ಕರ್ನಾಟಕದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಸಮಸ್ಯೆಯ ಬಿಸಿ ಇದೀಗ ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳು, ಹೋಟೆಲ್‌ಗಳು ಮತ್ತು ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ತೀವ್ರವಾಗಿ ತಟ್ಟಿದೆ. ಇದರಿಂದಾಗಿ ಸಾವಿರಾರು ಮಂದಿ ನಿತ್ಯದ ಊಟದ ವ್ಯವಸ್ಥೆಗಾಗಿ ಪರದಾಡುವಂತಾಗಿದೆ.
ಬೆಂಗಳೂರಿನ ಅನೇಕ ಪಿಜಿ ಮಾಲೀಕರು ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆಯಿಲ್ಲದ ಕಾರಣ ಮಧ್ಯಾಹ್ನದ ಊಟವನ್ನು ಸ್ಥಗಿತಗೊಳಿಸಿದ್ದಾರೆ. ಗ್ಯಾಸ್ ಸಮಸ್ಯೆ ಬಗೆಹರಿಯುವವರೆಗೂ ಊಟ ನೀಡಲು ಸಾಧ್ಯವಿಲ್ಲ ಎಂದು ಮಾಲೀಕರು ಕೈಚೆಲ್ಲಿದ್ದಾರೆ. ರಾತ್ರೋರಾತ್ರಿ ಎಲೆಕ್ಟ್ರಿಕ್ ಸ್ಟವ್ ಅಥವಾ ಸೌದೆ ಒಲೆಗಳಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ತಮಗೆ ಆರ್ಥಿಕವಾಗಿ ಮತ್ತು ಪ್ರಾಯೋಗಿಕವಾಗಿ ಕಷ್ಟ ಎಂದು ಮಾಲೀಕರು ಅಲವತ್ತುಕೊಂಡಿದ್ದಾರೆ.
ಇದರ ಪರಿಣಾಮವಾಗಿ, ಪಿಜಿ ಮಾಲೀಕರ ಸಂಘವು ಊಟದ ಮೆನುವನ್ನೇ ಬದಲಾಯಿಸಲು ಸೂಚಿಸಿದೆ. ಗ್ಯಾಸ್ ಹೆಚ್ಚು ಖರ್ಚಾಗುವ ಚಪಾತಿ, ದೋಸೆಗಳಂತಹ ಪದಾರ್ಥಗಳನ್ನು ಕೈಬಿಟ್ಟು, ರೈಸ್ ಐಟಂಗಳನ್ನು ತಯಾರಿಸಲು ಆದ್ಯತೆ ನೀಡಲಾಗುತ್ತಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ತಮ್ಮ ಊರು ಬಿಟ್ಟು ಬಂದಿರುವ ಯುವಕ-ಯುವತಿಯರು ಮಾಸಿಕ ಶುಲ್ಕ ಪಾವತಿಸಿದರೂ, ಸದ್ಯ ಊಟವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೊರಗಿನ ಹೋಟೆಲ್‌ಗಳಲ್ಲೂ ಇದೇ ಸಮಸ್ಯೆ ಇರುವುದರಿಂದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಸರ್ಕಾರಿ ಶಾಲೆಗಳ ಬಿಸಿಯೂಟದ ಮೇಲೆ ಗಂಭೀರ ಪರಿಣಾಮ
ಸಿಲಿಂಡರ್ ಕೊರತೆಯು ಸರ್ಕಾರಿ ಶಾಲೆಗಳ ಬಿಸಿಯೂಟದ ಮೇಲೂ ಕರಾಳ ನೆರಳು ಬೀರಿದೆ. ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ತಿಂಗಳಿಗೆ ಹಲವು ಸಿಲಿಂಡರ್‌ಗಳ ಅವಶ್ಯಕತೆಯಿರುತ್ತದೆ. ಆದರೆ ಏಜೆನ್ಸಿಗಳಿಂದ ಸಿಲಿಂಡರ್‌ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಉದಾಹರಣೆಗೆ, ಹಳೇ ಬಾಗಲಕೋಟೆಯ ಸರ್ಕಾರಿ ಶಾಲೆಯೊಂದರಲ್ಲಿ ಏಜೆನ್ಸಿಯವರು "ಒಂದೇ ಸಿಲಿಂಡರ್‌ನಲ್ಲಿ ಅಡುಗೆ ಅಡ್ಜಸ್ಟ್ ಮಾಡಿಕೊಳ್ಳಿ" ಎಂದು ಸೂಚಿಸಿರುವುದು ಅಡುಗೆ ಸಿಬ್ಬಂದಿಯನ್ನು ಆತಂಕಕ್ಕೆ ತಳ್ಳಿದೆ.
ಬೃಹತ್ ಪ್ರಮಾಣದಲ್ಲಿ ಮಕ್ಕಳಿಗೆ ಅಡುಗೆ ಮಾಡಲು ಒಂದು ಸಿಲಿಂಡರ್ ಸಾಲುವುದಿಲ್ಲ ಎಂಬುದು ಶಿಕ್ಷಕರ ಅಳಲು.
ಗೃಹ ಬಳಕೆಯ (14.2 ಕೆಜಿ) ಸಿಲಿಂಡರ್‌ಗಳು ತಿಂಗಳಿಗೆ ಒಂದರಂತೆ ಸಿಗುತ್ತಿರುವುದು ಮನೆಗಳಿಗೆ ಸ್ವಲ್ಪ ನೆಮ್ಮದಿ ನೀಡಿದರೂ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಮಾತ್ರ ದಿನೇ ದಿನೇ ಉಲ್ಬಣಿಸುತ್ತಿದೆ. ಶಾಲಾ ಶಿಕ್ಷಕರು ಮತ್ತು ಪಿಜಿ ಮಾಲೀಕರು ಈ ಗಂಭೀರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.
ಈ ತಾತ್ಕಾಲಿಕ ಅನಿಲ ಅಭಾವವು ಶೀಘ್ರವೇ ಬಗೆಹರಿಯದಿದ್ದರೆ, ಮುಂದಿನ ದಿನಗಳಲ್ಲಿ ಶಾಲಾ ಬಿಸಿಯೂಟ ಯೋಜನೆ ಮತ್ತು ಪಿಜಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.