ದೇಶದ ವೈದ್ಯಕೀಯ ಶಿಕ್ಷಣದ ಕನಸು ಕಾಣುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದ 'ನೀಟ್' (NEET-UG) ಪೇಪರ್ ಲೀಕ್ ಹಗರಣ ಈಗ ಜಗಜ್ಜಾಹೀರಾಗಿದೆ. ಆದರೆ, ಈ ಬೃಹತ್ ಜಾಲವನ್ನು ಬಯಲಿಗೆಳೆದಿದ್ದು ಯಾವ ದೊಡ್ಡ ತನಿಖಾ ಸಂಸ್ಥೆಯೂ ಅಲ್ಲ; ಬದಲಾಗಿ ರಾಜಸ್ಥಾನದ ಸೀಕರ್ ಜಿಲ್ಲೆಯ ಒಬ್ಬ ಸಾಮಾನ್ಯ ಹಾಸ್ಟೆಲ್ ಮಾಲೀಕ!
ಪೊಲೀಸರೇ ಇವರ ಮಾತನ್ನು ನಂಬದಿದ್ದರೂ, ಛಲ ಬಿಡದೆ ಹೋರಾಡಿದ ಈ "ರಿಯಲ್ ಹೀರೋ"ನ ಕಥೆ ಈಗ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.
ವಾಟ್ಸಾಪ್ ಮೆಸೇಜ್ ತಂದ ಟ್ವಿಸ್ಟ್
ಎಲ್ಲವೂ ಶುರುವಾಗಿದ್ದು ಕಳೆದ ಮೇ 2ರ ರಾತ್ರಿ. ಈ ಹಾಸ್ಟೆಲ್ ಮಾಲೀಕನ ಮಗ ಕೇರಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಅವನು ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಒಂದು ಪಿಡಿಎಫ್ (PDF) ಫೈಲ್ ಕಳುಹಿಸಿ, "ಅಪ್ಪಾ, ಇದು ನಾಳಿನ ಪರೀಕ್ಷೆಗೆ ಬರಬಹುದಾದ ಗೆಸ್ ಪೇಪರ್ ಇರಬಹುದು, ನಮ್ಮ ಹಾಸ್ಟೆಲ್ ಹುಡುಗರಿಗೆ ಓದಿಕೊಳ್ಳಲು ಹೇಳಿ" ಎಂದು ಮೆಸೇಜ್ ಮಾಡಿದ್ದ. ಆದರೆ ಆ ಮಗನಿಗಾಗಲಿ ಅಥವಾ ತಂದೆಗಾಗಲಿ ಗೊತ್ತಿರಲಿಲ್ಲ, ಅದು ಕೇವಲ ಗೆಸ್ ಪೇಪರ್ ಅಲ್ಲ, ನಾಳೆ ಬರಲಿರುವ ಅಸಲಿ ಹಣೆಬರಹ ಅಂತ!
ಸತ್ಯ ಗೊತ್ತಾದಾಗ ಶಿಕ್ಷಕರೇ ಶಾಕ್!
ಮರುದಿನ ಬೆಳಗ್ಗೆ ಹಾಸ್ಟೆಲ್ ಮಾಲೀಕರು ಆ ಪತ್ರಿಕೆಯನ್ನು ಹಿಡಿದು ವಿದ್ಯಾರ್ಥಿಗಳ ಹತ್ತಿರ ಹೋಗುವಷ್ಟರಲ್ಲಿ ಅವರೆಲ್ಲ ಪರೀಕ್ಷಾ ಕೇಂದ್ರಕ್ಕೆ ಹೊರಟುಹೋಗಿದ್ದರು. ಸುಮ್ಮನೆ ಕುತೂಹಲಕ್ಕೆ ಆ ಪತ್ರಿಕೆಯನ್ನು ಒಬ್ಬ ಕೆಮಿಸ್ಟ್ರಿ ಟೀಚರ್‌ಗೆ ತೋರಿಸಿದರು. ಸಂಜೆ ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳು ವಾಪಸ್ ಬಂದಾಗ ಅಸಲಿ ಪ್ರಶ್ನೆ ಪತ್ರಿಕೆ ನೋಡಿ ಆ ಶಿಕ್ಷಕರು ದಂಗಾಗಿ ಹೋದರು. ಮಗ ಕಳುಹಿಸಿದ್ದ ಪತ್ರಿಕೆಯಲ್ಲಿದ್ದ 135 ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲಿ ಯಥಾವತ್ತಾಗಿ ಬಂದಿದ್ದವು! ಇದು ಕಾಕತಾಳೀಯ ಅಲ್ಲ, ಪಕ್ಕಾ "ಪೇಪರ್ ಲೀಕ್" ಅಂತ ಅವರಿಗರ್ಥವಾಯಿತು.
