ದೇಶಾದ್ಯಂತ ಭಾರಿ ತಲ್ಲಣ ಸೃಷ್ಟಿಸಿರೋ 2026ರ ನೀಟ್-ಯುಜಿ (NEET-UG) ಪರೀಕ್ಷೆ ರದ್ದತಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆಯಲ್ಲಿ ಸಿಬಿಐಗೆ (CBI) ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯ ಲೀಕೇಜ್ ಜಾಲವನ್ನು ಹುಡುಕುತ್ತಾ ಹೊರಟಿದ್ದ ಅಧಿಕಾರಿಗಳಿಗೆ ಪುಣೆಯ ಒಬ್ಬ ಬ್ಯೂಟಿಷಿಯನ್ ಸಿಕ್ಕಿಬಿದ್ದಿದ್ದಾಳೆ. ಈಕೆ ಬಾಯಿ ಬಿಟ್ಟಿರೋ ಸ್ಫೋಟಕ ಸತ್ಯಗಳನ್ನು ಕೇಳಿ ಸಿಬಿಐ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ! ಈ ಇಡೀ ಹಗರಣದ ಮಾಸ್ಟರ್‌ಮೈಂಡ್ ಪರೀಕ್ಷಾ ಮಂಡಳಿಯ (NTA) ಉನ್ನತ ಮಟ್ಟದ ಅಧಿಕಾರಿಯೇ ಆಗಿರೋದು ಈಗ ತನಿಖೆಯಲ್ಲಿ ಬಯಲಾಗಿದೆ.
ಬ್ಯೂಟಿ ಪಾರ್ಲರ್‌ನಲ್ಲಿ ನಡೀತಿತ್ತು ಲೀಕೇಜ್ ಪ್ಲಾನ್!
ಪುಣೆಯ ಸುಖಸಾಗರ್ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ 46 ವರ್ಷದ ಮನೀಷಾ ವಾಘ್ಮೋರೆ ಈ ಇಡೀ ಜಾಲದ ಮೇನ್ ಲಿಂಕ್ ಆಗಿ ಕೆಲಸ ಮಾಡಿದ್ದಾಳೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯ 2026ನೇ ಸಾಲಿನ ನೀಟ್-ಯುಜಿ ಪ್ರಶ್ನೆ-ನಿಗದಿ ಸಮಿತಿಯಲ್ಲಿದ್ದ 57 ವರ್ಷದ ತಜ್ಞೆ ಮನೀಷಾ ಗುರುನಾಥ್ ಮಾಂಧರೆ ಎಂಬಾಕೆಯ ಪರಿಚಯ ಈ ಬ್ಯೂಟಿಷಿಯನ್‌ಗೆ ಇತ್ತು. ಮಾಂಧರೆಗೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ಎರಡೂ ಸಬ್ಜೆಕ್ಟ್‌ಗಳ ಅಂತಿಮ ಪ್ರಶ್ನೆಪತ್ರಿಕೆಗಳನ್ನು ನೋಡೋ ಅವಕಾಶವಿತ್ತು.
ಮಾಂಧರೆ ಎನ್‌ಟಿಎ ಕಮಿಟಿಯಲ್ಲಿರೋ ವಿಷಯ ತಿಳಿಯುತ್ತಿದ್ದಂತೆ, ಇಬ್ಬರೂ ಸೇರಿ ಕ್ವೆಶ್ಚನ್ ಪೇಪರ್ ಸೋರಿಕೆ ಮಾಡೋ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ರು. ಇವರಿಗೆ ಪಿವಿ ಕುಲಕರ್ಣಿ ಅನ್ನೋ ಒಬ್ಬ ನಿವೃತ್ತ ಶಿಕ್ಷಕಿ ಕೂಡ ಸಾಥ್ ಕೊಟ್ಟಿದ್ದಳು. ಬ್ಯೂಟಿಷಿಯನ್ ವಾಘ್ಮೋರೆ ತನ್ನ ಪಾರ್ಲರ್‌ಗೆ ಬರ್ತಿದ್ದ ಕಸ್ಟಮರ್ಸ್ ಹಾಗೂ ಟ್ಯೂಷನ್ ತಗೋಬೇಕು ಅಂತ ಹುಡುಕಿಕೊಂಡು ಬರ್ತಿದ್ದ ಸ್ಟೂಡೆಂಟ್‌ಗಳನ್ನು ಟಾರ್ಗೆಟ್ ಮಾಡಿ, ಪೇಪರ್ ಕೊಳ್ಳೋಕೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕೋಕೆ ಶುರು ಮಾಡಿದ್ಲು.
ಪ್ರತಿ ಸ್ಟೂಡೆಂಟ್‌ಗೆ 10 ಲಕ್ಷದ ಡೀಲ್!
