ಅಣ್ಣ–ತಂಗಿ ಸಂಬಂಧವನ್ನು ನಮ್ಮ ಸಮಾಜದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಈ ಒಂದು ದುರ್ಘಟನೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದೆ. ಮೃತಳ ಹೆಸರು ರಾಮಲಕ್ಷ್ಮಿ ಎಂದು, ವಯಸ್ಸು ಕೇವಲ 21 ವರ್ಷ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ ತನ್ನ ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡಿದ್ದಳು. ಆಕೆಯ ತಂದೆ ಆಂಜನಪ್ಪ, ಬಾಗೇಪಳ್ಳಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ. ಇತ್ತ 30 ವರ್ಷದ ಕೃಷ್ಣ ಎಂಬುವವನು ಆಕೆಗೆ ಅಣ್ಣನ ವರಸೆ ಆಗಬೇಕಾದ ವ್ಯಕ್ತಿ. ಆಂಜನಪ್ಪ ಮತ್ತು ಕೃಷ್ಣನ ತಂದೆ ರವಣಪ್ಪ ಸ್ವಂತ ಅಣ್ಣ–ತಮ್ಮಂದಿರು. ಅಂದರೆ ಕೃಷ್ಣ ಮತ್ತು ರಾಮಲಕ್ಷ್ಮಿ ಸೋದರ ಸಂಬಂಧಿಗಳು.
ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ಅನರ್ಹ ಸಂಬಂಧ ಮುಂದುವರಿದಿತ್ತು. ಗ್ರಾಮಸ್ಥರು ಹಾಗೂ ಹಿರಿಯರು ಎಷ್ಟೇ ಬುದ್ಧಿ ಹೇಳಿದರೂ ಫಲ ನೀಡಲಿಲ್ಲ. ಕೃಷ್ಣನಿಗೆ ಪತ್ನಿ ಮತ್ತು ಮಗು ಇದ್ದರೂ ಸಹ, ರಾಮಲಕ್ಷ್ಮಿಯನ್ನು ಬಿಡದೆ ಆಕೆಯನ್ನು ಪೆರೇಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ‘ಕಳ್ಳ ಸಂಸಾರ’ ನಡೆಸುತ್ತಿದ್ದ ಎಂದು ಕೇಳಿ ಬಂದಿದೆ. ಆದರೆ ಇದೇ ಮನೆಯಲ್ಲಿ ರಾಮಲಕ್ಷ್ಮಿ ಜೀವಹಾನಿ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಣ್ಣನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ತಂಗಿ, ಇಂದು ಹೆಣವಾಗಿ ಹೊರಬಂದಿದ್ದಾಳೆ. ಈ ಘಟನೆ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.
ಪೆರೇಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೃಷ್ಣ ಈಗ ನಾಪತ್ತೆಯಾಗಿದ್ದು, ಅವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ನಿಜಾಸತ್ಯ ಹೊರಬರುವ ನಿರೀಕ್ಷೆಯಿದೆ. ಇದು ಕೇವಲ ಒಂದು ಜೀವಹಾನಿಯಲ್ಲ, ಪವಿತ್ರ ಸಂಬಂಧಗಳ ಅಂತ್ಯ ಎಂದು ಜನರು ಹೇಳುತ್ತಿದ್ದಾರೆ. ಸಮಾಜ ಮತ್ತು ಕುಟುಂಬ ಹಾಕಿಕೊಟ್ಟ ಸಂಸ್ಕಾರ ಮರೆತರೆ ಅಂತ್ಯ ಹೀಗೆಯೇ ಇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೆಣ್ಣುಮಕ್ಕಳು ಇಂತಹ ಅಕ್ರಮ ಸಂಬಂಧಗಳ ಬಲೆಗೆ ಬೀಳಬಾರದು ಎಂಬ ಪಾಠವನ್ನು ಈ ಘಟನೆ ನೀಡಿದೆ.
ತಪ್ಪು ದಾರಿಯಲ್ಲಿ ನಡೆದ ಪ್ರೀತಿ ಎಂದಿಗೂ ಸುಖಾಂತ್ಯ ಕಾಣುವುದಿಲ್ಲ. ಸಂಬಂಧಗಳ ನಡುವೆ ಕನಿಷ್ಠ ಗೌರವ ಇಲ್ಲದಿದ್ದರೆ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಪವಿತ್ರ ಸಂಬಂಧಗಳಿಗೆ ಕೊಳ್ಳಿ ಇಡುವ ಮುನ್ನ ಹತ್ತು ಬಾರಿ ಯೋಚಿಸಬೇಕಿದೆ. ಸದ್ಯಕ್ಕೆ ಕೃಷ್ಣನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಮಲಕ್ಷ್ಮಿಯ ಸಾವಿಗೆ ನ್ಯಾಯ ಸಿಗುತ್ತದೆಯೇ ಅನ್ನೋದನ್ನು ಕಾದು ನೋಡಬೇಕಿದೆ.