ಜಾಗತಿಕ ಮಟ್ಟದಲ್ಲಿ ತನ್ನ ಸೇನಾ ಶಕ್ತಿಯನ್ನು ಪ್ರದರ್ಶಿಸಲು ಹವಣಿಸುತ್ತಿರುವ ಚೀನಾಗೆ ಈಗ ದೊಡ್ಡ ಹಿನ್ನಡೆಯಾಗಿದೆ. ಚೀನಾ ತಯಾರಿಸಿದ HQ-9B ಎಚ್‌ಕ್ಯೂ-9ಬಿ ಎಂಬ ಸುಧಾರಿತ ಏರ್ ಡಿಫೆನ್ಸ್ ಸಿಸ್ಟಂ ವಾಯು ರಕ್ಷಣಾ ವ್ಯವಸ್ಥೆ ಯುದ್ಧದ ಸಮಯದಲ್ಲಿ ಸತತವಾಗಿ ವಿಫಲವಾಗುತ್ತಿದೆ ಎಂಬ ವರದಿಗಳು ಹೊರಬರುತ್ತಿವೆ, ಮೊದಲು ಪಾಕಿಸ್ತಾನದಲ್ಲಿ ಭಾರತದ ದಾಳಿಯನ್ನು ತಡೆಯಲು ವಿಫಲವಾಗಿದ್ದ ಈ ವ್ಯವಸ್ಥೆ, ಈಗ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ತಡೆಯುವಲ್ಲಿಯೂ ಸೋತಿದೆ ಎಂದು ಹೇಳಲಾಗುತ್ತಿದೆ. ಇದು ಚೀನಾದ ತಂತ್ರಜ್ಞಾನದ ಗುಣಮಟ್ಟದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಭೀಕರ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನೀ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಇರಾನ್ ತನ್ನ ರಕ್ಷಣೆಗಾಗಿ ಚೀನಾದಿಂದ ಈ HQ-9B ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿತ್ತು. ಆದರೆ, ಇಸ್ರೇಲ್ ಮತ್ತು ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನಗಳು ನಡೆಸಿದ ಕ್ಷಿಪಣಿ ದಾಳಿಯನ್ನು ಪತ್ತೆಹಚ್ಚಲು ಅಥವಾ ತಡೆಯಲು ಈ ಚೀನೀ ಸಿಸ್ಟಂಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಇರಾನ್ ನಿಜವಾಗಿಯೂ ಈ ವ್ಯವಸ್ಥೆಯನ್ನು ಬಳಸಿದ್ದರೆ, ಅದರ ಸಂಪೂರ್ಣ ವೈಫಲ್ಯವು ಚೀನಾಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ತಂದಿದೆ.
ಪಾಕಿಸ್ತಾನದ 'ಆಪರೇಷನ್ ಸಿಂದೂರ್' ಮತ್ತು ಭಾರತದ ದಾಳಿ
ಚೀನಾದ ಈ ರಕ್ಷಣಾ ವ್ಯವಸ್ಥೆಯ ದೌರ್ಬಲ್ಯ ಬಯಲಿಗೆ ಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಭಾರತವು ಪಾಕಿಸ್ತಾನದ ಮೇಲೆ ನಡೆಸಿದ 'ಆಪರೇಷನ್ ಸಿಂದೂರ್' ವೇಳೆಯೂ ಇಂತಹದ್ದೇ ಘಟನೆ ನಡೆದಿತ್ತು. ಅಂದು ಪಾಕಿಸ್ತಾನವು ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಚೀನಾದ HQ-9B ವ್ಯವಸ್ಥೆಯನ್ನೇ ನಂಬಿಕೊಂಡಿತ್ತು. ಆದರೆ ಭಾರತದ ವಾಯುಸೇನೆ ನಡೆಸಿದ ದಾಳಿಯನ್ನು ತಡೆಯಲು ಈ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಯಿತು. ಭಾರತದ ಕ್ಷಿಪಣಿಗಳು ಈ ಸಿಸ್ಟಂನ ಕಣ್ಣಿಗೆ ಬೀಳದೆ ಗುರಿಯನ್ನು ತಲುಪಿದ್ದವು. ಇದು ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ತನ್ನ ಆಯುಧಗಳನ್ನು ಮಾರಾಟ ಮಾಡುವ ಚೀನಾದ ಮಾರುಕಟ್ಟೆಗೂ ದೊಡ್ಡ ಹೊಡೆತ ನೀಡಿತ್ತು.