ಸಿಬಿಐ ಕೋರ್ಟ್‌ಗೆ ನೀಡಿರೋ ಮಾಹಿತಿ ಪ್ರಕಾರ, ಕಾಸಿಗಾಗಿ ಈ ಗ್ಯಾಂಗ್ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದೆ. ಸಿಕ್ಕಿಬಿದ್ದಿರೋ ಆರೋಪಿಗಳು ಪ್ರತಿ ವಿದ್ಯಾರ್ಥಿಯಿಂದ ಪ್ರಶ್ನೆಪತ್ರಿಕೆಗಾಗಿ ಬರೊಬ್ಬರಿ 10 ಲಕ್ಷ ರೂಪಾಯಿ ಲೂಟಿ ಮಾಡಲು ಡೀಲ್ ಕುದುರಿಸಿದ್ದರು.
ಹಣದ ಹಂಚಿಕೆ ಹೀಗಿತ್ತು: ಈ 10 ಲಕ್ಷ ರೂಪಾಯಿ ಮೊತ್ತದಲ್ಲಿ ಬ್ಯೂಟಿಷಿಯನ್ ವಾಘ್ಮೋರೆ, ಎನ್‌ಟಿಎ ಎಕ್ಸ್‌ಪರ್ಟ್ ಮಾಂಧರೆ ಮತ್ತು ನಿವೃತ್ತ ಶಿಕ್ಷಕಿ ಕುಲಕರ್ಣಿ ತಲಾ 2.5 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಹಂಚಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದರು. ವಾಘ್ಮೋರೆ ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳನ್ನು ಈ ಜಾಲಕ್ಕೆ ಸಿಲುಕಿಸಿ ಹಣ ಪೀಕಿದ್ದಳು.
ದೇಶಾದ್ಯಂತ ಹರಡಿದ್ದ ಜಾಲ ಭೇದಿಸಿದ ಸಿಬಿಐ
ಬ್ಯೂಟಿಷಿಯನ್ ವಾಘ್ಮೋರೆ ತಾನು ಪಡೆದ ಪ್ರಶ್ನೆಪತ್ರಿಕೆಯನ್ನು ತನ್ನ ಹಳೆಯ ಫ್ರೆಂಡ್ ಧನಂಜಯ್ ಲೋಖಂಡೆಗೆ ಕಳಿಸಿದ್ದಳು. ಆತ ಅದನ್ನು ನಾಸಿಕ್‌ನಲ್ಲಿ ಕೌನ್ಸೆಲಿಂಗ್ ಬಿಸಿನೆಸ್ ಮಾಡ್ತಿದ್ದ ಶುಭಂ ಖೈರ್ನಾರ್‌ಗೆ ತಲುಪಿಸಿದ್ದ. ಈ ಶುಭಂ ಅನ್ನೋ ಆಸಾಮಿ ಪ್ರಶ್ನೆಪತ್ರಿಕೆಯ ಪಿಡಿಎಫ್ (PDF) ಫೈಲ್‌ಗಳನ್ನು ಗುರುಗ್ರಾಮ್‌ನ ಯಶ್ ಯಾದವ್ ಮತ್ತು ಜೈಪುರದ ಇತರೆ ದಲ್ಲಾಳಿಗಳಿಗೆ ವಾಟ್ಸಾಪ್ ಹಾಗೂ ಆನ್‌ಲೈನ್ ಮೂಲಕ ಹಂಚಿಬಿಟ್ಟಿದ್ದ!
ಕಳೆದ ಮಂಗಳವಾರ ನೀಟ್ ಪರೀಕ್ಷೆ ರದ್ದಾದ ಕೆಲವೇ ಗಂಟೆಗಳಲ್ಲಿ ಮೊದಲ ಶಂಕಿತ ಆರೋಪಿ ಖೈರ್ನಾರ್‌ನನ್ನು ಸಿಬಿಐ ಅರೆಸ್ಟ್ ಮಾಡಿತ್ತು. ಆತ ಕೊಟ್ಟ ಸುಳಿವಿನ ಮೇಲೆ ಈಗ ಎನ್‌ಟಿಎ ತಜ್ಞೆ ಮಾಂಧರೆ ಸೇರಿದಂತೆ ಸಾಲು ಸಾಲು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೋರ್ಟ್ ಮಾಂಧರೆಗೆ 14 ದಿನಗಳ ಸಿಬಿಐ ಕಸ್ಟಡಿ ವಿಧಿಸಿದೆ.
ಸದ್ಯ ಸಿಬಿಐ ಈ ದಂಧೆಯ ಆಳ ಅಗಲವನ್ನು ಜಾಲಾಡ್ತಿದೆ. ಕೋರ್ಟ್‌ಗೆ ಸಲ್ಲಿಕೆಯಾಗಿರೋ ಅರ್ಜಿಯಲ್ಲಿ, ಇನ್ನೂ ಹಲವಾರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಇದರ ಹಿಂದೆ ಒಂದು ದೊಡ್ಡ ಮಟ್ಟದ ಸಂಘಟಿತ ಅಪರಾಧ ತಂಡ ಕೆಲಸ ಮಾಡ್ತಿದೆ ಅಂತ ಸಿಬಿಐ ತಿಳಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟಿರೋ ಈ ಹಗರಣದ ಕಂಪ್ಲೀಟ್ ಸತ್ಯ ಹೊರತರಲು ತನಿಖೆ ಇನ್ನು ತೀವ್ರಗೊಳ್ಳಲಿದೆ.