ಬಿಡದಿ ಟೌನ್‌ಶಿಪ್ ಹೆಸರಲ್ಲಿ 'ರಿಯಲ್ ಎಸ್ಟೇಟ್' ದಂಧೆ? CM ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕೆಂಡಾಮಂಡಲ!!

ಬೆಂಗಳೂರಿನ ಸುತ್ತಮುತ್ತಲಿನ ಜಮೀನು ಅಂದ್ರೆ ಯಾರಿಗೆ ತಾನೇ ಆಸೆ ಇಲ್ಲ ಹೇಳಿ? ಈಗ ಇದೇ ವಿಚಾರವಾಗಿ ಸದ್ಯ ಕರ್ನಾಟಕ ರಾಜಕೀಯದಲ್ಲಿ ಒಂದು ದೊಡ್ಡ ಮಟ್ಟದ ಜಟಾಪಟಿ ಶುರುವಾಗಿದೆ. ಬಿಡದಿ ಭಾಗದಲ್ಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಸಬರ್ಬನ್ ಯೋಜನೆ' ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. "ಸರ್ಕಾರ ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡ್ತಿದೆ" ಅನ್ನೋದು ಕುಮಾರಸ್ವಾಮಿ ಅವರ ನೇರ ಆರೋಪ.

7,481 ಎಕರೆ ರೈತರ ಭೂಮಿ ಮೇಲೆ ಸರ್ಕಾರದ ಕಣ್ಣು
7,481 ಎಕರೆ ರೈತರ ಭೂಮಿ ಮೇಲೆ ಸರ್ಕಾರದ ಕಣ್ಣು

ಏನಿದು ಬಿಡದಿ ಟೌನ್‌ಶಿಪ್ ಕಿರಿಕ್?

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಬಳಿ ಸುಮಾರು 18,133 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಸುಮಾರು 9 ಹಳ್ಳಿಗಳ 7,481 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ಲಾನ್ ಮಾಡಲಾಗಿದೆ. ಸರ್ಕಾರದ ಈ ನಡೆಗೆ ಕುಮಾರಸ್ವಾಮಿ ಅವರು 'ದಳ್ಳಾಳಿ' ಪದ ಬಳಸಿ ಕಟುವಾಗಿ ಟೀಕಿಸಿದ್ದಾರೆ.

ಕುಮಾರಸ್ವಾಮಿ ಅವರ ಪ್ರಕಾರ, ಈ ಇಡೀ ಯೋಜನೆಯ ಹಿಂದೆ ದೊಡ್ಡ ವ್ಯವಹಾರ ಅಡಗಿದೆ. ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲೇ "ಮುಂದಿನ 15 ವರ್ಷಗಳಲ್ಲಿ ಈ ಟೌನ್‌ಶಿಪ್‌ನಿಂದ ಸೈಟು ಮಾರಾಟ, ತೆರಿಗೆ ಮೂಲಕ ₹33,000 ಕೋಟಿ ಆದಾಯ ಬರಲಿದೆ" ಎಂದು ಹೇಳಲಾಗಿದೆ. "ಸರ್ಕಾರ ಮಾಡಬೇಕಿರೋದು ಜನರ ಸೇವೆನೇ ಹೊರತು, ಸೈಟು ಮಾರಿ ಲಾಭ ಮಾಡೋದಲ್ಲ" ಅನ್ನೋದು ಎಚ್‌ಡಿಕೆ ವಾದ.

ಈಗಲ್‌ಟನ್ ರೆಸಾರ್ಟ್ ಮತ್ತು 77 ಎಕರೆ ಜಮೀನು!

ಈ ಯೋಜನೆಯಲ್ಲಿ ಒಂದು ಇಂಟ್ರೆಸ್ಟಿಂಗ್ ಟ್ವಿಸ್ಟ್ ಇದೆ. ಈಗಲ್‌ಟನ್ ರೆಸಾರ್ಟ್ ಸುತ್ತಮುತ್ತಲಿನ ಹಳ್ಳಿಗಳನ್ನೇ ಟೌನ್‌ಶಿಪ್‌ಗೆ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ರೆಸಾರ್ಟ್ ಈ ಹಿಂದೆ 77 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿತ್ತು ಎಂಬ ಆರೋಪವಿದೆ. ಈಗ ಅದೇ ಜಮೀನಿಗೆ ಎಕರೆಗೆ 12 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಿ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಇದು ಯಾರನ್ನೋ ಮೆಚ್ಚಿಸಲು ಮಾಡ್ತಿರೋ ಕೆಲಸ ಎಂದು ಅವರು ಕಿಡಿ ಕಾರಿದ್ದಾರೆ.

"ಯಾರೋ ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ದಳ್ಳಾಳಿ ಆಗಬಾರದು. ಕುರ್ಚಿ ಉಳಿಸಿಕೊಳ್ಳಲು ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳಬಾರದು," ಎಂದು ಕುಮಾರಸ್ವಾಮಿ ಖಾರವಾಗಿ ನುಡಿದಿದ್ದಾರೆ.

ಅಂದು ವಿರೋಧಿಸಿದವರು ಇಂದು ಜಾರಿಗೆ ತರುತ್ತಿದ್ದಾರೆ!

ಇದು ಕೇವಲ ಈಗಿನ ಕಥೆಯಲ್ಲ. 2006ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬೆಂಗಳೂರು ಸುತ್ತ ಐದು ಸಮಗ್ರ ಟೌನ್‌ಶಿಪ್‌ಗಳನ್ನು ನಿರ್ಮಿಸಲು ಪ್ಲಾನ್ ಮಾಡಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿತ್ತು. ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ 'ಸತ್ಯಶೋಧನಾ ಸಮಿತಿ' ರಚಿಸಿ ವರದಿ ಸಿದ್ಧಪಡಿಸಿತ್ತು.

"ಅಂದು ನನ್ನ ಯೋಜನೆಯನ್ನು ವಿರೋಧಿಸಿದವರು, ಇವತ್ತು ಅದೇ ಯೋಜನೆಯನ್ನು ಕದ್ದು ಜಾರಿಗೆ ತರ್ತಿದ್ದಾರೆ. ಅಂದು ಎಚ್.ಕೆ. ಪಾಟೀಲರು ನೀಡಿದ ಆ ಸತ್ಯಶೋಧನಾ ವರದಿಯನ್ನು ಇವತ್ತು ಜನರ ಮುಂದೆ ಇಡುವ ಧೈರ್ಯ ಅವರಿಗಿದೆಯೇ?" ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ರೈತರ ಪರ ನಿಲ್ಲುವ ಎಚ್ಚರಿಕೆ

ಈ ಯೋಜನೆಯಿಂದ ಬಿಡದಿ, ಬೈಲಮಂಗಲ, ಹೊಸೂರು, ತೆಂಚಗಾರನಹಳ್ಳಿ ಸೇರಿದಂತೆ ಎಂಟು-ಒಂಬತ್ತು ಹಳ್ಳಿಗಳ ರೈತರು ತೊಂದರೆಗೆ ಸಿಲುಕಲಿದ್ದಾರೆ. ಅಲ್ಲಿನ ಫಲವತ್ತಾದ ಕೃಷಿ ಭೂಮಿ ಸರ್ಕಾರಿ ಪಾಲಾಗಲಿದೆ.

"ಅಭಿವೃದ್ಧಿ ಹೆಸರಿನಲ್ಲಿ ರೈತರ ಮನೆಗಳನ್ನು ನಾಶ ಮಾಡಬೇಡಿ. ಈ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರ ಪರವಾಗಿ ನಾವು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ," ಎಂದು ಅವರು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರಾವಧಿಯ ಕೊನೆಯ ಕಾಲದಲ್ಲಿದ್ದಾರೆ, ಹೀಗಾಗಿ ಹೆಸರನ್ನು ಹಾಳು ಮಾಡಿಕೊಳ್ಳದೆ ಗೌರವಯುತವಾಗಿ ಅಧಿಕಾರ ಬಿಟ್ಟು ಹೋಗಲಿ ಎಂದು ಸಲಹೆ ಕೂಡ ನೀಡಿದ್ದಾರೆ.

Latest News