Apr 22, 2026 Languages : ಕನ್ನಡ | English

ಗೌತಮ್-ಭೂಮಿಕಾ ಅಭಿಮಾನಿಗಳಿಗೆ ಶಾಕ್: ಅಮೃತಧಾರೆ ಸೀರಿಯಲ್ ಶೀಘ್ರದಲ್ಲೇ ಎಂಡ್ ಆಗುತ್ತಾ? ಇಲ್ಲಿದೆ ಸಾಕ್ಷಿ!!

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಅಮೃತಧಾರೆ' ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಆರಂಭದಿಂದಲೂ ಪ್ರೇಕ್ಷಕರ ಮನ ಗೆದ್ದಿರುವ ಗೌತಮ್ ಮತ್ತು ಭೂಮಿಕಾ ಸಂಸಾರದ ಕಥೆ ಈಗ ಕ್ಲೈಮ್ಯಾಕ್ಸ್ ತಲುಪುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಇದಕ್ಕೆ ಮುಖ್ಯ ಕಾರಣ ಸೀರಿಯಲ್‌ನಲ್ಲಿ ಈಗ ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳು ಮತ್ತು ವಿಲನ್‌ಗಳ ಪತನ.

ಅಮೃತಧಾರೆ ಅಂತ್ಯ? ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!! | Photo Credit: Zee Kannada
ಅಮೃತಧಾರೆ ಅಂತ್ಯ? ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!! | Photo Credit: Zee Kannada

ಬೀದಿಗೆ ಬಿದ್ದ ಶಕುಂತಲಾ ದೇವಿ!

ಧಾರಾವಾಹಿಯ ಪ್ರಮುಖ ವಿಲನ್ ಎನಿಸಿಕೊಂಡಿದ್ದ ಶಕುಂತಲಾ ದೇವಿಯ ಆಟ ಈಗ ಪೂರ್ತಿ ಉಲ್ಟಾ ಹೊಡೆದಿದೆ. ಲೇಡೀಸ್ ಕ್ಲಬ್‌ನಲ್ಲಿ ಇಸ್ಪೀಟು ಆಟವಾಡುವ ಗೀಳು ಹಚ್ಚಿಕೊಂಡಿದ್ದ ಶಕುಂತಲಾ, ಬರೋಬ್ಬರಿ 3 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದಾಳೆ. ಈ ಸಂಕಷ್ಟದ ಸಮಯದಲ್ಲಿ ಕಾಂಚನಾ ಎಂಬಾಕೆ ಹಣ ನೀಡಿದ್ದರೂ, ಅದು ಶಕುಂತಲಾ ಪಾಲಿಗೆ ಮುಳ್ಳಾಗಿದೆ. ಕಾಂಚನಾ ಈಗ ತನ್ನ ಹಣವನ್ನು ವಾಪಸ್ ಕೇಳುತ್ತಿದ್ದು, ಶಕುಂತಲಾ ಅಕ್ಷರಶಃ ದಿಕ್ಕು ತೋಚದಂತಾಗಿದ್ದಾಳೆ.

ಇದಕ್ಕೆ ಸಾಲದಂತೆ, ತನ್ನ ಸ್ವಂತ ಮಗ ಜೈದೇವ್ ಕೂಡ ಶಕುಂತಲಾಳನ್ನು ಮನೆಯಿಂದ ಹೊರದಬ್ಬಿದ್ದಾನೆ. "ನನ್ನ ಮನೆಯಲ್ಲಿ ಇದ್ದುಕೊಂಡು ನನ್ನ ಶತ್ರುಗಳನ್ನು (ಗೌತಮ್-ಭೂಮಿಕಾ) ಸಮರ್ಥಿಸಿಕೊಳ್ಳುವವರಿಗೆ ಜಾಗವಿಲ್ಲ" ಎಂದು ಗರ್ಜಿಸಿ ತನ್ನ ತಾಯಿಯನ್ನೇ ಬೀದಿಗೆ ಹಾಕಿದ್ದಾನೆ ಜೈದೇವ್. ಕಾಂಚನಾ ಕೂಡ ಶಕುಂತಲಾಗೆ ಕಪಾಳಮೋಕ್ಷ ಮಾಡಿ, ಆಕೆಯನ್ನು ಎಲ್ಲಿಗೋ ಕರೆದೊಯ್ಯುವ ದೃಶ್ಯಗಳು ಮುಂದಿನ ಎಪಿಸೋಡ್‌ಗಳ ಬಗ್ಗೆ ಕುತೂಹಲ ಮೂಡಿಸಿವೆ.

ಜೈದೇವ್‌ಗೆ ಕಾದಿದೆ ಬರ್ಬರ ಅಂತ್ಯ?

