ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಬಂಧನಗೊಂಡಿದ್ದು, ಕೇರಳದ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಡೆದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದೆ. ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಕೇರಳ ಎಸ್‌ಐಟಿ ತಂಡವು ವಿಚಾರಣೆಗೆಂದು ಕರೆಸಿ ನಂತರ ಬಂಧಿಸಿದೆ.
ಅಯ್ಯಪ್ಪಸ್ವಾಮಿ ದೇಗುಲದ ದ್ವಾರ ಪಾಲಕರು ಹಾಗೂ ಬಾಗಿಲು ಮಾಡಿಕೊಡುವ ವೇಳೆ ಟ್ಯಾಂಪರಿಂಗ್ ಮಾಡಲಾಗಿದ್ದು, ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಘಟನೆ ಕೇರಳದಲ್ಲಿ ಭಾರೀ ಸಂಚಲನ ಸೃಷ್ಠಿಸಿತ್ತು.
ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ನಿಂದ ಗೋವರ್ಧನ್ ಚಿನ್ನ ಖರೀದಿಸಿದ್ದಾನೆಂಬ ಆರೋಪದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ಈ ಹಿಂದೆ ಬಳ್ಳಾರಿಯಲ್ಲಿರುವ ಗೋವರ್ಧನ್ ಮನೆ ಹಾಗೂ ಅಂಗಡಿಯಲ್ಲಿ ಎಸ್‌ಐಟಿ ದಾಳಿ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು.
ಕೇರಳ ಹೈಕೋರ್ಟ್ ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡದ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಇದರಿಂದಾಗಿ ತನಿಖೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಈಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣವು ಭಕ್ತರಲ್ಲಿ ಆಘಾತ ಮೂಡಿಸಿದ್ದು, ದೇವಾಲಯದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.