ಬಿಡದಿ ಟೌನ್‌ಶಿಪ್ ಯೋಜನೆ ಸುತ್ತ ನಡೀತಿರೋ ರಾಜಕೀಯ ಹೈಡ್ರಾಮಾ ಈಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ! ಮೊನ್ನೆ ತಾನೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DKS) ಅವರು, "ಶೇಕಡಾ 80 ರಷ್ಟು ರೈತರು ಬಿಡದಿ ಯೋಜನೆಗೆ ಭೂಮಿ ಕೊಡೋಕೆ ಒಪ್ಪಿದ್ದಾರೆ" ಅಂತ ಹೇಳಿಕೆ ಕೊಟ್ಟಿದ್ರು ಅಲ್ವಾ? ಆದ್ರೆ ಈಗ ಆ ಭಾಗದ ಅಸಲಿ ರೈತರು ಡಿಕೆಶಿ ಹೇಳಿಕೆಯನ್ನು ಕಂಪ್ಲೀಟ್ ಆಗಿ ತಳ್ಳಿಹಾಕಿದ್ದಾರೆ. "ಡಿಸಿಎಂ ಶಿವಕುಮಾರ್ ಅವರು ಹೇಳ್ತಿರೋದು ಸುಳ್ಳು, ನಮ್ಮ ಕೃಷಿ ಭೂಮಿಯನ್ನ ಟೌನ್‌ಶಿಪ್‌ಗೆ ಕೊಡೋಕೆ ನಮಗೆ ಇಷ್ಟ ಇಲ್ಲ" ಅಂತ ರೈತ ಸಂಘಟನೆಗಳು ನೇರವಾಗಿಯೇ ಸವಾಲು ಹಾಕಿವೆ.
ಬಿಡದಿ ವ್ಯಾಪ್ತಿಯ ಬೈರಮಂಗಲ ಮತ್ತು ಕುಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ 20ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿರುವ ‘ಬೈರಮಂಗಲ ಮತ್ತು ಕುಂಚುರಗಾನಹಳ್ಳಿ ರೈತರ ಭೂ ಹೋರಾಟ ಹಿತರಕ್ಷಣ ಸಂಘ’ ಈಗ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದೆ.
"ಡಿಕೆಶಿ ಜೊತೆ ಇರೋರು ರೈತರಲ್ಲ, ರಿಯಲ್ ಎಸ್ಟೇಟ್ ದಂಧೆಕೋರರು!"
ಬೈರಮಂಗಲ ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಚ್.ಜಿ. ಪ್ರಕಾಶ್ ಮತ್ತು ಮಂಡಲಹಳ್ಳಿ ಗ್ರಾಮದ ರೈತ ನಾಗರಾಜ್ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಡಿಸಿಎಂ ಶಿವಕುಮಾರ್ ಜೊತೆ ಬೆಂಗಳೂರಿನ ಮನೆಯಲ್ಲಿ ಮೀಟಿಂಗ್ ಮಾಡಿ, ಯೋಜನೆಗೆ ನಾವೆಲ್ಲಾ ಒಪ್ಪಿದ್ದೇವೆ ಅಂತ ಪೋಸ್ ಕೊಡ್ತಿರೋರು ಅಸಲಿ ರೈತರೇ ಅಲ್ಲ! ಅವರೆಲ್ಲಾ ದೊಡ್ಡ ದೊಡ್ಡ ಜಮೀನುದಾರರು ಮತ್ತು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡೋರು. ಅವರಿಗೆ ಈ ಪ್ರಾಜೆಕ್ಟ್ ಬಂದ್ರೆ ಕೋಟಿ ಕೋಟಿ ಲಾಭ ಆಗಬಹುದು, ಅದಕ್ಕೆ ಅವರು ಸರ್ಕಾರದ ಪರ ಬ್ಯಾಟ್ ಬೀಸ್ತಿದ್ದಾರೆ" ಅಂತ ಕಿಡಿಕಾರಿದ್ದಾರೆ.
ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಹಿತಾಸಕ್ತಿ ಈ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಬೇಕಾಗಿಲ್ಲ. ನಾವು ಕಷ್ಟಪಟ್ಟು ಕೃಷಿ ಮಾಡ್ತಿದ್ದೀವಿ, ಇದೇ ನಮ್ಮ ಗುರುತು. ಈ ಕೃಷಿಯನ್ನೇ ನಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಅನ್ನೋದು ನಮ್ಮ ಆಸೆ. ಆದರೆ ಸರ್ಕಾರ ನಮ್ಮ ಗುರುತನ್ನೇ ಕಸಿದುಕೊಳ್ಳಲು ನೋಡ್ತಿದೆ ಅಂತ ರೈತರು ಆಕ್ರೋಶ ಹೊರಹಾಕಿದ್ದಾರೆ.
20 ವರ್ಷ ಪಟ್ಟ ಕಷ್ಟ ಒಂದೇ ದಿನದಲ್ಲಿ ಮಣ್ಣುಪಾಲು!