ಇತ್ತ ಅಣ್ಣನ ಆಸ್ತಿ ಲಪಟಾಯಿಸಿ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಬೇಕೆಂಬ ಕನಸು ಕಂಡಿದ್ದ ಜೈದೇವ್, ಈಗ ಬೆಟ್ಟಿಂಗ್ ಆ್ಯಪ್‌ಗಳ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಕೋಟ್ಯಾಂತರ ರೂಪಾಯಿ ಹಣವನ್ನು ಸಾಲ ತಂದು ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿದ್ದ ಜೈದೇವ್‌ಗೆ ಈಗ ಕೈ ಸುಟ್ಟುಕೊಂಡಿದೆ. ಸಾಲ ಕೊಟ್ಟವರು ದಿನಾ ಬೆದರಿಕೆ ಹಾಕುತ್ತಿದ್ದಾರೆ. ಅಣ್ಣ ಗೌತಮ್‌ನನ್ನು ಸೋಲಿಸಲು ಹೋಗಿ ತಾನೇ ಸೋತು ಸುಣ್ಣವಾಗುತ್ತಿರುವ ಜೈದೇವ್‌ನ ಅಂತ್ಯ ಹತ್ತಿರವಾಗಿದೆ ಎಂಬ ಮುನ್ಸೂಚನೆ ಸಿಗುತ್ತಿದೆ.

ಶುಭ ಸೂಚನೆಗಳು: ಸೀರಿಯಲ್ ಎಂಡ್ ಆಗುವ ಲಕ್ಷಣಗಳಿವು!

ಅಮೃತಧಾರೆ ಸೀರಿಯಲ್ ಮುಕ್ತಾಯವಾಗಲಿದೆ ಎನ್ನಲು ಪ್ರೇಕ್ಷಕರು ಕೆಲವು ಪ್ರಮುಖ ಕಾರಣಗಳನ್ನು ಹುಡುಕಿದ್ದಾರೆ!

ಗೌತಮ್ ಯಶಸ್ಸು: ಎಲ್ಲಾ ಆಸ್ತಿ ಕಳೆದುಕೊಂಡಿದ್ದ ಗೌತಮ್ ದಿವಾನ್, ಈಗ ಶೂನ್ಯದಿಂದ ಹೊಸ ಕಂಪನಿ ಶುರು ಮಾಡಿ ಮತ್ತೆ ಯಶಸ್ಸಿನ ಹಾದಿಗೆ ಮರಳಿದ್ದಾನೆ.

ಭೂಮಿಕಾ ಜವಾಬ್ದಾರಿ: ಭೂಮಿಕಾಗೆ ಶಾಲೆಯ ಜವಾಬ್ದಾರಿ ಸಿಕ್ಕಿದೆ, ಆಕೆ ತನ್ನ ಕನಸಿನತ್ತ ಮುನ್ನಡೆಯುತ್ತಿದ್ದಾಳೆ.

ಸಮಸ್ಯೆಗಳ ಪರಿಹಾರ: ಮಲ್ಲಿ ಮದುವೆ ಸುಸೂತ್ರವಾಗಿ ನಡೆದಿದೆ, ಸುಧಾ ಕುಟುಂಬಕ್ಕೆ ತೋಟದ ಮನೆ ಸಿಕ್ಕಿದೆ. ಇಡೀ ಕುಟುಂಬದ ಕಷ್ಟಗಳು ಈಗ ಒಂದೊಂದಾಗಿ ದೂರವಾಗುತ್ತಿವೆ.

ವಿಲನ್‌ಗಳ ಸೋಲು: ಅತ್ತ ಶಕುಂತಲಾ ಮತ್ತು ಇತ್ತ ಜೈದೇವ್ ಇಬ್ಬರ ಪಾಪದ ಕೊಡ ತುಂಬಿದೆ. ಅವರ ಆಟಗಳಿಗೆ ಬ್ರೇಕ್ ಬಿದ್ದಿರುವುದು ಕಥೆಯ ಮುಕ್ತಾಯದ ಮುನ್ಸೂಚನೆಯಂತೆ ಕಾಣುತ್ತಿದೆ.

ಸಿನಿಮೀಯ ಮಾದರಿಯಲ್ಲಿ ಈಗ ಎಲ್ಲಾ ಪಾತ್ರಗಳಿಗೂ ಒಂದು ನ್ಯಾಯ ಸಿಗುತ್ತಿರುವಂತೆ ತೋರುತ್ತಿದೆ. ಸಾಮಾನ್ಯವಾಗಿ ಕನ್ನಡ ಧಾರಾವಾಹಿಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿದಾಗ 'ಶುಭಂ' ಎಂದು ಮುಕ್ತಾಯ ಹಾಡುವುದು ವಾಡಿಕೆ. ಅಮೃತಧಾರೆ ಕೂಡ ಅದೇ ಹಾದಿಯಲ್ಲಿದೆಯೇ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

ಗೌತಮ್ ಮತ್ತು ಭೂಮಿಕಾ ಜೋಡಿಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂಬ ಬೇಸರ ಒಂದೆಡೆಯಾದರೆ, ವಿಲನ್‌ಗಳಿಗೆ ಸರಿಯಾದ ಶಿಕ್ಷೆಯಾಗುತ್ತಿದೆ ಎಂಬ ಖುಷಿ ಇನ್ನೊಂದೆಡೆ ಅಭಿಮಾನಿಗಳಲ್ಲಿದೆ. ಈ ಬಗ್ಗೆ ವಾಹಿನಿಯಾಗಲಿ ಅಥವಾ ಚಿತ್ರತಂಡವಾಗಲಿ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಎಪಿಸೋಡ್‌ಗಳ ವೇಗ ನೋಡಿದರೆ 'ಅಮೃತಧಾರೆ' ಶೀಘ್ರದಲ್ಲೇ ಮುಕ್ತಾಯವಾದರೂ ಆಶ್ಚರ್ಯವಿಲ್ಲ!