ಅಮೆರಿಕದಲ್ಲಿ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಒಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆಗೈದಿರುವ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕೇವಲ ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಈ ನಿಗೂಢ ಸಾವಿನ ಪ್ರಕರಣವನ್ನು ತನಿಖೆ ನಡೆಸಿದ ಅಮೆರಿಕದ ಪೊಲೀಸರು, ಇದೀಗ ಪತಿಯೇ ಅಸಲಿ ಹಂತಕ ಎಂಬುದನ್ನು ಸಾಬೀತುಪಡಿಸಿ ಆತನನ್ನು ಬಂಧಿಸಿದ್ದಾರೆ. ಪತ್ನಿಯನ್ನು ಕೊ*ಲೆ ಮಾಡಿದ ಬಳಿಕ ಆಕೆಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ಕಳುಹಿಸಿರುವ ಈತನ ವಿಕೃತ ಮನಸ್ಥಿತಿ ಇಡೀ ಅನಿವಾಸಿ ಭಾರತೀಯ ವಲಯವನ್ನು ಬೆಚ್ಚಿಬೀಳಿಸಿದೆ.
ಅಮೆರಿಕದ ಬೆಲ್ಲವ್ಯೂ (Bellevue) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಕೊ*ಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅವಿನಾಶ್ ನರ್ನೆ (Avinash Narne) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ 27 ವರ್ಷದ ಪತ್ನಿ ರಾಜಿತಾ ಸಬ್ಬಿನೇನಿ (Rajitha Sabbineni) ಅವರನ್ನು ಕಳೆದ ವರ್ಷದ (2025) ಅಕ್ಟೋಬರ್‌ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದನು. ಕೊಲೆಯ ನಂತರ ಯಾರಿಗೂ ಅನುಮಾನ ಬಾರದಂತೆ ಇಡೀ ಘಟನಾ ಸ್ಥಳವನ್ನು ಆ*ತ್ಮಹತ್ಯೆಯಂತೆ ಬಿಂಬಿಸಲು ಈತ ಮಾಸ್ಟರ್ ಪ್ಲಾನ್ ಮಾಡಿದ್ದ ಎಂದು ಬೆಲ್ಲವ್ಯೂ ಪೊಲೀಸರು ತಿಳಿಸಿದ್ದಾರೆ.
2025ರ ಅಕ್ಟೋಬರ್ 27ರಂದು ಅವಿನಾಶ್ ನರ್ನೆ ಪೊಲೀಸರಿಗೆ ಕರೆ ಮಾಡಿ, ತನ್ನ ಪತ್ನಿ ಬಾತ್‌ರೂಮ್‌ನಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು, ಎಷ್ಟು ಕರೆದರೂ ಹೊರಬರುತ್ತಿಲ್ಲ ಎಂದು ಗಾಬರಿಯಿಂದ ನಟಿಸಿ ಮಾಹಿತಿ ನೀಡಿದ್ದನು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾತ್‌ರೂಮ್ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ರಾಜಿತಾ ಅವರು ಬಾತ್‌ರೂಮ್ ನೆಲದ ಮೇಲೆ ಶವವಾಗಿ ಪತ್ತೆಯಾಗಿದ್ದರು. ಸ್ಥಳದಲ್ಲೇ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದನ್ನು ಘೋಷಿಸಿದ್ದರು.
ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿ ಅವಿನಾಶ್ ನರ್ನೆ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ. ಅಕ್ಟೋಬರ್ 27ರಂದು ತಾನು ಕೆಲವು ವೈಯಕ್ತಿಕ ಕೆಲಸಗಳ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದೆ ಎಂದೂ, ಸುಮಾರು 40 ನಿಮಿಷಗಳ ಬಳಿಕ ಮನೆಗೆ ಮರಳಿದಾಗ ಪತ್ನಿ ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡಿರುವುದು ತಿಳಿಯಿತು ಎಂದೂ ಸುಳ್ಳು ಕಥೆ ಕಟ್ಟಿದ್ದನು. ಆದರೆ, ಪೊಲೀಸರು ಸಿಸಿಟಿವಿ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆತ ಹೊರಗಿದ್ದ ಸಮಯದಲ್ಲಿ ಬೇರೆ ಯಾವುದೇ ವ್ಯಕ್ತಿ ಮನೆಗೆ ಪ್ರವೇಶಿಸಿರುವ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ.