ತಮ್ಮ ಕುಟುಂಬದ 40 ಎಕರೆ ಜಮೀನು ಹೊಂದಿರುವ ರೈತ ನಾಗರಾಜ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. "ಒಣ ಭೂಮಿಯಾಗಿದ್ದ ಬರಡಾದ ಜಾಗವನ್ನು ನಾವೆಲ್ಲಾ ಕಷ್ಟಪಟ್ಟು ನೀರಾವರಿ ಭೂಮಿಯನ್ನಾಗಿ ಮಾಡಲು ನಮಗೆ ಬರೋಬ್ಬರಿ 20 ವರ್ಷ ಬೇಕಾಯ್ತು. ಈಗ ಅಲ್ಲಿ ಹಚ್ಚಹಸಿರಾಗಿ ಬೆಳೆ ಬೆಳೀತಿದ್ದೀವಿ. ಆದರೆ ಸರ್ಕಾರ ಈಗ ಸಡನ್ನಾಗಿ ಬಂದು ಅದನ್ನೆಲ್ಲಾ ಕಿತ್ತುಕೊಂಡು ಟೌನ್‌ಶಿಪ್ ಮಾಡ್ತೀವಿ ಅಂದ್ರೆ ನಾವು ಎಲ್ಲಿಗೆ ಹೋಗಬೇಕು?" ಅಂತ ಪ್ರಶ್ನೆ ಮಾಡಿದ್ದಾರೆ.
ರೈತರ ಓಪನ್ ಚಾಲೆಂಜ್: "ಡಿಸಿಎಂ ಶಿವಕುಮಾರ್ ಅವರು ಸುಮ್ಮನೆ ಬೆಂಗಳೂರಲ್ಲಿ ಕೂತು ಶೇ. 80 ರಷ್ಟು ಜನ ಒಪ್ಪಿದ್ದಾರೆ ಅಂತ ಸುಳ್ಳು ಹೇಳ್ಬಾರದು. ಧೈರ್ಯ ಇದ್ರೆ ಅಧಿಕಾರಿಗಳನ್ನು ಕಳಿಸಿ ಹಳ್ಳಿಗಳಲ್ಲಿ ಒಂದು ಸರ್ವೇ ಮಾಡಿಸಲಿ. ಆಗ ಗೊತ್ತಾಗುತ್ತೆ ಎಷ್ಟು ಜನ ರೈತರು ಈ ಯೋಜನೆಯನ್ನು ಜಿಗುಪ್ಸೆಯಿಂದ ತಿರಸ್ಕರಿಸ್ತಾರೆ ಅಂತ!"
ಸಣ್ಣ ರೈತರ ಸಮಸ್ಯೆ ಬಗೆಹರಿಸ್ತೀನಿ ಅಂತ ಡಿಕೆಶಿ ಭರವಸೆ ಕೊಟ್ಟಿದ್ರು, ಆ ಮಾತಿಗೆ ಅವರು ಬದ್ಧರಾಗಿರಲಿ. ಇಲ್ಲದಿದ್ದರೆ ಪ್ರಮುಖ ಹೈವೇ ಮತ್ತು ರಸ್ತೆಗಳನ್ನು ಬಂದ್ ಮಾಡಿ ಇಡೀ ಬಿಡದಿ ಭಾಗದಲ್ಲಿ ಭೀಕರ ಪ್ರತಿಭಟನೆ ಮಾಡ್ತೀವಿ ಅಂತ ರೈತರು ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಟ್ವಿಸ್ಟ್ ಕೊಟ್ಟ ಜಿಬಿಡಿಎ ಅಧ್ಯಕ್ಷ: ಸರ್ಕಾರಕ್ಕೆ ಸಿಕ್ಕಿದೆಯಾ 2,669 ಎಕರೆ?
ಒಂದೆಡೆ ರೈತರು ಪ್ರತಿಭಟನೆಯ ಎಚ್ಚರಿಕೆ ಕೊಡ್ತಿದ್ದರೆ, ಇನ್ನೊಂದೆಡೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಅಧಿಕಾರಿಗಳು ಬೇರೆಯದೇ ಲೆಕ್ಕ ಇಡ್ತಿದ್ದಾರೆ. ಜಿ ಬಿ ಡಿ ಎ ಅಧ್ಯಕ್ಷರಾದ ಜಿ.ಎನ್. ನಟರಾಜು ಮಾತನಾಡಿ, "2 ಎಕರೆ ಇಂದ ಹಿಡಿದು 30 ಎಕರೆವರೆಗೂ ಜಮೀನು ಹೊಂದಿರುವ ಸುಮಾರು 179 ರೈತರು ತಾವಾಗಿಯೇ ಬೆಂಗಳೂರಿನ ಡಿಕೆಶಿ ನಿವಾಸಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ" ಅಂದಿದ್ದಾರೆ.
ಅವರ ಪ್ರಕಾರ, ಈ 170ಕ್ಕೂ ಹೆಚ್ಚು ರೈತರಿಂದಲೇ ಸರ್ಕಾರಕ್ಕೆ ಬರೋಬ್ಬರಿ 2,669 ಎಕರೆ ಭೂಮಿ ಸಿಗಲಿದೆ. ಆರಂಭದಲ್ಲಿ ಭೂಸ್ವಾಧೀನಕ್ಕೆ ಅರ್ಜಿ ಆಹ್ವಾನಿಸಿದಾಗ 1,367 ಅಪ್ಲಿಕೇಶನ್ ಬಂದಿದ್ದವು. ಅದರಲ್ಲಿ 567 ರೈತರು ಮೊದಲ ದಿನವೇ ವಿಚಾರಣೆಗೆ ಬಂದು ಜಮೀನು ಕೊಡೋಕೆ ಸಹಿ ಹಾಕಿದ್ದಾರೆ ಅಂತ ಅಧಿಕಾರಿಗಳು ಹೇಳ್ತಿದ್ದಾರೆ.