ಚೀನಾದ ಈ ಪುಟ್ಟ ಹುಡುಗಿ ಫೋನ್‌ನಲ್ಲಿ ಚಾರ್ಜ್ ಕಡಿಮೆ ಇದ್ದ ಕಾರಣ, ಅದನ್ನು ಪ್ಲಗ್‌ಗೆ ಸಿಕ್ಕಿಸಿ ಹಾಸಿಗೆಯ ಮೇಲೆ ಕುಳಿತು ಬಳಸತೊಡಗಿದಳು. ಕೆಲವೇ ನಿಮಿಷಗಳಲ್ಲಿ ಫೋನ್ ಅತಿಯಾಗಿ ಬಿಸಿಯಾಗಲು ಶುರುವಾಯಿತು. ಆದರೆ ಅವಳು ಅದನ್ನು ಗಮನಿಸಲಿಲ್ಲ. ಇದ್ದಕ್ಕಿದ್ದಂತೆ ದೊಡ್ಡ ದಬಾಲ್ ಎಂಬ ಶಬ್ದ ಅವಳ ಕೈಯಲ್ಲಿದ್ದ ಫೋನ್ ಕೆಂಡದಂತೆ ಸಿಡಿಯಿತು. ಬೆಂಕಿ ಕಿಡಿಗಳು ಅವಳ ಬಟ್ಟೆ ಮತ್ತು ಮುಖಕ್ಕೆ ತಗುಲಿದವು. ಕ್ಷಣಾರ್ಧದಲ್ಲಿ ಭಯಾನಕವಾಗಿ ಮಾರ್ಪಟ್ಟಿತು. ಈ ಪುಟ್ಟ ಹುಡುಗಿ ಪ್ರಾಣ ಉಳಿಸಿಕೊಂಡಿದ್ದೇ ಒಂದು ಪವಾಡ.
ಫೋನ್ ಬಳಸುವಾಗ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಪ್ರಾಣಕ್ಕೇ ಕಂಟಕವಾಗಬಹುದು. ಚೀನಾದ ಯುವತಿಯ ಘಟನೆಯೇ ಇದಕ್ಕೆ ಉದಾಹರಣೆ. ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಬ್ಯಾಟರಿ ಸ್ಫೋಟಗೊಂಡು ಗಂಭೀರ ಗಾಯಗಳಾಗಬಹುದು. ಆದ್ದರಿಂದ, ಚಾರ್ಜಿಂಗ್ ವೇಳೆ ಫೋನ್‌ನಿಂದ ದೂರವಿರಿ. ಫೋನ್ ಅನ್ನು ಗಟ್ಟಿಯಾದ ನೆಲ ಅಥವಾ ಟೇಬಲ್ ಮೇಲೆ ಇಟ್ಟು ಚಾರ್ಜ್ ಮಾಡಿ. ಬಿಸಿಯಾದ ತಕ್ಷಣ ಚಾರ್ಜರ್‌ನಿಂದ ಫೋನ್ ಬೇರ್ಪಡಿಸಿ.
ಮೊಬೈಲ್ ಸ್ಫೋಟಗೊಳ್ಳಲು ಪ್ರಮುಖ ಕಾರಣಗಳೇನು?
ಮೊಬೈಲ್ ಫೋನ್‌ಗಳು ಸುಮ್ಮ ಸುಮ್ಮನೆ ಸ್ಫೋಟಗೊಳ್ಳುವುದಿಲ್ಲ. ಅದಕ್ಕೆ ಕೆಲವು ತಾಂತ್ರಿಕ ಮತ್ತು ಬಳಕೆಯ ತಪ್ಪುಗಳು ಕಾರಣವಾಗುತ್ತವೆ.
- ಚಾರ್ಜಿಂಗ್ ಮಾಡುವಾಗ ಬಳಕೆ: ಫೋನ್ ಚಾರ್ಜ್ ಆಗುತ್ತಿರುವಾಗ ಅದರ ಒಳಗೆ ರಾಸಾಯನಿಕ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆ ಸಮಯದಲ್ಲಿ ಗೇಮ್ ಆಡುವುದು ಅಥವಾ ವಿಡಿಯೋ ನೋಡುವುದರಿಂದ ಪ್ರೊಸೆಸರ್ ಮೇಲೆ ಒತ್ತಡ ಬಿದ್ದು ಬ್ಯಾಟರಿ ಬಿಸಿಯಾಗುತ್ತದೆ.
- ಅನಧಿಕೃತ ಚಾರ್ಜರ್‌ಗಳ ಬಳಕೆ: ಕಂಪನಿ ನೀಡಿದ ಅಸಲಿ ಚಾರ್ಜರ್ ಬಿಟ್ಟು, ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಅಥವಾ ನಕಲಿ ಚಾರ್ಜರ್‌ಗಳನ್ನ ಬಳಸುವುದರಿಂದ ವೋಲ್ಟೇಜ್ ಏರುಪೇರಾಗಿ ಸ್ಫೋಟ ಸಂಭವಿಸಬಹುದು.
- ರಾತ್ರಿಯಿಡೀ ಚಾರ್ಜಿಂಗ್: ಮೊಬೈಲ್ ಅನ್ನು ರಾತ್ರಿಯಿಡೀ ಚಾರ್ಜಿಂಗ್‌ಗೆ ಹಾಕಿ ಮಲಗುವುದು ತುಂಬಾ ಅಪಾಯಕಾರಿ. ಇದರಿಂದ ಬ್ಯಾಟರಿ 'ಓವರ್ ಚಾರ್ಜ್' ಆಗಿ ಉಬ್ಬಿಕೊಳ್ಳಬಹುದು.
- ವಾತಾವರಣದ ಶಾಖ: ಸೂರ್ಯನ ಬಿಸಿಲು ಅಥವಾ ಬಿಸಿಯಾದ ಜಾಗದಲ್ಲಿ ಫೋನ್ ಇಟ್ಟು ಚಾರ್ಜ್ ಮಾಡುವುದು ಅಪಾಯಕ್ಕೆ ಹಾದಿ ಮಾಡಿಕೊಡುತ್ತದೆ.
🚨A Chinese girl was about to lose her life due to using her phone, as it exploded while charging. pic.twitter.com/7laRN31P9I
— RussiaNews 🇷🇺 (@mog_russEN) March 12, 2026
ಸುರಕ್ಷತೆಗಾಗಿ ನೀವು ಅನುಸರಿಸಬೇಕಾದ ಕ್ರಮಗಳು
ಇಂತಹ ಅನಾಹುತಗಳನ್ನು ತಪ್ಪಿಸಲು ನಾವು ಕೆಲವು ಸರಳ ನಿಯಮಗಳನ್ನು ಪಾಲಿಸಬೇಕು
- ಚಾರ್ಜಿಂಗ್ ವೇಳೆ ಫೋನ್ ಬಳಸಬೇಡಿ: ಫೋನ್ ಚಾರ್ಜ್ ಆಗುತ್ತಿರುವಾಗ ಕರೆ ಮಾಡುವುದು ಅಥವಾ ಇಂಟರ್ನೆಟ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.
- ಹಾಸಿಗೆಯ ಮೇಲೆ ಇಡಬೇಡಿ: ಚಾರ್ಜ್ ಮಾಡುವಾಗ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹಾಸಿಗೆಯ ಮೇಲೆ ಇಡಬೇಡಿ. ಇದು ಶಾಖವನ್ನು ಹೊರಹೋಗದಂತೆ ತಡೆದು ಸ್ಫೋಟಕ್ಕೆ ಕಾರಣವಾಗುತ್ತದೆ. ಫೋನ್ ಅನ್ನು ಯಾವಾಗಲೂ ಗಟ್ಟಿಯಾದ ಮತ್ತು ತಂಪಾದ ಟೇಬಲ್ ಮೇಲೆ ಇಡಿ.
- ಬ್ಯಾಟರಿ ಉಬ್ಬಿದ್ದರೆ ಎಚ್ಚರ: ನಿಮ್ಮ ಫೋನ್‌ನ ಹಿಂಭಾಗ ಸ್ವಲ್ಪ ಉಬ್ಬಿದಂತೆ ಕಂಡರೆ ಅಥವಾ ಅತಿಯಾಗಿ ಬಿಸಿಯಾಗುತ್ತಿದ್ದರೆ, ತಕ್ಷಣವೇ ಅದನ್ನ ಸರ್ವಿಸ್ ಸೆಂಟರ್‌ಗೆ ತೋರಿಸಿ. ಅಂತಹ ಫೋನ್‌ಗಳನ್ನು ಬಳಸಬೇಡಿ.
- ಅಸಲಿ ಬಿಡಿಭಾಗಗಳನ್ನೇ ಬಳಸಿ: ಯಾವಾಗಲೂ ನಿಮ್ಮ ಫೋನ್ ಬ್ರ್ಯಾಂಡ್‌ನ ಅಧಿಕೃತ ಚಾರ್ಜರ್ ಮತ್ತು ಕೇಬಲ್ ಅನ್ನೇ ಬಳಸಿ.
ತಾಂತ್ರಿಕ ಉಪಕರಣಗಳು ನಮ್ಮ ಜೀವನವನ್ನು ಸುಲಭಗೊಳಿಸುತ್ತವೆ ನಿಜ, ಆದರೆ ಅವುಗಳ ಬಳಕೆಯಲ್ಲಿ ಸ್ವಲ್ಪ ಅಜಾಗರೂಕತೆ ವಹಿಸಿದರೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಚೀನಾ ಯುವತಿಯ ಘಟನೆ ನಮಗೆಲ್ಲರಿಗೂ ಒಂದು ಪಾಠವಾಗಲಿ. ಜೀವಕ್ಕಿಂತ ಮೊಬೈಲ್ ದೊಡ್ಡದಲ್ಲ ಎಂಬುದು ನೆನಪಿರಲಿ.