ಏನಿದು HQ-9B ಸಿಸ್ಟಂ? ಇದರ ಸಾಮರ್ಥ್ಯವೇನು?
ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಶನ್ ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು 2006ರಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತು. ಇದು ರಷ್ಯಾದ S-300 ಮತ್ತು ಅಮೆರಿಕದ 'ಪೇಟ್ರಿಯಟ್' ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ ಪೈಪೋಟಿ ನೀಡಲು ಚೀನಾ ಸಿದ್ಧಪಡಿಸಿದ ತಂತ್ರಜ್ಞಾನವಾಗಿದೆ.
ಇದರ ಕ್ಷಿಪಣಿಗಳು ಸುಮಾರು 260 ಕಿಲೋಮೀಟರ್ ದೂರದವರೆಗಿನ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ.
- ಇದು ಭೂಮಿಯಿಂದ ಸುಮಾರು 50 ಕಿಲೋಮೀಟರ್ ಎತ್ತರದಲ್ಲಿರುವ ಶತ್ರು ವಿಮಾನಗಳನ್ನು ಪತ್ತೆಹಚ್ಚಬಲ್ಲುದು ಎಂದು ಚೀನಾ ಹೇಳಿಕೊಂಡಿತ್ತು.
- ಶತ್ರುಗಳ 'ಸ್ಟೆಲ್ತ್' (ಕಣ್ಣಿಗೆ ಕಾಣದ) ಯುದ್ಧ ವಿಮಾನಗಳನ್ನು ಪತ್ತೆಹಚ್ಚುವ ಅತ್ಯಾಧುನಿಕ ರಾಡಾರ್‌ಗಳು ಇದರಲ್ಲಿವೆ ಎಂಬುದು ಚೀನಾದ ವಾದವಾಗಿತ್ತು.
ಚೀನಾಗೆ ಕಾಡುತ್ತಿರುವ ಆತಂಕ
ಗಮನಾರ್ಹ ಸಂಗತಿಯೆಂದರೆ, ಚೀನಾ ತನ್ನ ದೇಶದ ಅತ್ಯಂತ ಪ್ರಮುಖ ಪ್ರದೇಶಗಳಾದ ರಾಜಧಾನಿ ಬೀಜಿಂಗ್, ಟಿಬೆಟ್‌ನ ಗಡಿ ಭಾಗ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದ ರಕ್ಷಣೆಗಾಗಿ ಇದೇ HQ-9B ವ್ಯವಸ್ಥೆಯನ್ನು ಅಳವಡಿಸಿದೆ. ಈಗ ಇರಾನ್ ಮತ್ತು ಪಾಕಿಸ್ತಾನದಲ್ಲಿ ಈ ವ್ಯವಸ್ಥೆ ವಿಫಲವಾಗಿರುವುದು ಚೀನಾದ ಸ್ವಂತ ರಕ್ಷಣಾ ಕೋಟೆಯೂ ಅಷ್ಟೊಂದು ಭದ್ರವಾಗಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ, ತಾನು ನಂಬಿಕೊಂಡಿರುವ ಈ ತಂತ್ರಜ್ಞಾನವು ಶತ್ರುಗಳ ದಾಳಿಯನ್ನು ತಡೆಯಬಲ್ಲದೇ ಎಂಬ ಆತಂಕ ಈಗ ಚೀನಾವನ್ನು ಕಾಡುತ್ತಿದೆ.
ಚೀನಾದ ಮೇಡ್ ಇನ್ ಚೀನಾ ರಕ್ಷಣಾ ಉತ್ಪನ್ನಗಳು ಕೇವಲ ಜಾಹೀರಾತಿಗೆ ಸೀಮಿತವಾಗಿದ್ದು, ನಿಜವಾದ ಯುದ್ಧ ಭೂಮಿಯಲ್ಲಿ ಅವು ಕೆಲಸ ಮಾಡುತ್ತಿಲ್ಲ ಎಂಬುದು ಜಗತ್ತಿಗೆ ಮನವರಿಕೆಯಾಗುತ್ತಿದೆ.