ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಚಿನ್ನದ ನಿಕ್ಷೇಪ ಪತ್ತೆಯ ಸಾಧ್ಯತೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಕಳೆದ ಒಂದು ವಾರದಿಂದ ಹೈಟೆಕ್ ಸೆನ್ಸಾರ್‌ಗಳ ಮೂಲಕ ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ದತ್ತಾಂಶ ಸಂಗ್ರಹಿಸುತ್ತಿದೆ.
ಕೋಲಾರ ಜಿಲ್ಲೆ ಚಿನ್ನದ ನಾಡೆಂದೇ ಖ್ಯಾತಿ ಪಡೆದಿದ್ದರೆ, ಅದರ ಭಾಗವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಚಿನ್ನದ ನಾಡಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಚಿನ್ನಕ್ಕಾಗಿ ಹೆಲಿಕಾಪ್ಟರ್‌ಗಳ ಮೂಲಕ ನಿರಂತರ ಸರ್ವೇ ನಡೆಯುತ್ತಿದ್ದು, ಗುಡಿಬಂಡೆ ತಾಲೂಕಿನಲ್ಲಿ ಸರ್ವೇ ತಂಡ ಬೀಡು ಬಿಟ್ಟಿದೆ. ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಪ್ಯಾಡ್ ನಿರ್ಮಾಣಗೊಂಡಿದ್ದು, ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದುಕೊಂಡಿದೆ.
ಪಕ್ಕದ ಗಡಿ ಆಂಧ್ರಪ್ರದೇಶದ ಕದಿರಿ ಭಾಗದಲ್ಲಿ ಈಗಾಗಲೇ ಚಿನ್ನದ ನಿಕ್ಷೇಪ ಪತ್ತೆಯಾದ ಹಿನ್ನೆಲೆಯಲ್ಲಿ, ಅದೇ ಸಾಲಿನಲ್ಲಿ ಇರುವ ಗುಡಿಬಂಡೆ ಪ್ರದೇಶದಲ್ಲಿ ಚಿನ್ನದ ಅದಿರು ಪತ್ತೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ಸಿಮೆಂಟ್ ಕಾರ್ಖಾನೆಗಳಿಗೆ ಬಳಸುವ ಲ್ಯಾಟರೇಟ್ ಖನಿಜದಂತೆ, ಚಿನ್ನದ ನಿಕ್ಷೇಪವೂ ಆರ್ಥಿಕತೆಗೆ ಮಹತ್ವದ ಬೂಸ್ಟ್ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸ್ಥಳೀಯರು, “ಒಂದು ವೇಳೆ ಇಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದರೆ, ನಮ್ಮ ಜಿಲ್ಲೆಯ ಭವಿಷ್ಯವೇ ಬದಲಾಗಬಹುದು” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿನ್ನದ ನಾಡೆಂದು ಖ್ಯಾತಿ ಪಡೆಯುವ ಸಾಧ್ಯತೆ, ಜನರಲ್ಲಿ ಹೆಮ್ಮೆ ಮೂಡಿಸಿದೆ. ಈ ಸರ್ವೇ ಕಾರ್ಯವು ಕೇವಲ ವಿಜ್ಞಾನಿಗಳ ಪರಿಶೀಲನೆ ಮಾತ್ರವಲ್ಲ, ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಹೊಸ ದಾರಿ ತೋರಿಸುವ ಸಾಧ್ಯತೆಯೂ ಹೌದು. ಚಿನ್ನದ ನಿಕ್ಷೇಪ ಪತ್ತೆಯಾದರೆ, ಉದ್ಯೋಗಾವಕಾಶಗಳು, ಕೈಗಾರಿಕಾ ಬೆಳವಣಿಗೆ ಮತ್ತು ಸ್ಥಳೀಯ ಅಭಿವೃದ್ಧಿಗೆ ಹೊಸ ಬಾಗಿಲು ತೆರೆಯಲಿದೆ.