರ ಮಾನಸಿಕ ನೊಂದ ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ.
ಕತ್ತಲಾದ ಹೆತ್ತವರ ಮನೆ - ಕಮರಿಹೋದ ಮೆಡಿಕಲ್ ಕನಸು;
ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಗಂಗೋತ್ರಿನಗರದ ನಿವಾಸಿಯಾಗಿದ್ದ ರಿತಿಕ್ ಎಂಬ ಯುವಕನೇ ವ್ಯವಸ್ಥೆಯ ಬಲಿಪಶುವಾದ ನೀಟ್ ಆಕಾಂಕ್ಷಿ. ಮಗನ ಸಾವಿನಿಂದ ದಿಕ್ಕುತೋಚದಂತಾಗಿರುವ ತಂದೆ ಅನೂಪ್ ಅವರ ಆಕ್ರಂದನ ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ. 'ನನ್ನ ಮಗ ವೈದ್ಯನಾಗಬೇಕೆಂಬ ಒಂದೇ ಒಂದು ಕನಸಿನಿಂದ ತನ್ನ ಇಡೀ ಯೌವನವನ್ನು ರೂಮಿನಲ್ಲೇ ಕಳೆದು ಓದಿದ್ದನು. ಮೇ 3 ರಂದು ಪರೀಕ್ಷೆ ಬರೆದು ಬಂದು ಸೀಟು ಸಿಗುವ ಭರವಸೆಯಲ್ಲಿದ್ದ. ಆದರೆ, ಪೇಪರ್ ಲೀಕ್ ಮಾಫಿಯಾದಿಂದಾಗಿ ಪರೀಕ್ಷೆ ರದ್ದಾಗಿದೆ ಎಂಬ ಸುದ್ದಿ ಕೇಳಿದ ದಿನದಿಂದ ಆತ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ.
ತೀವ್ರ ಎಮೋಷನಲ್ ಡಿಪ್ರೆಶನ್‌ಗೆ ಒಳಗಾಗಿದ್ದ ಆತ ಕೊನೆಗೂ ಇಂತಹ ಕಠಿಣ ನಿರ್ಧಾರ ತಗೊಂಡಿದ್ದಾನೆ' ಎಂದು ಕಣ್ಣೀರಿಟ್ಟಿದ್ದಾರೆ. ಮೇ 14 ರಂದು ರಿತಿಕ್ ಶ*ವ ಆತನ ಕೋಣೆಯಲ್ಲೇ ಪತ್ತೆಯಾಗಿದ್ದು, ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶಾದ್ಯಂತ ಭುಗಿಲೆದ್ದ ಆಕ್ರೋಶ; ಮಾಫಿಯಾಗಳ ವಿರುದ್ಧ ಸ್ಟೂಡೆಂಟ್ಸ್ ವಾರ್;
ಇತ್ತ ಪೇಪರ್ ಲೀಕ್ ಹಗರಣ ಹಾಗೂ ಅದರಿಂದ ಮನನೊಂದು ವಿದ್ಯಾರ್ಥಿ ಪ್ರಾಣ ಕಳೆದುಕೊಂಡ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಇಡೀ ದೇಶದ ಯುವಜನತೆ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಚಿಂಗ್ ಸೆಂಟರ್‌ಗಳ ಅಕ್ರಮ ದಂಧೆ, ಲಕ್ಷಾಂತರ ರೂಪಾಯಿಗೆ ಪ್ರಶ್ನೆ ಪತ್ರಿಕೆ ಮಾರಿಕೊಳ್ಳುವ ಕಪ್ಪು ಕುಳಗಳ ವಿರುದ್ಧ ಕಠಿಣ ಕಾನೂನು ತರಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ದೇಶದ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ವರ್ಷಗಳ ಕಾಲ ರ*ಕ್ತವನ್ನು ನೀರು ಮಾಡಿ ಓದುವ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಭ್ರಷ್ಟ ವ್ಯವಸ್ಥೆಗೆ ಇನ್ನೆಷ್ಟು ಬಲಿಗಳು ಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಾಜಕೀಯ ವಲಯದಲ್ಲೂ ಈ ಘಟನೆ ಭಾರಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವೈಫಲ್ಯವನ್ನು ತರಾಟೆಗೆ ತಗೆದುಕೊಂಡಿದ್ದಾರೆ. 'ಭ್ರಷ್ಟಾಚಾರ ಮತ್ತು ಪೇಪರ್ ಲೀಕ್ ದಂಧೆಗಳು ದೇಶದ ಲಕ್ಷಾಂತರ ಯುವಕರ ಭವಿಷ್ಯವನ್ನು ಮಾತ್ರವಲ್ಲ, ಅವರ ಪ್ರಾಣವನ್ನೇ ಹಿಂಡುತ್ತಿವೆ. ಈ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಇನ್ಯಾವಾಗ ಮುಕ್ತಿ?' ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ.
