ಕ್ರಿಕೆಟ್ ಎಂಬುದು ಭಾರತದಲ್ಲಿ ಕೇವಲ ಆಟವಲ್ಲ, ಅದೊಂದು ಭಾವನೆ. ದೇಶದ ಘನತೆ ಮತ್ತು ಸೈನಿಕರ ವಿಷಯ ಬಂದಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ 'ದಿ ಹಂಡ್ರೆಡ್' (The Hundred) ಟೂರ್ನಿಯ ಹರಾಜು ಪ್ರಕ್ರಿಯೆ ಸಾಕ್ಷಿಯಾಗಿದೆ. ಐಪಿಎಲ್‌ನ ಖ್ಯಾತ ತಂಡವಾದ ಸನ್‌ರೈಸರ್ಸ್ ಹೈದರಾಬಾದ್‌ನ (SRH) ಮಾಲೀಕತ್ವ ಹೊಂದಿರುವ ಸಂಸ್ಥೆಯು, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಗಾಗಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಾರ್ಚ್ 12 ರಂದು ನಡೆದ 'ದಿ ಹಂಡ್ರೆಡ್' ಟೂರ್ನಿಯ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಸಂಬಂಧ ಹೊಂದಿರುವ ಭಾರತೀಯ ಮೂಲದ ಫ್ರಾಂಚೈಸಿಯು ಪಾಕಿಸ್ತಾನದ 27 ವರ್ಷದ ಲೆಗ್-ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಸುಮಾರು 2.10 ಕೋಟಿ ರೂಪಾಯಿ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ತಂಡವೊಂದರ ಮಾಲೀಕರು ವಿದೇಶಿ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ ಮೊದಲ ಪ್ರಕರಣ ಇದಾಗಿದೆ. ಆದರೆ, ಈ ಸುದ್ದಿಯು ಹೊರಬರುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆರಳಿದ್ದಾರೆ.
ಅಬ್ರಾರ್ ಅಹ್ಮದ್ ಆಯ್ಕೆಯಾಗುತ್ತಿದ್ದಂತೆಯೇ, ಅವರು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರೆನ್ನಲಾದ ಕೆಲವು ಹಳೆಯ ಪೋಸ್ಟ್‌ಗಳು ವೈರಲ್ ಆಗಿವೆ. 2019ರಲ್ಲಿ ಭಾರತೀಯ ವಾಯುಸೇನೆ ನಡೆಸಿದ 'ಬಾಲಕೋಟ್ ವೈಮಾನಿಕ ದಾಳಿ' ಮತ್ತು ಆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸಿಲುಕಿದ್ದ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರ ಬಗ್ಗೆ ಅಬ್ರಾರ್ ವ್ಯಂಗ್ಯವಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ದೇಶಪ್ರೇಮದ ವಿಚಾರದಲ್ಲಿ ಭಾರತೀಯರ ಭಾವನೆಗೆ ಧಕ್ಕೆ ತಂದ ವ್ಯಕ್ತಿಗೆ ಭಾರತೀಯ ಮೂಲದ ತಂಡದಲ್ಲೇ ಸ್ಥಾನ ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಅಬ್ರಾರ್ ಅಹ್ಮದ್ ಅವರ ಹಳೆಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿದ್ದಂತೆಯೇ, ಅಭಿಮಾನಿಗಳು ಆಕ್ರೋಶಗೊಂಡು ತಂಡದ ಅಧಿಕೃತ ಎಕ್ಸ್ (X) ಖಾತೆಯನ್ನು ಸಾಮೂಹಿಕವಾಗಿ ರಿಪೋರ್ಟ್ ಮಾಡಿದ್ದಾರೆ. ಇದರ ಪರಿಣಾಮವಾಗಿ ಆ ತಂಡದ ಎಕ್ಸ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ತಂಡದ ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೋರಿ ಅವರು "ನಮಗೆ ಒಬ್ಬ ಶ್ರೇಷ್ಠ ಸ್ಪಿನ್ನರ್ ಬೇಕಿತ್ತು, ಆದ್ದರಿಂದ ಅಬ್ರಾರ್ ಅವರನ್ನು ಆರಿಸಿಕೊಂಡಿದ್ದೇವೆ" ಎಂದು ವಾದಿಸಿದರೂ, ಅಭಿಮಾನಿಗಳು ಮಾತ್ರ ಶಾಂತರಾಗಿಲ್ಲ. "ದೇಶಕ್ಕಿಂತ ಕ್ರಿಕೆಟ್ ದೊಡ್ಡದಲ್ಲ" ಎಂಬ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮೊಳಗುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, 'ದಿ ಹಂಡ್ರೆಡ್ ಟೂರ್ನಿಯು ಇಂಗ್ಲೆಂಡ್‌ನಲ್ಲಿ ನಡೆಯುತ್ತದೆ ಮತ್ತು ಇದು ಐಪಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಅಲ್ಲಿನ ಹರಾಜು ಪ್ರಕ್ರಿಯೆ ಅಥವಾ ಆಟಗಾರರ ಆಯ್ಕೆಯ ಮೇಲೆ ನಮಗೆ ಯಾವುದೇ ಹತೋಟಿ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಹೌದು, ಈ ಘಟನೆಯು ಕ್ರೀಡೆ ಮತ್ತು ರಾಜಕೀಯದ ನಡುವಿನ ಸೂಕ್ಷ್ಮ ಸಂಬಂಧವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಭಾರತೀಯ ಮಾಲೀಕತ್ವದ ತಂಡವೊಂದು ಇಂತಹ ವಿವಾದಾತ್ಮಕ ಹಿನ್ನೆಲೆಯುಳ್ಳ ಆಟಗಾರನನ್ನು ಕೈಬಿಡಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.