ಮಾರನೇ ದಿನ ಕಿಂಗ್ ಕೌಂಟಿ ವೈದ್ಯಕೀಯ ಪರೀಕ್ಷಾಧಿಕಾರಿ ಕಚೇರಿಯಿಂದ ಬಂದ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಅನುಮಾನವನ್ನು ನಿಜ ಮಾಡಿತು. ರಾಜಿತಾ ಅವರದ್ದು ನೈಸರ್ಗಿಕ ಸಾವಾಗಲಿ ಅಥವಾ ಆತ್ಮಹತ್ಯೆಯಾಗಲಿ ಅಲ್ಲ, ಬದಲಿಗೆ ಅದು ಪಕ್ಕಾ ಪ್ಲಾನ್ ಮಾಡಿ ನಡೆಸಿರುವ ಕೊಲೆ ಎಂದು ವರದಿ ದೃಢಪಡಿಸಿತು. ಯಾರೋ ಬಲವಂತವಾಗಿ ಕತ್ತು ಹಿಸುಕಿದ ಪರಿಣಾಮ ಉಸಿರುಗಟ್ಟಿ ರಾಜಿತಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು.
ಪೊಲೀಸರು ಅವಿನಾಶ್ ನರ್ನೆಯ ಮೊಬೈಲ್ ಹಾಗೂ ಇಂಟರ್ನೆಟ್ ಹಿಸ್ಟರಿಯನ್ನು ಆಳವಾಗಿ ತನಿಖೆ ನಡೆಸಿದಾಗ, ಆತನ ಕರಾಳ ಮುಖವಾಡ ಕಳಚಿ ಬಿತ್ತು. ಅವಿನಾಶ್‌ಗೆ ಭಾರತದಲ್ಲಿದ್ದ ಮಹಿಳೆಯೊಬ್ಬಳೊಂದಿಗೆ ಹಲವು ವರ್ಷಗಳಿಂದ ಅಕ್ರಮ ಮತ್ತು ರಹಸ್ಯ ಪ್ರೇಮ ಸಂಬಂಧವಿತ್ತು. ಈ ಸಂಬಂಧ ಮುಂದುವರಿದಿದ್ದರೂ, ಕುಟುಂಬಸ್ಥರ ಒತ್ತಾಯಕ್ಕೆ ಮಣಿದು 2025ರ ಜೂನ್ 5ರಂದು ಆತ ರಾಜಿತಾ ಅವರನ್ನು ವಿವಾಹವಾಗಿದ್ದನು. ವಿಶೇಷವೆಂದರೆ, ಅವಿನಾಶ್‌ನ ಈ ರಹಸ್ಯ ಪ್ರೇಯಸಿ ಆತನ ಮದುವೆ ಸಮಾರಂಭಕ್ಕೂ ಅತಿಥಿಯಾಗಿ ಹಾಜರಾಗಿದ್ದಳು ಎಂದು ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗವಾಗಿದೆ.
ಮದುವೆಯಾಗಿ ಪತ್ನಿಯೊಂದಿಗೆ ಅಮೆರಿಕಕ್ಕೆ ಹೋದ ಬಳಿಕವೂ ಅವಿನಾಶ್ ನರ್ನೆ ತನ್ನ ಪ್ರೇಯಸಿಯೊಂದಿಗೆ ಸಂಪರ್ಕ ಮುಂದುವರಿಸಿದ್ದನು. ಕೊ*ಲೆ ನಡೆದ ದಿನವೂ ಆತ ಕನಿಷ್ಠ ನಾಲ್ಕು ಬಾರಿ ಭಾರತದಲ್ಲಿದ್ದ ಪ್ರೇಯಸಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದನು. ತಾನು ಬಾತ್‌ರೂಮ್ ಬಾಗಿಲು ತೆರೆಯಲು ಯತ್ನಿಸುತ್ತಿದ್ದೇನೆ ಎಂದು ಪೊಲೀಸರಿಗೆ ಸುಳ್ಳು ಹೇಳುತ್ತಿದ್ದ ಸಂದರ್ಭದಲ್ಲೂ ಆತ ಪ್ರೇಯಸಿಯೊಂದಿಗೆ ಲೈವ್ ಕಾಲ್‌ನಲ್ಲಿದ್ದ. ಅಷ್ಟೇ ಅಲ್ಲದೆ, ಪತ್ನಿಯ ಪ್ರಾಣ ಪಕ್ಷಿ ಹಾರಿಹೋದ ತಕ್ಷಣ, ಆಕೆಯ ಮೃತದೇಹದ ಫೋಟೋವನ್ನು ತೆಗೆದು ಭಾರತದಲ್ಲಿದ್ದ ಪ್ರೇಯಸಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದನು!
