ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಗ್ಲೆನ್ ಫಿಲಿಪ್ಸ್ (48) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲು ವಿಫಲರಾದರು.
ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರಿಂದ ಅವರು ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು. ಟೈಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕೂಡ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಮುನ್ನಡೆ ನೀಡಿದರು.
ಪವರ್ ಪ್ಲೇನಲ್ಲಿ ಭಾರತ ತಂಡ ಅಬ್ಬರಿಸಿ 19 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ಇದಕ್ಕೂ ಮೊದಲು 2023ರಲ್ಲಿ ಬಾಂಗ್ಲಾದೇಶ ವಿರುದ್ಧ 22 ಎಸೆತಗಳಲ್ಲಿ 50 ರನ್ ಬಾರಿಸಿತ್ತು. ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 6 ಓವರ್‌ಗಳಲ್ಲಿ 94 ರನ್ ಗಳಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಪವರ್ ಪ್ಲೇ ಸ್ಕೋರ್ ದಾಖಲಿಸಿತು. ವಿಶ್ವದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿ 95 ರನ್ ಆಗಿದೆ.
ಸರಣಿ ಗೆಲುವಿನ ದೃಷ್ಟಿಯಿಂದ ಭಾರತ ಮತ್ತೊಂದು ಸಾಧನೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ 3-0 ಮುನ್ನಡೆ ಸಾಧಿಸುವ ಮೂಲಕ ಭಾರತ ಸತತ 11ನೇ ಟಿ20 ಸರಣಿ ಗೆದ್ದಿದೆ. ಇದರಿಂದ 2016 ಮತ್ತು 2018ರಲ್ಲಿ ಪಾಕಿಸ್ತಾನ ಸಾಧಿಸಿದ ದಾಖಲೆಗೆ ಸಮಗಟ್ಟಿದೆ. ಅತಿ ಹೆಚ್ಚು ಎಸೆತ ಬಾಕಿ ಇರುವಾಗ ಗುರಿ ಮುಟ್ಟಿದ ವಿಶ್ವದಾಖಲೆಯನ್ನೂ ಭಾರತ ನಿರ್ಮಿಸಿದೆ. 154 ರನ್ ಗುರಿಯನ್ನು 60 ಎಸೆತಗಳು ಬಾಕಿ ಇರುವಾಗ ಮುಟ್ಟಿದ ಭಾರತ, ಈ ಮೊದಲು ವೆಸ್ಟ್ ಇಂಡೀಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. ಒಟ್ಟಾರೆ, ನ್ಯೂಜಿಲೆಂಡ್ ವಿರುದ್ಧದ ಈ ಜಯವು ಭಾರತ ತಂಡದ ಶಕ್ತಿ, ಏಕಾಗ್ರತೆ ಮತ್ತು ನಿರಂತರ ಸಾಧನೆಯ ಪ್ರತೀಕವಾಗಿದ್ದು, ಅಭಿಮಾನಿಗಳಿಗೆ ಅಪಾರ ಸಂತೋಷವನ್ನು ನೀಡಿದೆ.