ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ, ಕಳ್ಳರ ಕಣ್ಣು ಈಗ ಚಿನ್ನದಂಗಡಿಗಳ ಮೇಲೆ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಹೃದಯಭಾಗದಲ್ಲೇ ಖದೀಮರು ತಮ್ಮ ಕೈಚಳಕ ತೋರಿಸಿದ್ದು, ಪ್ರಸಿದ್ಧ ಜ್ಯೂವೆಲರಿ ಶಾಪ್‌ವೊಂದಕ್ಕೆ ಕನ್ನ ಹಾಕಿ ಬೆಲೆಬಾಳುವ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ಚಿಂತಾಮಣಿ ನಗರದ ಅಜಾದ್ ಚೌಕ್‌ನಲ್ಲಿರುವ ಶಿವ ಜ್ಯೂವಲರಿ ಶಾಪ್ ಈ ಕಳ್ಳತನಕ್ಕೆ ಗುರಿಯಾದ ಅಂಗಡಿ. ವ್ಯಾಪಾರಿ ಶಿವಕುಮಾರ್ ಅವರಿಗೆ ಸೇರಿದ ಈ ಅಂಗಡಿಯಲ್ಲಿ ಎಂದಿನಂತೆ ವ್ಯಾಪಾರ ಮುಗಿಸಿ ರಾತ್ರಿ ಮನೆಗೆ ಹೋಗಿದ್ದಾಗ. ಇದನ್ನೇ ಹೊಂಚು ಹಾಕಿದ್ದ ಕಳ್ಳರು, ತಡರಾತ್ರಿ ಅಂಗಡಿಯ ಬೀಗ ಮುರಿದು ಒಳನುಗ್ಗಿ, ಅಂಗಡಿಯಲ್ಲಿದ್ದ ಕಪಾಟುಗಳನ್ನು ಜಾಲಾಡಿರುವ ಖದೀಮರು, ಸಿಕ್ಕಸಿಕ್ಕ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಬೆಳಿಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕ ಶಿವಕುಮಾರ್ ಅವರಿಗೆ ಬಾಗಿಲು ಮುರಿದಿರುವುದು ಕಂಡು ದಂಗಾಗಿದ್ದಾರೆ. ಒಳಗೆ ಹೋಗಿ ನೋಡಿದಾಗ ಎಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಬಂಗಾರ ಮಾಯವಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿದೆ. ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಲೇ ಕಳ್ಳರು ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರ ಜೊತೆಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕೂಡ ಆಗಮಿಸಿ ಕಳ್ಳರಿಗಾಗಿ ಸುಳಿವು ಸಂಗ್ರಹಿಸಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಸ್ತುತ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.