ಬಿಡದಿ ಟೌನ್‌ಶಿಪ್ ಕಿಚ್ಚು - ಡಿಕೆಶಿ ವಿರುದ್ಧ ಕುಮಾರಸ್ವಾಮಿ ಸಮರ; “ಧೈರ್ಯವಿದ್ದರೆ ಭೈರಮಂಗಲಕ್ಕೆ ಬನ್ನಿ” ಎಂದು ನೇರ ಸವಾಲು!!

ಬೆಂಗಳೂರು ಹೊರವಲಯದ ಬಿಡದಿ ಟೌನ್‌ಶಿಪ್ ಯೋಜನೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮನ್ನು ಈ ಯೋಜನೆಯ ‘ಪಿತಾಮಹ’ ಎಂದು ಕರೆಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ, ಅಲ್ಲಿನ ರೈತರು ಭೂಮಿ ಕೊಡಲು ಒಪ್ಪಿದ್ದಾರಾ ಇಲ್ಲವಾ ಎಂದು ಸಾರ್ವಜನಿಕವಾಗಿ ಕೇಳೋಣ” ಎಂದು ನೇರ ಸವಾಲು ಹಾಕಿದ್ದಾರೆ.

ಬಿಡದಿ ಟೌನ್‌ಶಿಪ್ ಕದನ
ಬಿಡದಿ ಟೌನ್‌ಶಿಪ್ ಕದನ

ಯೋಜನೆಗೆ 2007ರಲ್ಲೇ ತೆರೆ ಎಳೆದಿದ್ದೆ

ಮಾಜಿ ಶಾಸಕ ಮಾಗಡಿ ಮಂಜುನಾಥ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಯೋಜನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. 2006ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಐದು ಕಡೆ ಉಪನಗರ ಯೋಜನೆಗಳನ್ನು ಘೋಷಿಸಿದ್ದು ನಿಜ. ಆದರೆ, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1ರಂದೇ ಸದನದಲ್ಲಿ ಈ ಯೋಜನೆಯನ್ನು ರದ್ದುಗೊಳಿಸಿ ಘೋಷಣೆ ಮಾಡಿದ್ದೆ ಎಂದು ದಾಖಲೆಗಳ ಸಮೇತ ವಿವರಿಸಿದರು.

“ಆ ಸಮಯದಲ್ಲಿ ಸದನದಲ್ಲಿ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೇ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದು ಫಲವತ್ತಾದ ಭೂಮಿ, ರೈತರು ಭೂಮಿ ಕೊಡಬಾರದು, ಇದು ರಿಯಲ್ ಎಸ್ಟೇಟ್ ದಂಧೆ ಎಂದು ಅಂದು ಅವರು ನೀಡಿದ್ದ ಭಾಷಣದ ಪ್ರತಿಗಳು ಈಗಲೂ ನನ್ನ ಬಳಿ ಇವೆ” ಎಂದು ನೆನಪಿಸಿದರು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಇವರು, ಇಂದು ಅಧಿಕಾರಕ್ಕೆ ಬಂದ ನಂತರ ಅದೇ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಸರ್ಕಾರದ ವಿರುದ್ಧ ಗಂಭೀರ ಆರೋಪ

ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಈ ಯೋಜನೆಗೆ ಅಧಿಸೂಚನೆ ಹೊರಡಿಸುತ್ತಿರುವುದನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. “2025ರ ಮಾರ್ಚ್ 12ರಂದು ಪ್ರಾಥಮಿಕ ಮತ್ತು ಜೂನ್ 10ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು ಈ ಸರ್ಕಾರವೇ. ನನಗೇನಾದರೂ ಈ ಯೋಜನೆಯಲ್ಲಿ ಆಸಕ್ತಿ ಇದ್ದಿದ್ದರೆ, 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಜಾರಿಗೊಳಿಸಬಹುದಿತ್ತಲ್ಲವೇ?” ಎಂದು ಪ್ರಶ್ನಿಸಿದರು.

