ಜಾತಿ, ಧರ್ಮ, ಮತಾಂತರದ ಹೆಸರಿನಲ್ಲಿ ನಮ್ಮ ಸಮಾಜದಲ್ಲಿ ಆಗಾಗ ಕಲಹಗಳು ನಡೆಯುತ್ತಲೆ ಇರುತ್ತವೆ. ಆದರೆ ಇವುಗಳ ಮಧ್ಯೆ ಮಾನವೀಯತೆ ಹಾಗೂ ಸೌಹಾರ್ದತೆಯ ಸಂದೇಶ ನೀಡುವ ಘಟನೆ ಧಾರವಾಡದಲ್ಲಿ ನಡೆದಿದೆ. 60 ವರ್ಷದ ಈ ಮುಸ್ಲಿಂ ವ್ಯಕ್ತಿ ಲಾಲ್‌ಸಾಬ್ ರಸಲ್‌ಸಾಬ್ ಬುದಿಹಾಳ ಎಂಬುವವರು ಬಸ್ ಡಿಪೋ ಆವರಣದಲ್ಲೇ ಹನುಮಂತನಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದ್ದಾರೆ. ಇದು ಸಧ್ಯ ಹೆಚ್ಚು ಚರ್ಚೆ ಆಗುತ್ತಿದೆ.
ಬುದಿಹಾಳ ಅವರು ಕಳೆದ ವರ್ಷವೇ ದೇವಾಲಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಆದರೆ ಇತ್ತೀಚೆಗೆ ಈ ದೇವಾಲಯದ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ತಮ್ಮ ಸಮುದಾಯದ ಮುಖಂಡರು ಹಾಗೂ ನಿಗಮದ ಉನ್ನತ ಅಧಿಕಾರಿಗಳ ವಿರೋಧದ ನಡುವೆಯೂ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡು ನಿಜಕ್ಕೂ ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ಕೇಳಿ ಬಂದಿದೆ.
ಈ ದೇವಾಲಯ ನಿರ್ಮಾಣಕ್ಕೆ ಅತ್ತ ಸರ್ಕಾರದಿಂದ ಯಾವುದೇ ನೆರವು ಪಡೆದಿಲ್ಲ. ತಮ್ಮ ಸ್ವಂತ ಹಣದಿಂದ ಹಾಗೂ ಇಲಾಖೆಯಲ್ಲಿನ ಸಹೋದ್ಯೋಗಿಗಳ ಸಹಕಾರದಿಂದ ಬುದಿಹಾಳ ಅವರು ದೇವಾಲಯವನ್ನು ಕಟ್ಟಿಸಿದ್ದು ನಿಜಕ್ಕೂ ಎಲ್ಲರೂ ಮೆಚ್ಚುವಂಥ ಕೆಲಸ ಎಂದು ಹೇಳಬಹುದು. ಇದು ಅವರ ನಂಬಿಕೆ, ಧರ್ಮನಿರಪೇಕ್ಷತೆ ಮತ್ತು ಮಾನವೀಯತೆಯ ಸಂಕೇತವಾಗಿದೆ.
ಬುದಿಹಾಳ ಅವರು ಹೊಸ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾಗ, ವಾಹನ ನಿಲುಗಡೆ ಸ್ಥಳದಲ್ಲಿ ಹನುಮಂತನ ವಿಗ್ರಹ ಬಿದ್ದಿರುವುದನ್ನು ಒಮ್ಮೆ ಕಂಡಿದ್ದರು. ದೇವರನ್ನು ಇಂತಹ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಬೇಸರವಾಯಿತು. ಅದೇ ಸಂದರ್ಭದಲ್ಲಿ ದೇವಾಲಯ ನಿರ್ಮಿಸಲು ಅಂದೇ ನಿರ್ಧರಿಸಿದರು. ಅವರ ಮಾತುಗಳಲ್ಲಿ, “ದೇವರನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವು ತಂದಿತು. ಹೀಗಾಗಿ ದೇವಾಲಯ ನಿರ್ಮಿಸಲು ನಿರ್ಧರಿಸಿದೆ” ಎಂದು ಹೇಳಿಕೊಂಡಿದ್ದಾರೆ.
ಈ ಘಟನೆ ಸಮಾಜಕ್ಕೆ ಅತಿ ದೊಡ್ಡ ಪಾಠವಾಗಿದೆ ನೋಡಿ ಧರ್ಮ, ಜಾತಿ, ಮತಾಂತರಗಳ ಹೆಸರಿನಲ್ಲಿ ಕಲಹ ಮಾಡುವ ಬದಲು, ಪರಸ್ಪರ ಗೌರವ, ಸಹಕಾರ ಮತ್ತು ಮಾನವೀಯತೆ ಮುಖ್ಯ ಎಂಬುದನ್ನು ಬುದಿಹಾಳ ಅವರ ಈ ಕಾರ್ಯ ತೋರಿಸಿದೆ ಎನ್ನಬಹದು. ಹನುಮಾನ್ ದೇವಾಲಯ ನಿರ್ಮಿಸಿದ ಈ ಮುಸ್ಲಿಂ ವ್ಯಕ್ತಿ ಇದೀಗ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಧಾರವಾಡದ ಬಸ್ ಡಿಪೋ ಆವರಣದಲ್ಲಿ ನಿರ್ಮಿಸಲಾದ ಈ ಹನುಮಾನ್ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಮಾನವೀಯತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಲಾಲ್‌ಸಾಬ್ ಬುದಿಹಾಳ ಅವರ ಕಾರ್ಯವು ಧರ್ಮಾಂತರದ ಅಂತರಗಳನ್ನು ಮೀರಿ, ಒಗ್ಗಟ್ಟಿನ ಸಂದೇಶ ನೀಡಿದೆ. ಸಮಾಜದಲ್ಲಿ ಇಂತಹ ಸೌಹಾರ್ದತೆಯ ಕಾರ್ಯಗಳು ಹೆಚ್ಚಾದರೆ, ನಿಜವಾದ ಶಾಂತಿ ಮತ್ತು ಪ್ರಗತಿ ಸಾಧ್ಯವಾಗುತ್ತದೆ. ಇವರ ಕೆಲಸಕ್ಕೆ ಒಂದು ಮೆಚ್ಚುಗೆ ಇರಲಿ.