ದೇಶದಲ್ಲಿ ಬರೋಬ್ಬರಿ 89 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ? ಮಾಧ್ಯಮಗಳ ಮುಂದೆ ಕೇಂದ್ರದ ವಿರುದ್ಧ ನಿಗಮ್ ಭಂಡಾರಿ ಸಿಡಿಸಿದ ಹೊಸ ಬಾಂಬ್!!

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರೋ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಕಿಡಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರೋ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ (ಯೂತ್ ಕಾಂಗ್ರೆಸ್) ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಮುಂಬರುವ ಮೇ 21 ರಂದು ಬೆಂಗಳೂರಿನ ಲೋಕ ಭವನಕ್ಕೆ ಮುತ್ತಿಗೆ ಹಾಕಲು ಯೂತ್ ಕಾಂಗ್ರೆಸ್ ನಾಯಕರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.

ಮೇ 21 ರಂದು ‘ರಾಜಭವನ ಚಲೋ’ ಬೃಹತ್ ಹೋರಾಟಕ್ಕೆ ಸಜ್ಜಾದ ಯೂತ್ ಕಾಂಗ್ರೆಸ್!! | Photo Credit: GATTY
ಮೇ 21 ರಂದು ‘ರಾಜಭವನ ಚಲೋ’ ಬೃಹತ್ ಹೋರಾಟಕ್ಕೆ ಸಜ್ಜಾದ ಯೂತ್ ಕಾಂಗ್ರೆಸ್!! | Photo Credit: GATTY

ಬೆಂಗಳೂರಿನಲ್ಲಿ ಭಾನುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಗೌಡ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

89 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ಹೈಕಮಾಂಡ್ ನಾಯಕರ ಗಂಭೀರ ಆರೋಪ

ಮಾಧ್ಯಮಗಳ ಮುಂದೆ ಕೇಂದ್ರ ಸರ್ಕಾರದ ಲೆಕ್ಕಾಚಾರಗಳನ್ನು ಬಿಚ್ಚಿಟ್ಟ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಅವರು, "ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಬರೋಬ್ಬರಿ 89 ಬಾರಿ ವಿವಿಧ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ! ಇದು ಕೇವಲ ಪೇಪರ್ ಲೀಕ್ ಅಲ್ಲ, ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಕಷ್ಟ ಮತ್ತು ಅವರ ಹೆತ್ತವರ ಕನಸಿನ ಸೋರಿಕೆ" ಎಂದು ಕಿಡಿಕಾರಿದ್ದಾರೆ.

"ವರ್ಷಗಟ್ಟಲೆ ಹಗಲು ರಾತ್ರಿ ಕೂತು ಓದಿದ ವಿದ್ಯಾರ್ಥಿಗಳನ್ನು ಈ ಸರ್ಕಾರ ಸೀದಾ ನರಕಕ್ಕೆ ತಳ್ಳಿದೆ. ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್‌ನಿಂದ ಬೇಸತ್ತು ಈಗಾಗಲೇ ನಾಲ್ಕು ಜನ ಮುಗ್ಧ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಕೇಂದ್ರ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಎಲ್ಲೆಲ್ಲಿ ಬಿಜೆಪಿ ಆಡಳಿತ ಇದೆಯೋ, ಆ ರಾಜ್ಯಗಳಲ್ಲೇ ಈ ತರಹದ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ" ಅಂತ ನಿಗಮ್ ಭಂಡಾರಿ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆಗೆ ಸಿದ್ದರಾಮಯ್ಯ, ಡಿಕೆಶಿಗೆ ಆಹ್ವಾನ!

ಪ್ರತಿಭಟನೆಯ ಹೈಲೈಟ್ಸ್: ಮೇ 21 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಮುತ್ತಿಗೆ ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್‌ನ ದಂಡೇ ಹರಿದುಬರಲಿದೆ. ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ನೀಡಿರುವ ಮಾಹಿತಿ ಪ್ರಕಾರ, ಈ ಬೃಹತ್ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಖುದ್ದಾಗಿ ಭಾಗವಹಿಸಲಿದ್ದಾರೆ.

ಅಷ್ಟೇ ಅಲ್ಲದೆ, ಈ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಸಿಎಂ ಕೂಡ ಈ ಪ್ರತಿಭಟನೆಗೆ ಸಾತ್ ಕೊಡುವ ಸಾಧ್ಯತೆ ದಟ್ಟವಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಒಂದೇ ವೇದಿಕೆಯಲ್ಲಿ ಸಿಗುತ್ತಿರುವುದರಿಂದ ಮೇ 21 ರ ಯೂತ್ ಕಾಂಗ್ರೆಸ್ ಪ್ರತಿಭಟನೆ ಭಾರೀ ಸದ್ದು ಮಾಡೋದು ಗ್ಯಾರಂಟಿ.

ರಾಜಸ್ಥಾನ ಸಚಿವರ ಆಪ್ತರ ಕೈವಾಡ? ಹೊಸ ಬಾಂಬ್ ಸಿಡಿಸಿದ ಮಂಜುನಾಥ್!

ಇದೇ ವೇಳೆ ಮಾತನಾಡಿದ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ನೀಟ್ ಹಗರಣದ ಹಿಂದೆ ಯಾರಿದ್ದಾರೆ ಅನ್ನೋ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. "ಈ ಇಡೀ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ರಾಜಸ್ಥಾನದ ಶಿಕ್ಷಣ ಸಚಿವರ ಆಪ್ತ ವಲಯದವರ ಕೈವಾಡವಿದೆ. ದೊಡ್ಡ ದೊಡ್ಡ ತಲೆಗಳು ಈ ದಂಧೆಯಲ್ಲಿದ್ದು, ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೆಪಿಸಿಸಿ ಆಫೀಸ್‌ನಲ್ಲಿ ತಮ್ಮದೇ ಒಳಗಿನ ಜಗಳದಿಂದ ಸುದ್ದಿಯಾಗಿದ್ದ ಯೂತ್ ಕಾಂಗ್ರೆಸ್ ಲೀಡರ್‌ಗಳು, ಈಗ ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಅಖಾಡಕ್ಕೆ ಇಳಿಯುತ್ತಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಲೋಕ ಭವನಕ್ಕೆ ಮುತ್ತಿಗೆ ಹಾಕಲು ಹೊರಟಿರುವ ಕಾಂಗ್ರೆಸ್ ಯುವ ಪಡೆಗೆ ಮುಂಬರುವ ಮೇ 21 ರಂದು ಪೊಲೀಸರು ಹೇಗೆ ಬ್ರೇಕ್ ಹಾಕ್ತಾರೆ ಮತ್ತು ಈ ಹೋರಾಟ ರಾಜಕೀಯವಾಗಿ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Latest News

Related News