ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶಾಲೆಯಿಂದ ಮನೆಗೆ ಮರಳಿ ಬರುತ್ತಿದ್ದ ನಾಲ್ಕು ಮಕ್ಕಳ ಮೇಲೆ ಹುಚ್ಚು ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
ಮಕ್ಕಳ ಕೈ, ಕಾಲು ಮತ್ತು ಮುಖಕ್ಕೆ ನಾಯಿಗಳು ಕಚ್ಚಿದ್ದು, ತಕ್ಷಣವೇ ಅವರನ್ನು ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿರೋದಾಗಿ ತಿಳಿದುಬಂದಿದೆ.
ಈ ಘಟನೆ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. “ಹುಚ್ಚು ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಕ್ಕಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಮಕ್ಕಳ ಪೋಷಕರು, “ನಮ್ಮ ಮಕ್ಕಳು ಶಾಲೆಯಿಂದ ಮನೆಗೆ ಬರುತ್ತಿದ್ದಾಗಲೇ ದಾಳಿ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂದು ಬೇಡಿಕೊಂಡಿದ್ದಾರೆ. ಗ್ರಾಮಸ್ಥರು ಹುಚ್ಚು ನಾಯಿಗಳ ಕಾಟ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. “ನಮ್ಮ ಮಕ್ಕಳ ಜೀವವೇ ಅಪಾಯದಲ್ಲಿದೆ. ತಕ್ಷಣವೇ ನಾಯಿಗಳನ್ನು ಹಿಡಿದು ನಿಯಂತ್ರಣಕ್ಕೆ ತರಬೇಕು” ಎಂಬುದು ಅವರ ಧ್ವನಿ.
ಹೌದು, ಈ ಘಟನೆ ಕೇವಲ ಒಂದು ಗ್ರಾಮಕ್ಕೆ ಸೀಮಿತವಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿಗಳ ನಿಯಂತ್ರಣದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿತು. ಮಕ್ಕಳ ಸುರಕ್ಷತೆ, ಸಾರ್ವಜನಿಕ ಆರೋಗ್ಯ ಮತ್ತು ಗ್ರಾಮಸ್ಥರ ನೆಮ್ಮದಿ ಕಾಪಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂಬುದು ಎಲ್ಲರ ಒತ್ತಾಯವಾಗಿದೆ.