ಇಷ್ಟೇ ಅಲ್ಲದೆ, ಯೋಜನೆಯ ಕಡತಗಳ ವಿಲೇವಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿಲ್ಲ ಎಂಬ ಸ್ಫೋಟಕ ಆರೋಪವನ್ನು ಅವರು ಮಾಡಿದ್ದಾರೆ. “ನಾಗರಭಾವಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಕೆಲವರನ್ನು ಕೂರಿಸಿಕೊಂಡು ಈ ಯೋಜನೆಯ ಅಕ್ರಮ ಕೆಲಸಗಳು ನಡೆಯುತ್ತಿವೆ. 4,500ಕ್ಕೂ ಹೆಚ್ಚು ರೈತರು ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿದರೂ ಅವರಿಗೆ ಉತ್ತರವಿಲ್ಲ. ಬದಲಾಗಿ, ಡಿಸಿ ಕಚೇರಿಗೆ ಕರೆಸಿ ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

“ರಿಯಲ್ ಎಸ್ಟೇಟ್ ದಂಧೆಗೆ ಫಲವತ್ತಾದ ಭೂಮಿ ಬಲಿ”

ಅಡಿಕೆ, ರೇಷ್ಮೆ ಸೇರಿದಂತೆ ಫಲವತ್ತಾದ ಕೃಷಿ ಭೂಮಿಯನ್ನು ನಾಶಮಾಡಿ, ರಿಯಲ್ ಎಸ್ಟೇಟ್ ದಂಧೆಗೆ ದಾರಿ ಮಾಡಿಕೊಡುತ್ತಿರುವುದು ಈ ಸರ್ಕಾರದ ಹುನ್ನಾರ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರವು ರೈತರಿಗೆ ಆಮಿಷವೊಡ್ಡಿ, “ಶೇ.50 ಹಣ ಕೊಡುತ್ತೇವೆ, ಅಭಿವೃದ್ಧಿ ಆದ ಮೇಲೆ ಸೈಟ್ ಕೊಡುತ್ತೇವೆ” ಎಂದು ನಂಬಿಸುತ್ತಿದೆ. ನೈಸ್ (NICE) ಯೋಜನೆಯಲ್ಲಿ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಈಗ ಮತ್ತೊಂದು ಯೋಜನೆಯ ಹೆಸರಿನಲ್ಲಿ ರೈತರನ್ನು ಬೀದಿಗೆ ತರುವ ಕೆಲಸ ನಡೆಯುತ್ತಿದೆ ಎಂದು ಎಚ್ಚರಿಸಿದರು.

ಡಿ.ಕೆ. ಶಿವಕುಮಾರ್‌ಗೆ ಖಡಕ್ ಎಚ್ಚರಿಕೆ

ಡಿ.ಕೆ. ಶಿವಕುಮಾರ್ ವಿರುದ್ಧ ವೈಯಕ್ತಿಕವಾಗಿಯೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ನಾಗರಭಾವಿಯ ಕಚೇರಿಯಲ್ಲಿ ಕೂತು ಏನೇನು ಅಕ್ರಮ ಮಾಡಿದ್ದೀರಿ ಎಂಬುದು ನಮಗೆ ಗೊತ್ತಿದೆ. ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಹಾಕಿ ಡಿ-ನೋಟಿಫಿಕೇಶನ್ ಮಾಡಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ. ಚುನಾವಣೆ ಗೆಲ್ಲಲು ಹಣ ಲೂಟಿ ಮಾಡಬಹುದು ಎಂದುಕೊಂಡಿದ್ದೀರಿ, ಆದರೆ ಅಕ್ರಮ ಎಸಗಿದರೆ ಜೈಲಿಗೆ ಹೋಗುವುದು ಖಚಿತ” ಎಂದು ಎಚ್ಚರಿಕೆ ನೀಡಿದರು.

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ

ಸರ್ಕಾರವು ರೈತ ವಿರೋಧಿ ಯೋಜನೆಯನ್ನು ತಕ್ಷಣ ಕೈಬಿಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಜೆಡಿಎಸ್ ನಾಯಕರು ಘೋಷಿಸಿದ್ದಾರೆ. ಈಗಾಗಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ಪಾದಯಾತ್ರೆ ಆರಂಭವಾಗಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ರೈತರ ಹಿತದೃಷ್ಟಿಯ ನೆಪದಲ್ಲಿ ನಡೆಯುತ್ತಿರುವ ಈ ರಾಜಕೀಯ ಸಮರವು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕುಮಾರಸ್ವಾಮಿ ಅವರ ಸವಾಲಿಗೆ ಡಿ.ಕೆ. ಶಿವಕುಮಾರ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

Latest News

Related News