ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಭೀಕರ ಕೊ*ಲೆಯೊಂದು ನಡೆದಿದೆ. ಹೌದು, ಸೂಪರ್ ಹಿಟ್ ಸಿನಿಮಾ 'ದೃಶ್ಯಂ' ಮಾದರಿಯಲ್ಲೇ ಸ್ಕೆಚ್ ಹಾಕಿ, ಗೃಹಿಣಿಯೊಬ್ಬಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸ್ವತಃ ಕಟ್ಟಿಕೊಂಡ ಗಂಡನೇ ಸುಪಾರಿ ಕೊಟ್ಟು ಹೆಂಡತಿಯನ್ನು ಮುಗಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆ ಜಿಲ್ಲಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದ ಕಂದವಾರ ಗ್ರಾಮದಲ್ಲಿ ಈ ರೋಮಾಂಚನಕಾರಿ ಹಾಗೂ ದುರ್ದೈವಿ ಘಟನೆ ನಡೆದಿದೆ.
ಸಿನಿಮಾ ಸ್ಟೈಲ್‌ನಲ್ಲಿ ಮರ್ಡರ್ ಪ್ಲಾನ್!
ಪುಷ್ಪಮಾಲ (28) ಕೊಲೆಯಾದ ದುರ್ದೈವಿ ಗೃಹಿಣಿ. ಈಕೆಯನ್ನು ನಾಲ್ಕು ವರ್ಷಗಳ ಹಿಂದೆ ಭರತ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಮೂರೇ ತಿಂಗಳಿಗೆ ಗಂಡನ ಅಸಲಿ ಬಣ್ಣ ಬಯಲಾಗಿತ್ತು. ಅತ್ತೆ, ಗಂಡ ಮತ್ತು ನಾದಿನಿ ಸೇರಿಕೊಂಡು ಪುಷ್ಪಮಾಲಾಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಭೀಕರ ಕಿರುಕುಳ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ.
ಕೊನೆಗೆ ಈಕೆಯನ್ನು ಜೀವಂತವಾಗಿ ಇಡಬಾರದು ಎಂದು ನಿರ್ಧರಿಸಿದ ಗಂಡನ ಮನೆಯವರು, ಸಿನಿಮಾ ಸ್ಟೈಲ್‌ನಲ್ಲಿ ಮರ್ಡರ್ ಸ್ಕೆಚ್ ಹಾಕಿದ್ದಾರೆ. ಪೊಲೀಸರಿಗೆ ಹಾಗೂ ಯಾರಿಗೂ ಸಂಶಯ ಬಾರದಂತೆ ತಾವೆಲ್ಲೋ ದೂರ ಇದ್ದೇವೆ ಎಂದು ತೋರಿಸಿಕೊಳ್ಳಲು 'ದೃಶ್ಯಂ' ಚಿತ್ರದ ಮಾದರಿಯಲ್ಲಿ ಪ್ಲಾನ್ ಮಾಡಿದ್ದಾರೆ.
ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ದೇವಸ್ಥಾನಕ್ಕೆ ಹೋದ್ರು!
ಪ್ಲಾನ್ ಪ್ರಕಾರ, ಘಟನೆ ನಡೆದ ದಿನ ಗಂಡ ಭರತ್ ಹಾಗೂ ಆತನ ಕುಟುಂಬಸ್ಥರೆಲ್ಲಾ ಸೇರಿ "ನಾವು ದೇವಸ್ಥಾನಕ್ಕೆ ಹೋಗಿ ಬರುತ್ತೇವೆ" ಎಂದು ಹೇಳಿ ಪುಷ್ಪಮಾಲ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ತಾವು ಮನೆಯಲ್ಲಿ ಇಲ್ಲದ ಸಮಯ ನೋಡಿ, ಮೊದಲೇ ಮಾತುಕತೆ ನಡೆಸಿದ್ದ ಸುಪಾರಿ ಕಿಲ್ಲರ್‌ಗಳನ್ನು ಮನೆಗೆ ಕಳುಹಿಸಿದ್ದಾರೆ.
ಒಂಟಿಯಾಗಿದ್ದ ಪುಷ್ಪಮಾಲ ಸಿಕ್ಕಿದ್ದೇ ಚಾನ್ಸ್ ಎಂದು ನುಗ್ಗಿದ ಹಂತಕರು, ಆಕೆಯನ್ನು ಭೀಕರವಾಗಿ ಕೊ*ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
"ರಾತ್ರಿ ಕಳ್ಳರು ಬಂದು ಕೊಂದಿದ್ದಾರೆ" ಎಂದು ಕಟ್ಟುಕಥೆ!
ದೇವಸ್ಥಾನದಿಂದ ವಾಪಸ್ ಬಂದವರಂತೆ ನಾಟಕವಾಡಿದ ಗಂಡ ಹಾಗೂ ಆತನ ಕುಟುಂಬಸ್ಥರು, ಮನೆಯಲ್ಲಿ ಪುಷ್ಪಮಾಲ ಶವವಾಗಿ ಬಿದ್ದಿರುವುದನ್ನು ನೋಡಿ ಹೊಸ ಕಥೆ ಕಟ್ಟಿದ್ದಾರೆ. "ನಾವು ಮನೆಯಲ್ಲಿ ಇರಲಿಲ್ಲ, ರಾತ್ರಿ ಯಾರೋ ಕಳ್ಳರು ನುಗ್ಗಿ ನಮ್ಮ ಸೊಸೆಯನ್ನು ಕೊ*ಲೆ ಮಾಡಿ ದೋಚಿದ್ದಾರೆ" ಎಂದು ಹಳ್ಳಿಯವರ ಮುಂದೆ ಹಾಗೂ ಪೊಲೀಸರ ಮುಂದೆ ವಾದ ಮಾಡಲು ಶುರು ಮಾಡಿದ್ದಾರೆ.
ಆದರೆ, ಮೃತ ಹೆಣ್ಣುಮಗಳ ಪೋಷಕರು ಮತ್ತು ಸಂಬಂಧಿಕರು ಸ್ಥಳಕ್ಕೆ ಬಂದಾಗ ಗಂಡನ ಮನೆಯವರ ನಾಟಕ ಬಯಲಾಗಿದೆ. "ವರದಕ್ಷಿಣೆಗಾಗಿ ನನ್ನ ಮಗಳನ್ನು ದಿನಾ ಪೀಡಿಸುತ್ತಿದ್ದರು. ತಾವೇ ಪ್ಲಾನ್ ಮಾಡಿ, ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಈಗ ಕಳ್ಳರ ಮೇಲೆ ಗೂಬೆ ಕೂರಿಸುತ್ತಿದ್ದಾರೆ" ಎಂದು ಪುಷ್ಪಮಾಲ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಆಸ್ಪತ್ರೆಗೆ ಶವ ರವಾನೆ, ತನಿಖೆ ತೀವ್ರ
ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೈ ಅಲರ್ಟ್:
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಪುಷ್ಪಮಾಲ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪೋಷಕರ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಗಂಡ ಭರತ್ ಹಾಗೂ ಆತನ ಕುಟುಂಬಸ್ಥರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಳ್ಳರ ಕಥೆ ಸುಳ್ಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಸುಪಾರಿ ಪಡೆದ ಹಂತಕರು ಯಾರು? ಈ ಪ್ಲಾನ್‌ನಲ್ಲಿ ಯಾರ್ಯಾರ ಕೈವಾಡ ಇದೆ ಅನ್ನೋದು ಪೊಲೀಸರ ಇನ್ವೆಸ್ಟಿಗೇಷನ್ ಬಳಿಕ ಪೂರ್ತಿಯಾಗಿ ಹೊರಬರಬೇಕಿದೆ. ಮದುವೆಯಾಗಿ ನಾಲ್ಕೇ ವರ್ಷಕ್ಕೆ ಹೆಣ್ಣುಮಗಳೊಬ್ಬಳು ಹೀಗೆ ಹೆಣವಾಗಿ ಬಿದ್ದಿರುವುದು ಇಡೀ ಕಂದವಾರ ಗ್ರಾಮವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.