ಕರ್ನಾಟಕದಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿಗೆ ಸೇರಬಯಸುವ ಮಕ್ಕಳಿಗೆ 6 ವರ್ಷ ವಯಸ್ಸು ಪೂರ್ಣಗೊಂಡಿರಲೇಬೇಕು ಎಂಬ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಈ ಮೊದಲು ಸರ್ಕಾರವು ಈ ಬಗ್ಗೆ ಸಡಿಲಿಕೆ ನೀಡಿದ್ದರೂ, ಈ ಬಾರಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೋಷಕರ ಮುಖ್ಯ ಬೇಡಿಕೆ..
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪೋಷಕರು ಸರ್ಕಾರದ ಮುಂದೆ ಒಂದು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ. ಅದೇನೆಂದರೆ, ವಯೋಮಿತಿಯಲ್ಲಿ ಕನಿಷ್ಠ 90 ದಿನಗಳ (3 ತಿಂಗಳು) ವಿನಾಯಿತಿ ನೀಡಬೇಕು. ಅಂದರೆ, 2020ರ ಆಗಸ್ಟ್ ತಿಂಗಳ ಒಳಗೆ ಜನಿಸಿದ ಮಕ್ಕಳಿಗೂ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ನೀಡಬೇಕು ಎಂಬುದು ಅವರ ಒತ್ತಾಯ. ಕೇವಲ ಕೆಲವು ದಿನಗಳ ಅಂತರದಿಂದ ಮಗುವಿನ ಒಂದು ಅಮೂಲ್ಯ ವರ್ಷ ವ್ಯರ್ಥವಾಗಬಾರದು ಎಂಬುದು ಪೋಷಕರ ಕಳಕಳಿಯಾಗಿದೆ.
ಸರ್ಕಾರವು 2022ರಲ್ಲಿಯೇ 6 ವರ್ಷದ ನಿಯಮವನ್ನು ಘೋಷಿಸಿತ್ತು. ಆದರೆ, ಅನೇಕ ಪೋಷಕರು ಆ ಸಮಯದಲ್ಲಿ ಇದನ್ನು ಗಮನಿಸದೆ ತಮ್ಮ ಮಕ್ಕಳನ್ನು ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿಗೆ ನಿಗದಿತ ವಯಸ್ಸಿಗಿಂತ ಮುಂಚೆಯೇ ದಾಖಲಿಸಿದ್ದರು. ಈಗ ಆ ಮಕ್ಕಳು ಯು.ಕೆ.ಜಿ ಮುಗಿಸಿ ಒಂದನೇ ತರಗತಿಗೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಸರ್ಕಾರದ ಹೊಸ ನಿಯಮದ ಪ್ರಕಾರ, ಜೂನ್ ಒಂದನೇ ತಾರೀಖಿಗೆ 6 ವರ್ಷ ತುಂಬದಿದ್ದರೆ ಶಾಲೆಗಳು ಪ್ರವೇಶ ನೀಡಲು ನಿರಾಕರಿಸುತ್ತಿವೆ. ಇದರಿಂದಾಗಿ ಈಗಾಗಲೇ ಮೂರು ವರ್ಷ ಶಾಲೆಯಲ್ಲಿ ಕಲಿತ ಮಕ್ಕಳು ಮತ್ತೆ ಯು.ಕೆ.ಜಿ ತರಗತಿಯನ್ನೇ ಓದಬೇಕಾದ ಅನಿವಾರ್ಯತೆ ಎದುರಾಗಿದೆ.
ಮಾನಸಿಕ ಒತ್ತಡ ಮತ್ತು ಆರ್ಥಿಕ ಹೊರೆ
ಪೋಷಕರ ಪ್ರಕಾರ, ಈಗಾಗಲೇ ಯು.ಕೆ.ಜಿ ಮುಗಿಸಿರುವ ಮಗುವನ್ನು ಮತ್ತೆ ಅದೇ ತರಗತಿಗೆ ಕೂರಿಸುವುದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. "ನನ್ನ ಮಗುವಿಗೆ ಕೇವಲ 15 ದಿನಗಳು ಕಡಿಮೆ ಇವೆ. ಆದರೂ ಶಾಲೆಯವರು ಮತ್ತೆ ಯು.ಕೆ.ಜಿಯಲ್ಲೇ ಇರಲಿ ಎನ್ನುತ್ತಿದ್ದಾರೆ. ಇದರಿಂದ ಮಗುವಿಗೆ ಬೇಸರವಾಗುತ್ತದೆ ಮತ್ತು ಪೋಷಕರಾದ ನಮಗೆ ಒಂದು ವರ್ಷದ ಶಾಲಾ ಶುಲ್ಕದ ಹೊರೆಯೂ ಬೀಳುತ್ತದೆ," ಎಂದು ಪೋಷಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದ ಮುಂದಿನ ನಡೆ?
ರಾಜ್ಯ ಶಿಕ್ಷಣ ನೀತಿ (SEP) ಸಮಿತಿಯು ಕೂಡ 90 ದಿನಗಳ ವಿನಾಯಿತಿ ನೀಡುವಂತೆ ಶಿಫಾರಸು ಮಾಡಿದೆ ಎಂದು ಪೋಷಕರು ಹೇಳುತ್ತಿದ್ದಾರೆ. ಹೀಗಾಗಿ ಸರ್ಕಾರವು ಮಾನವೀಯ ನೆಲೆಯಲ್ಲಿ ಈ ವರ್ಷವಾದರೂ ವಿನಾಯಿತಿ ನೀಡಬೇಕು ಎಂಬ ಪ್ರತಿಭಟನೆಗಳು ತೀವ್ರಗೊಂಡಿವೆ. ಸರ್ಕಾರದ ಅಧಿಕೃತ ನಿಯಮದ ಪ್ರಕಾರ, 2019ರ ಜೂನ್‌ನಿಂದ 2020ರ ಮೇ ಒಳಗೆ ಜನಿಸಿದ ಮಕ್ಕಳು ಮಾತ್ರ ಈ ಸಾಲಿನಲ್ಲಿ ಒಂದನೇ ತರಗತಿಗೆ ಅರ್ಹರಾಗಿರುತ್ತಾರೆ.
ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಸರ್ಕಾರ 6 ವರ್ಷದ ನಿಯಮ ತಂದಿದ್ದರೂ, ಪ್ರಸ್ತುತ ಉದ್ಭವಿಸಿರುವ ಗೊಂದಲವನ್ನು ಬಗೆಹರಿಸಲು ಪೋಷಕರು ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ.