ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸದ್ಯ 'ರೋಲರ್ ಕೋಸ್ಟರ್' ರೈಡ್‌ನಂತೆ ಸಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ 5 ದಿನಗಳ ಕದನ ವಿರಾಮ ಘೋಷಿಸಿದ ತಕ್ಷಣ, ಒಂದು ಬ್ಯಾರೆಲ್ ಕಚ್ಚಾ ತೈಲದ ದರದಲ್ಲಿ ಬರೊಬ್ಬರಿ 11% ಇಳಿಕೆ ಕಂಡುಬಂದಿದೆ. ಮುಂಜಾನೆ 109.91 ಡಾಲರ್ (ಅಂದಾಜು 10,220 ರೂ.) ತಲುಪಿದ್ದ ಬೆಲೆ, ಟ್ರಂಪ್ ಅವರ ಶಾಂತಿ ಮಾತುಕತೆಯ ಸುದ್ದಿಯ ನಂತರ 93 ಡಾಲರ್‌ಗೆ (8,660 ರೂ.) ಕುಸಿದಿತ್ತು.
ಆದರೆ ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ. "ಅಮೆರಿಕದ ಜೊತೆ ನಾವು ಯಾವುದೇ ಶಾಂತಿ ಮಾತುಕತೆ ನಡೆಸಿಲ್ಲ" ಎಂದು ಇರಾನ್ ಅಧಿಕೃತವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಈ ಸ್ಪಷ್ಟನೆಯ ನಂತರ ತೈಲ ಬೆಲೆ ಮತ್ತೆ ಏರಿಕೆ ಕಾಣತೊಡಗಿದ್ದು, ಸದ್ಯ 96 ಡಾಲರ್ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ಟ್ರಂಪ್ ಅವರ ಘೋಷಣೆಯನ್ನು ಇರಾನ್ ತಳ್ಳಿಹಾಕಿದ್ದು, "ನಾವು ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್ ಹೆದರಿ ಕದನ ವಿರಾಮ ಘೋಷಿಸಿದ್ದಾರೆ" ಎಂದು ತಿರುಗೇಟು ನೀಡಿದೆ.
ಇತ್ತ ಅಮೆರಿಕದ ದಾಳಿಯ ಬೆದರಿಕೆಗೆ ಪ್ರತಿಯಾಗಿ ಇರಾನ್ ಅತಿ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಜಗತ್ತಿನ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಇರಾನ್ ಹೊಸ ನಿಯಮಗಳನ್ನು ಹೇರಿದೆ
- ಭಾರಿ ಶುಲ್ಕ: ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಸುಮಾರು 18 ಕೋಟಿ ರೂ. ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.
- ನಿರ್ಬಂಧ: ಅಮೆರಿಕ ಮತ್ತು ಇಸ್ರೇಲ್ ಮಿತ್ರ ದೇಶಗಳ ಹಡಗುಗಳಿಗೆ ಈ ಜಲಸಂಧಿಯಲ್ಲಿ ಸಂಚರಿಸಲು ಅನುಮತಿ ನಿರಾಕರಿಸಲಾಗಿದೆ.
- ಮಿತ್ರ ದೇಶಗಳಿಗೆ ಅವಕಾಶ: ತನ್ನ ಮಿತ್ರ ದೇಶಗಳಾದ ಭಾರತ, ಚೀನಾ, ಪಾಕಿಸ್ತಾನ, ಟರ್ಕಿ ಮತ್ತು ಇರಾಕ್ ದೇಶಗಳ ಹಡಗುಗಳಿಗೆ ಮಾತ್ರ ಸಂಚರಿಸಲು ಇರಾನ್ ಸದ್ಯ ಅನುಮತಿ ನೀಡಿದೆ.
ಮುಂದೇನು?
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಸಾಧಿಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಯಶಸ್ವಿಯಾಗದಿದ್ದರೆ, ತೈಲ ಬೆಲೆ ಮತ್ತಷ್ಟು ಏರಿಕೆಯಾಗಿ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.