ಜಾಗತಿಕ ಮಟ್ಟದಲ್ಲಿ ಯುದ್ಧದ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದು ಕಡೆ ಇರಾನ್ ಜೊತೆ ಶಾಂತಿ ಮಾತುಕತೆ ನಡೆಸಿ ಯುದ್ಧ ನಿಲ್ಲಿಸಲು ಜಗತ್ತಿನ ಪ್ರಮುಖ ದೇಶಗಳು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ ಸೇನೆ ಇರಾನ್ ಮೇಲೆ ಭೀಕರ ದಾಳಿ ನಡೆಸಿ ಶಾಕ್ ಕೊಟ್ಟಿದೆ. ಹಾರ್ಮುಜ್ ಜಲಸಂಧಿ ಬಳಿ ನಡೆದಿರುವ ಈ ತಾಜಾ ಅಟ್ಯಾಕ್‌ನಲ್ಲಿ ಇರಾನ್‌ನ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಅಮೆರಿಕ ತನ್ನ 'ಸ್ವಯಂ ರಕ್ಷಣೆಗಾಗಿ' ತೆಗೆದುಕೊಂಡ ಕ್ರಮ ಎಂದು ಸಮರ್ಥಿಸಿಕೊಂಡಿದೆ.
ಶಾಂತಿ ಮಾತುಕತೆ ನಡುವೆಯೇ ನಡೆದ ಭೀಕರ ದಾಳಿ;
ವಿಷಯ ಏನೆಂದರೆ, ಕತಾರ್ ರಾಜಧಾನಿ ದೋಹಾದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಕತಾರ್ ಪ್ರಧಾನಿಯ ಜೊತೆ ಯುದ್ಧ ನಿಲ್ಲಿಸುವ (Ceasefire) ಕುರಿತು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಬಗ್ಗೆ ಹಾಗೂ ಇರಾನ್‌ನ ಯುರೇನಿಯಂ ಸಂಗ್ರಹವನ್ನು ನಿಯಂತ್ರಿಸುವ ಬಗ್ಗೆ ಈ ಮೀಟಿಂಗ್‌ನಲ್ಲಿ ಮಾತುಕತೆಗಳು ಜಾರಿಯಲ್ಲಿವೆ. ಹಾರ್ಮುಜ್ ಜಲಸಂಧಿಯನ್ನು ಯಾವುದೇ ಕಾರಣಕ್ಕೂ ಯುದ್ಧ ಒಪ್ಪಂದದ ಚೌಕಾಸಿಗೆ ಬಳಸಿಕೊಳ್ಳಬಾರದು ಎಂದು ಕತಾರ್ ಕೂಡ ಕಠಿಣ ನಿಲುವು ತಳೆದಿದೆ. ಆದರೆ, ಈ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಇರಾನ್‌ನ ದಕ್ಷಿಣ ಭಾಗದ ಲರಾಕ್ ಐಲ್ಯಾಂಡ್ ಮೇಲೆಯೇ ಬಾಂಬ್ ದಾಳಿ ನಡೆಸಿದೆ!
ಸ್ವಯಂ ರಕ್ಷಣೆ ಎಂದ ಅಮೆರಿಕ ಸೆಂಟ್ರಲ್ ಕಮಾಂಡ್
ಅಮೆರಿಕ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಹಾರ್ಮುಜ್ ಜಲಸಂಧಿ ಬಳಿ ಇರಾನ್‌ನ ಬೋಟ್‌ಗಳು ಸ್ಫೋಟಕಗಳನ್ನು ಅಳವಡಿಸಲು ಯತ್ನಿಸುತ್ತಿದ್ದವು. ಜೊತೆಗೆ ಇರಾನ್‌ನ ಕ್ಷಿಪಣಿ ಉಡಾವಣಾ ಕೇಂದ್ರಗಳಿಂದ ಅಮೆರಿಕ ಸೈನಿಕರಿಗೆ ಬೆದರಿಕೆ ಇತ್ತು. ಈ ಮುಂದಾಗಬಹುದಾದ ದಾಳಿಯನ್ನು ತಡೆಯಲು ಹಾಗೂ ನಮ್ಮ ಸೈನಿಕರ ಸುರಕ್ಷತೆಗಾಗಿ ಈ ಅಟ್ಯಾಕ್ ಅನಿವಾರ್ಯವಾಗಿತ್ತು ಎಂದು ಅಮೆರಿಕ ಹೇಳಿದೆ. ಈ ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಕೇಂದ್ರಗಳು ಧ್ವಂಸಗೊಂಡಿದ್ದು, ಬೋಟ್‌ನಲ್ಲಿದ್ದ ನಾಲ್ವರು ಹತರಾಗಿದ್ದಾರೆ ಎನ್ನಲಾಗಿದೆ.
ಬಂದರ್ ಅಬ್ಬಾಸ್‌ನಲ್ಲಿ ಸರಣಿ ಸ್ಫೋಟ, ಹಾರ್ಮುಜ್ ಮುಕ್ತಕ್ಕೆ ಅಮೆರಿಕ ಪಟ್ಟು!
ಇದೇ ಸಮಯದಲ್ಲಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ತಮ್ಮ ಜೈಪುರ ಪ್ರವಾಸದ ವೇಳೆ ಮಂಗಳವಾರದಂದು ಇರಾನ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. "ಹಾರ್ಮುಜ್ ಜಲಸಂಧಿಯು ಜಾಗತಿಕ ವ್ಯಾಪಾರಕ್ಕೆ ಮುಕ್ತವಾಗಲೇಬೇಕು. ಇರಾನ್ ಮಾಡುತ್ತಿರುವ ಚಟುವಟಿಕೆಗಳು ಕಾನೂನುಬಾಹಿರ ಮತ್ತು ಇಡೀ ಜಗತ್ತಿಗೆ ಕೆಡುಕು. ಹಾಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ಈ ಜಲಸಂಧಿ ಮುಕ್ತವಾಗುವುದು ಗ್ಯಾರಂಟಿ. ಅವರಾಗಿಯೇ ಬಿಡುವುದು ಒಳ್ಳೆಯದು" ಎಂದಿದ್ದಾರೆ.
ಇತ್ತ ಅಮೆರಿಕದ ದಾಳಿಯ ಬೆನ್ನಲ್ಲೇ ಇರಾನ್‌ನ ಪ್ರಮುಖ ನೌಕಾ ಮತ್ತು ವಾಯುಪಡೆಯ ನೆಲೆಯಾಗಿರುವ ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಬಳಿ ಮೂರು ಬಾರಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ. ಪರ್ಷಿಯನ್ ಕೊಲ್ಲಿಯ ಸಿರಿಕ್ ಹಾಗೂ ಜಾಸ್ಕ್ ಪ್ರದೇಶಗಳಲ್ಲೂ ಬ್ಲಾಸ್ಟ್‌ಗಳು ನಡೆದಿವೆ ಎಂದು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಕೂಡ ಪ್ರತಿಯಾಗಿ ತನ್ನ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಅಲರ್ಟ್ ಮಾಡಿದೆ.
ಟ್ರಂಪ್ ಎಚ್ಚರಿಕೆ ಹಾಗೂ ಇರಾನ್ ಕೌಂಟರ್!
ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ಗೆ ದೊಡ್ಡ ಎಚ್ಚರಿಕೆ ಕೊಟ್ಟಿದ್ದಾರೆ. "ಇರಾನ್ ತನ್ನ ಬಳಿಯಿರುವ ಯುರೇನಿಯಂ ಸಂಗ್ರಹವನ್ನು ಅಮೆರಿಕಕ್ಕೆ ಒಪ್ಪಿಸಬೇಕು, ಇಲ್ಲವೇ ಅಂತರರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ಅದನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಯಾವುದೇ ಕಾರಣಕ್ಕೂ ಅಣ್ವಸ್ತ್ರ ತಯಾರಿಸಬಾರದು" ಎಂದು ಖಡಕ್ ಆಗಿ ಹೇಳಿದ್ದಾರೆ.
ಆದರೆ ಇದಕ್ಕೆ ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಹೊಸ ಮುಖ್ಯಸ್ಥ ಮೊಹಮ್ಮದ್ ಬಾಘರ್ ಜೊಲ್ಗಾಧರ್ ತಿರುಗೇಟು ನೀಡಿದ್ದು, "ಇರಾನ್ ಯುದ್ಧದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಹೋರಾಟ ಮುಂದುವರಿಯಲಿದೆ" ಎಂದು ಸಾರಿದ್ದಾರೆ. ಒಟ್ಟಾರೆಯಾಗಿ ವೆಸ್ಟ್ ಏಷ್ಯಾದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಜಾಗತಿಕ ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರುವ ಆತಂಕ ಶುರುವಾಗಿದೆ.