ಜೂನ್ 21 ಕ್ಕೆ ರೀ-ಟೆಸ್ಟ್ ಶಿಕ್ಷಣ ಸಚಿವರಿಂದ ಡಿಜಿಟಲ್ ಪರೀಕ್ಷೆಯ ಭರವಸೆ;
ದೇಶಾದ್ಯಂತ ಉಂಟಾಗಿರುವ ತೀವ್ರ ಆಕ್ರೋಶ ಹಾಗೂ ಉದ್ವಿಗ್ನ ವಾತಾವರಣವನ್ನು ತಣ್ಣಗಾಗಿಸಲು ಕೇಂದ್ರ ಶಿಕ್ಷಣ ಸಚಿವರು ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. "ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಭ್ರಷ್ಟ ದಂಧೆಕೋರರನ್ನು ಜೈಲಿಗಟ್ಟಲಾಗುವುದು. ಜೂನ್ 21 ರ ಸುಮಾರಿಗೆ ಇಡೀ ದೇಶಾದ್ಯಂತ ನೀಟ್ ಮರು-ಪರೀಕ್ಷೆಯನ್ನು (Re-test) ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಸಲಾಗುವುದು" ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಪೇಪರ್ ಲೀಕ್ ಹಾವಳಿಗೆ ಶಾಶ್ವತ ಬ್ರೇಕ್ ಹಾಕಲು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (Computer-Based Exams) ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
A 21-year-old NEET aspirant allegedly died by suicide in Uttar Pradesh's Lakhimpur Kheri on Thursday, with family members claiming he had been under severe stress following the cancellation of the NEET examination over a paper leak controversy.
— Hate Detector 🔍 (@HateDetectors) May 15, 2026
The deceased, identified as Ritik… pic.twitter.com/dphkzKhYnU
ಒಟ್ಟಾರೆಯಾಗಿ, ಕೇವಲ ಒಂದೇ ಒಂದು ಪರೀಕ್ಷೆಯ ಸುತ್ತ ನಡೆಯುವ ಅಕ್ರಮಗಳು ದೇಶದ ಭವಿಷ್ಯವನ್ನೇ ಅಂಧಕಾರಕ್ಕೆ ದೂಡುತ್ತಿರುವುದು ನಿಜಕ್ಕೂ ದುರಂತ. ಆದರೆ ವಿದ್ಯಾರ್ಥಿಗಳಲ್ಲಿ ನಮ್ಮದೊಂದು ಕಳಕಳಿಯ ವಿನಂತಿ: ಯಾವುದೇ ಪರೀಕ್ಷೆ, ರಿಸಲ್ಟ್ ಅಥವಾ ವೈಫಲ್ಯ ನಮ್ಮ ಅಮೂಲ್ಯವಾದ ಜೀವನಕ್ಕಿಂತ ದೊಡ್ಡದಲ್ಲ. ಕಠಿಣ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ, ಹೆತ್ತವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ನಿಮ್ಮ ನೋವನ್ನು ಹಂಚಿಕೊಳ್ಳಿ. ಪ್ರಾಣ ಕಳೆದುಕೊಳ್ಳುವುದು ಭ್ರಷ್ಟ ವ್ಯವಸ್ಥೆಗೆ ಉತ್ತರವಲ್ಲ!