Feb 16, 2026 Languages : ಕನ್ನಡ | English

ಗೃಹ ಪ್ರವೇಶದಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡಿದ ಮುಸ್ಲಿಂ ಕುಟುಂಬ - ಭಾವೈಕ್ಯತೆಯ ಸಂಕೇತ

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ, ಧಾರ್ಮಿಕ ಸೌಹಾರ್ದತೆಯ ನಿಜವಾದ ಉದಾಹರಣೆಯಾಗಿ ಎಲ್ಲರ ಗಮನ ಸೆಳೆದಿದೆ. ಮುಸ್ಲಿಂ ಕುಟುಂಬದ ಶ್ಯಾಮಿದ್ ಸಾಬ್ ಗುರಿಕಾರ್ ಅವರು ತಮ್ಮ ಹೊಸ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆಯ ಸಂದೇಶವನ್ನು ನೀಡಿದ್ದಾರೆ.

ಗೃಹ ಪ್ರವೇಶದಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡಿದ ಮುಸ್ಲಿಂ ಕುಟುಂಬ
ಗೃಹ ಪ್ರವೇಶದಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡಿದ ಮುಸ್ಲಿಂ ಕುಟುಂಬ

ಹೊಸ ಮನೆಗೆ ಕಾಲಿಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಕುಟುಂಬಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತವೆ. ಆದರೆ ಶ್ಯಾಮಿದ್ ಸಾಬ್ ಅವರು ತಮ್ಮ ಗೃಹ ಪ್ರವೇಶವನ್ನು ವಿಭಿನ್ನವಾಗಿ ಆಚರಿಸಿದರು. ಮಾಲಾಧಾರಿಗಳನ್ನು ಕರೆಸಿ , ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು ಎಂದು ತಿಳಿದುಬಂದಿದೆ. ಹೂವು, ದೀಪ, ಹಾಗೂ ಕುಂಕುಮ ಆಚರಣೆಗಳಲ್ಲಿ ಬಳಸಿದ ಎಲ್ಲವುಗಳು ಅಲ್ಲಿ ನೆರೆದಿದ್ದ ಭಕ್ತರ ಮನಸ್ಸಿನಲ್ಲಿ ಭಕ್ತಿ ಭಾವನೆ ಮೂಡಿಸಿತು ಎಂದರೆ ನಿಜಕ್ಕೂ ತಪ್ಪಾಗಲಾರದು.

ಅಯ್ಯಪ್ಪ ಸ್ವಾಮಿಗೆ ಬೇಡಿಕೊಂಡಂತಹ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಇದೆ ಎಂಬ ನಂಬಿಕೆ ಜನರಲ್ಲಿ ಬಾರಿ ಬೇರೂರಿದೆ ಅದು ನಿಜ ಕೂಡ ಹೌದು. ಶ್ಯಾಮಿದ್ ಸಾಬ್ ಅವರೂ ಇದೇ ನಂಬಿಕೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ, ಅಂದುಕೊಂಡಂತೆ ನೂತನ ಮನೆ ಗೃಹಪ್ರವೇಶ ಮಾಡಿರುವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಅವರ ಮಾತುಗಳಲ್ಲಿ ತೃಪ್ತಿ, ಕೃತಜ್ಞತೆ ಮತ್ತು ಭಾವೈಕ್ಯತೆಯ ಪ್ರತಿಧ್ವನಿ ಸ್ಪಷ್ಟವಾಗಿ ಕೇಳಿಸಿತು.

ಈ ಘಟನೆ ಸ್ಥಳೀಯರ ನಡುವೆ ಚರ್ಚೆಗೆ ಕಾರಣವಾಯಿತು. ಹತ್ತಿರದವರು, ಬಂಧು–ಬಳಗ, ಸ್ನೇಹಿತರು ಎಲ್ಲರೂ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ಆಚರಣೆಗಳನ್ನು ಮೀರಿ, ಮಾನವೀಯತೆ ಮತ್ತು ಒಗ್ಗಟ್ಟನ್ನು ಮುಖ್ಯವಾಗಿಟ್ಟುಕೊಂಡಿರುವುದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.

ಕನಕಗಿರಿ ಪಟ್ಟಣದ ಈ ಗೃಹ ಪ್ರವೇಶವು ಕೇವಲ ಒಂದು ಕುಟುಂಬದ ಸಂತೋಷದ ಕ್ಷಣವಲ್ಲ, ಬದಲಿಗೆ ಇದು ಸಮಾಜಕ್ಕೆ ನೀಡಿದ ಸಂದೇಶವೂ ಹೌದು. ಧರ್ಮ, ಜಾತಿ, ಭಾಷೆ ಸೌಹಾರ್ದತೆಗೆ ಬಂದಾಗ ಉಳಿದವುಗಳೆಲ್ಲಾ ಎರಡನೇ ಸ್ಥಾನದಲ್ಲಿರುತ್ತವೆ. ಶ್ಯಾಮಿದ್ ಸಾಬ್ ಅವರ ಈ ನಡೆ, “ಭಾವೈಕ್ಯತೆ ಎಂದರೆ ಹೃದಯಗಳ ಒಗ್ಗಟ್ಟು” ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ ಎನ್ನಬಹುದು.

ಇಂತಹ ಘಟನೆಗಳು ಸಮಾಜದಲ್ಲಿ ಪರಸ್ಪರ ಗೌರವ, ಸಹಾನುಭೂತಿ ಮತ್ತು ಒಗ್ಗಟ್ಟನ್ನು ಬೆಳೆಸಲು ನೆರವಾಗುತ್ತವೆ. ಗೃಹ ಪ್ರವೇಶದ ಸಂದರ್ಭದಲ್ಲಿ ನಡೆದ ಅಯ್ಯಪ್ಪ ಪೂಜೆ, ಧಾರ್ಮಿಕ ಆಚರಣೆಗಳ ಗಡಿಗಳನ್ನು ಮೀರಿ, ಮಾನವೀಯತೆಯ ಸೇತುವೆ ಕಟ್ಟಿದಂತಾಗಿದೆ.

Latest News