ತನಿಖಾಧಿಕಾರಿಗಳು ಮೃತ ರಾಜಿತಾ ಅವರ ಮೊಬೈಲ್ ಸಂದೇಶಗಳನ್ನು ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಅವಿನಾಶ್ ಮದುವೆಯಾದ ದಿನದಿಂದಲೇ ಪತ್ನಿಯನ್ನು ಮುಗಿಸಲು ಸಂಚು ರೂಪಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ರಾಜಿತಾ ತನ್ನ ಪತಿಗೆ ಕಳುಹಿಸಿದ್ದ ಹಳೆಯ ಚಾಟ್‌ಗಳಲ್ಲಿ, ನರ್ನೆ ಮನೆಯಲ್ಲಿ ತಯಾರಿಸಿಕೊಡುತ್ತಿದ್ದ ಜ್ಯೂಸ್ ಅಥವಾ ಪಾನೀಯಗಳು ಹಲವು ಬಾರಿ "ಅತಿಯಾದ ಕಹಿ" ಅಥವಾ "ವಿಚಿತ್ರ ರುಚಿ"ಯನ್ನು ಹೊಂದಿರುತ್ತಿದ್ದವು ಎಂದು ದೂರಿದ್ದರು.
ಕೊ*ಲೆಯಾದ ದಿನದಂದೂ ಸಹ ಅವಿನಾಶ್ ತನ್ನ ಪತ್ನಿಗೆ ಒಂದು ಸ್ಮೂದಿ (Smoothie) ತಯಾರಿಸಿಕೊಟ್ಟಿದ್ದನು. ಅದನ್ನು ಕುಡಿದಿದ್ದ ರಾಜಿತಾ, "ನೀನು ಮಾಡಿಕೊಟ್ಟ ಸ್ಮೂದಿ ಯಾವುದೋ ಕೆಮ್ಮಿನ ಸಿರಪ್ ಮತ್ತು ಕೆಟ್ಟ ಔಷಧದ ರುಚಿಯಂತಿದೆ" ಎಂದು ಪತಿಗೆ ಸಂದೇಶ ಕಳುಹಿಸಿದ್ದರು. ಆಕೆಗೆ ವಿಷಪೂರಿತ ಪಾನೀಯ ನೀಡಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ಕತ್ತು ಹಿಸುಕಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣದ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಅಮೆರಿಕದ ಕಾನೂನು ಸಂಸ್ಥೆಗಳು, ಜುಲೈ 5ರಂದು ಅವಿನಾಶ್ ನರ್ನೆ ವಿರುದ್ಧ 'ಪ್ರಥಮ ದರ್ಜೆ ಕೊಲೆ' (First-Degree Murder) ಮೊಕದ್ದಮೆಯನ್ನು ದಾಖಲಿಸಿವೆ. ಅಮೆರಿಕದ ಕಾನೂನಿನ ಪ್ರಕಾರ ಈತನ ಮೇಲಿನ ತಪ್ಪು ಸಾಬೀತಾದರೆ, ಈತನಿಗೆ ಯಾವುದೇ ಪೆರೋಲ್ ಇಲ್ಲದೆ ಕಠಿಣ ಜೀವಾವಧಿ ಶಿಕ್ಷೆಯಾಗುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಹಂತಕ ಅವಿನಾಶ್ ನರ್ನೆಯನ್ನು ಬರೋಬ್ಬರಿ 50 ಲಕ್ಷ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಮೊತ್ತದ ಭಾರಿ ಜಾಮೀನು ಬಾಂಡ್‌ನೊಂದಿಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪರಸ್ತ್ರೀ ವ್ಯಾಮೋಹಕ್ಕಾಗಿ ನಂಬಿ ಬಂದ ಪತ್ನಿಯನ್ನೇ ಕೊಂದ ಈತನ ಕ್ರೂರತೆಗೆ ಅನಿವಾಸಿ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.