ಪೊಲೀಸರ ಉದಾಸೀನತೆ ಮತ್ತು ಮಾಲೀಕನ ಛಲ
ತಕ್ಷಣ ಈ ಸಾಕ್ಷ್ಯಗಳನ್ನೆಲ್ಲ ಹಿಡಿದು ಮಾಲೀಕರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದರು. ಆದರೆ ಅಲ್ಲಿನ ಪೊಲೀಸರು ಇವರಿಗೆ ಸಹಾಯ ಮಾಡೋದು ಬಿಟ್ಟು, "ಪರೀಕ್ಷೆ ರದ್ದು ಮಾಡಿಸೋಕೆ ನೀವು ಸುಳ್ಳು ಹೇಳ್ತಿದ್ದೀರಾ" ಅಂತ ದಬಾಯಿಸಿ ವಾಪಸ್ ಕಳುಹಿಸಿದರು. ಯಾವೊಬ್ಬ ಸಾಮಾನ್ಯ ಮನುಷ್ಯನಾದರೂ ಇಷ್ಟಕ್ಕೆ ಸುಮ್ಮನಾಗಿಬಿಡುತ್ತಿದ್ದ. ಆದರೆ ಈ ಹಾಸ್ಟೆಲ್ ಮಾಲೀಕ ಮಾತ್ರ ಸುಮ್ಮನಿರಲಿಲ್ಲ.
ವ್ಯವಸ್ಥೆಗೆ ಶಾಕ್ ಕೊಟ್ಟ ಇಮೇಲ್!
ಪೊಲೀಸರು ನಂಬದಿದ್ದರೆ ಏನಂತೆ ಅಂತ ನೇರವಾಗಿ 'ರಾಷ್ಟ್ರೀಯ ಪರೀಕ್ಷಾ ಸಂಸ್ಥೆ' (NTA) ಗೆ ಇಮೇಲ್ ಮಾಡಿದರು. ಸೋರಿಕೆಯಾದ ಪತ್ರಿಕೆ ಮತ್ತು ಅಸಲಿ ಪತ್ರಿಕೆಯ ಎರಡೂ ಫೋಟೋಗಳನ್ನು ಲಗತ್ತಿಸಿ ಕಳುಹಿಸಿದರು. ಈ ಇಮೇಲ್ ನೋಡಿ ಎಚ್ಚೆತ್ತ ಎನ್‌ಟಿಎ, ಕೂಡಲೇ ತನಿಖೆಗೆ ಆದೇಶಿಸಿತು. ತನಿಖೆ ಆಳಕ್ಕೆ ಇಳಿದಾಗ ಇದು ಕೇವಲ ಸೀಕರ್ ಜಿಲ್ಲೆಗೆ ಮಾತ್ರವಲ್ಲ, ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದವರೆಗೂ ಹಬ್ಬಿರೋದು ಪತ್ತೆಯಾಯಿತು. ಶ್ರೀಮಂತರು ಕೋಟಿ ಕೋಟಿ ಹಣ ಕೊಟ್ಟು ಪತ್ರಿಕೆ ಖರೀದಿಸಿರೋದು ಬಯಲಿಗೆ ಬಂತು.
ಅಂತಿಮವಾಗಿ ನ್ಯಾಯ ಸಿಕ್ಕಿತು!
ಸಾಕ್ಷ್ಯಗಳು ಬೆಟ್ಟದಷ್ಟಿದ್ದ ಕಾರಣ, ಅಂತಿಮವಾಗಿ ಎನ್‌ಟಿಎ ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆ ಒಬ್ಬ ಹಾಸ್ಟೆಲ್ ಮಾಲೀಕನ ಸಮಯಪ್ರಜ್ಞೆ ಇಲ್ಲದಿದ್ದರೆ, ಇವತ್ತು ಅರ್ಹತೆ ಇಲ್ಲದವರು ವೈದ್ಯರಾಗಿ ಬಿಡುತ್ತಿದ್ದರು ಮತ್ತು ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು.