ಬಿಡದಿ ಟೌನ್‌ಶಿಪ್‌ ಯೋಜನೆಗೆ ಮತ್ತಷ್ಟು ತೀವ್ರಗೊಂಡ ಭೂ ಸಂಘರ್ಷ - ಶಾಸಕ ಎಚ್.ಸಿ.ಬಾಲಕೃಷ್ಣ ನಡೆಸಿದ ಸಂಧಾನ ಸಭೆಯೂ ವಿಫಲ!!

ಬೆಂಗಳೂರು ದಕ್ಷಿಣ ಜಿಲ್ಲೆಯ (ಹಿಂದಿನ ರಾಮನಗರ) ಬಿಡದಿ ಬಳಿ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯಿಂದ ಹಮ್ಮಿಕೊಂಡಿರುವ 'ಸಮಗ್ರ ಉಪನಗರ ಯೋಜನೆ' (Bidadi Township Project) ದಿನದಿಂದ ದಿನಕ್ಕೆ ತೀವ್ರ ಸ್ವರೂಪದ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನ ಮೇಲಿನ ಜನದಟ್ಟಣೆ ಕಡಿಮೆ ಮಾಡಲು ಉಪನಗರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆಯಾದರೂ, ಈ ಯೋಜನೆಗೆ ಭೂಮಿ ನೀಡಲು ಸ್ಥಳೀಯ ರೈತರು ಸಾಲು ಸಾಲಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಭೇಟಿಗೆ ಪಟ್ಟು ಹಿಡಿದ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರು
ಸಿಎಂ ಡಿ.ಕೆ.ಶಿವಕುಮಾರ್ ಭೇಟಿಗೆ ಪಟ್ಟು ಹಿಡಿದ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರು

ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರವಾಗಿ ನಡೆಸುತ್ತಿರುವ ಮನವೊಲಿಕೆಯ ಸಭೆಗಳಿಗೆ ರೈತರು ಕ್ಯಾರೆ ಎನ್ನುತ್ತಿಲ್ಲ. "ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಜಮೀನನ್ನು ಬಿಟ್ಟುಕೊಡುವುದಿಲ್ಲ" ಎಂದು ರೈತರು ಪಟ್ಟು ಹಿಡಿದಿರುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಇಕ್ಕಟ್ಟನ್ನು ಹಾಗೂ ತಲೆನೋವನ್ನು ತಂದಿಟ್ಟಿದೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ರಾಮನಗರದ ಕಂದಾಯ ಭವನದ ಸಭಾಂಗಣದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ, ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಭಾಗದ ನೂರಾರು ರೈತರು ಭಾಗವಹಿಸಿದ್ದರು.

ಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರು ಯೋಜನೆಯಿಂದಾಗುವ ಅಭಿವೃದ್ಧಿ ಹಾಗೂ ಪರಿಹಾರದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದರೂ ರೈತರು ತಮ್ಮ ಪಟ್ಟಿನಿಂದ ಹಿಂದೆ ಸರಿಯಲಿಲ್ಲ. ಸರ್ಕಾರದ ಯಾವುದೇ ಆಶ್ವಾಸನೆಗಳಿಗೆ ಒಪ್ಪದ ರೈತರು, ನೇರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಚ್‌.ಸಿ.ಬಾಲಕೃಷ್ಣ, "ಸಿಎಂ ಸೂಚನೆಯಂತೆ ಬಿಡದಿ ಟೌನ್‌ಶಿಪ್‌ ಯೋಜನೆಯ ವಿರುದ್ಧವಿರುವ ರೈತರ ಜೊತೆ ಮತ್ತೊಮ್ಮೆ ಸೌಹಾರ್ದಯುತ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಲಾಯಿತು. ಆದರೆ ರೈತರು ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ಕೇಳಿದ್ದು, ಶೀಘ್ರದಲ್ಲೇ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು" ಎಂದು ತಿಳಿಸಿದರು.

ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದರೂ ಸರ್ಕಾರ ಮಾತ್ರ ಯೋಜನೆಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಬಿಚ್ಚಿಟ್ಟ ಶಾಸಕ ಬಾಲಕೃಷ್ಣ, "ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆ (Final Notification) ಪ್ರಕಟವಾಗಿರುವುದರಿಂದ ಯಾವುದೇ ಕಾರಣಕ್ಕೂ ಯೋಜನೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಭೂಮಿ ಕೊಡಲು ಒಪ್ಪಿರುವವರ ಜಮೀನಿನಲ್ಲಿ ಜಂಟಿ ಮಾಪನ (JMC - Joint Measurement Certificate) ಕಾರ್ಯವನ್ನು ಮಾಡಲಾಗುವುದು. ಈಗಾಗಲೇ ಅಧಿಸೂಚನೆ ಹೊರಡಿಸಲಾಗಿರುವ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ 110 ಕೋಟಿ ರೂಪಾಯಿ ಪರಿಹಾರವನ್ನು ಈಗಾಗಲೇ ಪಾವತಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ಕಡಕ್ ನಿಲುವು ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆಯ ಸುತ್ತ ಇದೀಗ ಪರ ಮತ್ತು ವಿರುದ್ಧ ಎಂಬ ಎರಡು ಗುಂಪುಗಳು ಸೃಷ್ಟಿಯಾಗಿವೆ. ಒಂದೆಡೆ ಭೂಮಿ ನೀಡಲು ಸಿದ್ಧವಿರುವವರಿದ್ದರೆ, ಮತ್ತೊಂದೆಡೆ ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲದ ಬಹುಸಂಖ್ಯಾತ ರೈತರ ದೊಡ್ಡ ಪಡೆಯೇ ಇದೆ.

ರೈತರ ಮುಖ್ಯ ವಾದವೆಂದರೆ, ಈ ಭಾಗದ ಭೂಮಿ ಅತ್ಯಂತ ಫಲವತ್ತಾಗಿದ್ದು, ವರ್ಷಕ್ಕೆ ಮೂರು ಬೆಳೆಗಳನ್ನು ತೆಗೆಯುವ ಶಕ್ತಿ ಹೊಂದಿದೆ. ಇಂತಹ ಜೀವನಾಡಿಯಾದ ಕೃಷಿ ಭೂಮಿಯನ್ನು ಕಾಂಕ್ರೀಟ್ ಕಾಡನ್ನಾಗಿಸಲು ಬಿಡುವುದಿಲ್ಲ ಎನ್ನುವುದು ಅನ್ನದಾತರ ಹಠವಾಗಿದೆ. ಆದರೆ, "ಬೆಂಗಳೂರಿನ ಹಿತದೃಷ್ಟಿಯಿಂದ ಬಿಡದಿ ಉಪನಗರ ಯೋಜನೆ ಮಾಡಿಯೇ ಸಿದ್ಧ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಟ್ಟಿಯಾಗಿ ಹೇಳುತ್ತಿರುವುದು ಉಭಯ ಪಾರ್ಶ್ವಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ರೈತರ ಈ ಹೋರಾಟವು ಕೇವಲ ಜನಸಾಮಾನ್ಯರ ಪ್ರತಿಭಟನೆಯಾಗಿ ಉಳಿದಿಲ್ಲ, ಬದಲಿಗೆ ದೊಡ್ಡ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ರೈತರ ಪರವಾಗಿ ಅಖಾಡಕ್ಕಿಳಿದಿದ್ದಾರೆ. ಬಿಡದಿಯಲ್ಲಿ ಜಮಾಯಿಸಿದ್ದ ರೈತರ ಹೋರಾಟದ ಜೊತೆ ಕೈಜೋಡಿಸಿದ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.

ರೈತರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡರೆ ಸುಮ್ಮನಿರುವುದಿಲ್ಲ ಎಂದು ಗುಡುಗಿರುವ ಹೆಚ್‌ಡಿಕೆ, ನೇರವಾಗಿ ಬಿಡದಿಗೆ ಬಂದು ಪ್ರತಿಭಟನಾ ನಿರತ ರೈತರ ಜೊತೆಗೆ ಮುಖಾಮುಖಿ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಬಿಡದಿಗೆ ಭೇಟಿ ನೀಡಿರಲಿಲ್ಲ. ಇದು ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ಹೋರಾಡಲು ಮತ್ತಷ್ಟು ರಾಜಕೀಯ ಅಸ್ತ್ರವನ್ನು ಒದಗಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಜಾರಿಯು ಸರ್ಕಾರಕ್ಕೆ ಅಷ್ಟು ಸುಲಭವಾಗಿ ಕಾಣಿಸುತ್ತಿಲ್ಲ. ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಯನ್ನು ಜಾರಿಗೊಳಿಸಲೇಬೇಕು ಎಂಬ ಹಠದಲ್ಲಿ ಸರ್ಕಾರವಿದ್ದರೆ, ಮತ್ತೊಂದು ಕಡೆ ಜಮೀನು ಉಳಿಸಿಕೊಳ್ಳಲು ಪ್ರಾಣ ಕೊಡಲೂ ಸಿದ್ಧ ಎನ್ನುತ್ತಿರುವ ಅನ್ನದಾತರಿದ್ದಾರೆ. ಈ ಭೂ ಸಂಘರ್ಷಕ್ಕೆ ರಾಜಕೀಯ ಬಣ್ಣವೂ ಬಳಿದಿರುವುದರಿಂದ ಮುಂದಿನ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಲವಂತದ ಭೂಸ್ವಾಧೀನಕ್ಕೆ ಮುಂದಾಗುತ್ತದೆಯೇ ಅಥವಾ ಮುಖ್ಯಮಂತ್ರಿಗಳು ರೈತರೊಂದಿಗೆ ನಡೆಸಿ ಮಾತುಕತೆ ನಡೆಸಿ ಮಧ್ಯದ ದಾರಿಯೊಂದನ್ನು ಕಂಡುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Latest News