ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಸುಗಳ ಸರಣಿ ಸಾವು ಸಂಭವಿಸಿದ್ದು, ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೌದು, ಹನೂರು ತಾಲೂಕಿನ ಶೆಟ್ಟಿಹಳ್ಳಿ ಮತ್ತು ಗೋಪಿಶೆಟ್ಟಿಯೂರು ಗ್ರಾಮಗಳಲ್ಲಿ ಒಟ್ಟು 11 ಹಸುಗಳು ನಿಗೂಢವಾಗಿ ಮೃತಪಟ್ಟಿವೆ ಎನ್ನಲಾಗುತ್ತಿದೆ. ವಿಷಪೂರಿತ ಆಹಾರ ಅಥವಾ ನೀರು ಸೇವನೆಯಿಂದ ಈ ಸಾವು ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಶೆಟ್ಟಿಹಳ್ಳಿ ಗ್ರಾಮದಲ್ಲಿ ಪರಶಿವ ಎಂಬುವವರಿಗೆ ಸೇರಿದ 8 ಹಸುಗಳ ಪೈಕಿ 6 ಹಸುಗಳು ನಿನ್ನೆ ಮೃತಪಟ್ಟಿವೆ. ಜಮೀನಿನ ಪಕ್ಕದಲ್ಲೇ ಹಸುಗಳ ಮೃತದೇಹಗಳು ಪತ್ತೆಯಾಗಿದ್ದು, ಬೆಳಗ್ಗೆ ಮೇವು ಹಾಕಲು ತೆರಳಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಚೈತ್ರಾ ಹಾಗೂ ಪಶುವೈದ್ಯಾಧಿಕಾರಿ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕವಾಗಿ ವಿಷಪೂರಿತ ಆಹಾರ ಅಥವಾ ನೀರು ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಉಳಿದ ಎರಡು ಹಸುಗಳು ನಾಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಈ ಘಟನೆ ಇನ್ನೂ ಮಾಸುವ ಮುನ್ನವೇ, ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ತಂಗವೇಲು ಎಂಬ ರೈತರಿಗೆ ಸೇರಿದ 5 ಹಸುಗಳು ನಿಗೂಢವಾಗಿ ಮೃತಪಟ್ಟಿವೆ. ಜೀವನಾಧಾರವಾಗಿದ್ದ ಹಸುಗಳನ್ನು ಕಳೆದುಕೊಂಡ ರೈತ ಕುಟುಂಬಗಳು ಕಣ್ಣೀರಿಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇತ್ತ, ಚಾಮರಾಜನಗರ ಜಿಲ್ಲಾಧಿಕಾರಿ ಭವನದಲ್ಲಿ ನಡೆದ ಸಭೆಗೆ ಅಧಿಕಾರಿಗಳು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬಿನಿ ಹಿನ್ನೀರು, ಬಂಡೀಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ರೆಸಾರ್ಟ್, ಹೋಂಸ್ಟೇ ಹಾಗೂ ಹೋಟೆಲ್ ತೆರವು ವಿಚಾರವಾಗಿ ಸಭೆ ಕರೆಯಲಾಗಿತ್ತು. ಆದರೆ ಸುಮಾರು ಎರಡು ಗಂಟೆಗಳ ತಡವಾದ ಕಾರಣ ಸಭೆಯಲ್ಲಿ ಗದ್ದಲ ಉಂಟಾಯಿತು. ಹಸುಗಳ ಸಾವಿನ ಹಿಂದೆ ಇರುವ ನಿಜವಾದ ಕಾರಣ ಪತ್ತೆ ಮಾಡಿ, ರೈತರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ದಿನೇ ದಿನೇ ಹೆಚ್ಚುತ್ತಿದೆ. ಈ ಘಟನೆ ಚಾಮರಾಜನಗರದಲ್ಲಿ ಪಶುಸಂಗೋಪನೆ ಹಾಗೂ ಗ್ರಾಮೀಣ ಜೀವನಕ್ಕೆ ದೊಡ್ಡ ಆಘಾತವನ್ನುಂಟುಮಾಡಿದ್ದು, ಅಧಿಕಾರಿಗಳ ತ್ವರಿತ ಕ್ರಮದ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ.