Apr 22, 2026 Languages : ಕನ್ನಡ | English

ಅಣ್ಣ ಅಂತ ರಾಖಿ ಕಟ್ಟಿದವನ ಜೊತೆಗೆ ಓಡಿಹೋದಳು ಎಂದು ಕಣ್ಣೀರಿಡುತ್ತಿರುವ ಪತಿರಾಯ - ಜಯನಗರದಲ್ಲಿ ಹೈಡ್ರಾಮಾ!!

ನಾವು ಗಂಡು ಮಕ್ಕಳಾಗಿ ಹುಟ್ಟಿದ್ದೇ ತಪ್ಪಾ? ಪ್ರೀತಿಸಿ ಮದುವೆಯಾದ ಹೆಂಡತಿ, ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಗೆಳೆಯ ಇಬ್ಬರೂ ಸೇರಿ ನನಗೆ ಮೋಸ ಮಾಡಿದ್ದಾರೆ. ಈಗ ಅವಳು ಸಿಗದಿದ್ದರೆ ನಾನೂ ಮತ್ತು ನನ್ನ ತಾಯಿ ವಿಷ ಕುಡಿಯುತ್ತೇವೆ..." - ಇದು ಜಿಮ್ ಟ್ರೈನರ್ ನಿತೇಶ್ ಜಯನಗರ ಪೊಲೀಸ್ ಠಾಣೆಯ ಮುಂದೆ ನಿಂತು ಹಾಕುತ್ತಿರುವ ಆಕ್ರಂದನ.

ಮನೆಗೆ ಬಾಡಿಗೆಗೆ ಬಂದವನೇ ಮನೆ ಮಾಲೀಕಿಯನ್ನ ಎಗರಿಸಿದ್ನಾ?
ಮನೆಗೆ ಬಾಡಿಗೆಗೆ ಬಂದವನೇ ಮನೆ ಮಾಲೀಕಿಯನ್ನ ಎಗರಿಸಿದ್ನಾ?

ನಂಬಿದ ಗೆಳೆಯನೇ ಹೆಂಡತಿಯನ್ನು ಕರೆದುಕೊಂಡು ಹೋದ ಆರೋಪ ಕೇಳಿಬಂದಿದ್ದು, ಇಡೀ ಪ್ರಕರಣ ಈಗ ಚರ್ಚೆಗೆ ಗ್ರಾಸವಾಗಿದೆ.

ಸ್ನೇಹದಿಂದ ಶುರುವಾದ ಸಂಚು!

ನಿತೇಶ್ ಮತ್ತು ನವೀನ್ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾದವರು. ಇಬ್ಬರೂ ಜೀವದ ಗೆಳೆಯರಾಗಿದ್ದರು. ನಿತೇಶ್ ತನ್ನ ಪ್ರೇಯಸಿ ರಂಜಿತಾಳನ್ನು ಮನೆಯವರ ಒಪ್ಪಿಗೆಯ ಮೇರೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯ ನಂತರ ಬಾಡಿಗೆ ಮನೆ ಬೇಕಾದಾಗ, "ನಮ್ಮ ಮನೆಯಲ್ಲೇ ಇರಿ" ಎಂದು ನವೀನ್ ಜಾಗ ಕೊಟ್ಟಿದ್ದ. ನಂಬಿದ ಗೆಳೆಯನಲ್ಲವೇ ಎಂದು ನಿತೇಶ್ ಕೂಡ ರಂಜಿತಾಳ ಜೊತೆ ನವೀನ್ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಆದರೆ, ಅದೇ ಮನೆ ಆತನ ಸಂಸಾರ ಒಡೆಯುವ ಅಡಿಪಾಯವಾಗುತ್ತದೆ ಎಂದು ನಿತೇಶ್ ಊಹಿಸಿರಲಿಲ್ಲ.

ಹುಡಗಿಯ ಹೆಸರಲ್ಲಿ ನಂಬರ್ ಸೇವ್!

ನವೀನ್ ಮನೆಯಲ್ಲಿದ್ದಾಗಲೇ ರಂಜಿತಾ ಮತ್ತು ನವೀನ್ ನಡುವೆ ಏನೋ ನಡೆಯುತ್ತಿದೆ ಎಂಬ ಸಂಶಯ ನಿತೇಶ್‌ಗೆ ಬಂದಿತ್ತು. ಒಂದು ದಿನ ರಂಜಿತಾಳ ಫೋನ್ ಚೆಕ್ ಮಾಡಿದಾಗ, ನವೀನ್ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಕದ್ದುಮುಚ್ಚಿ ಚಾಟಿಂಗ್ ಮಾಡುತ್ತಿದ್ದ ವಿಷಯ ಬಯಲಾಗಿತ್ತು. ಇದನ್ನು ಕಂಡು ಬೆಚ್ಚಿಬಿದ್ದ ನಿತೇಶ್, ಹೆಂಡತಿಗೆ ಬುದ್ಧಿವಾದ ಹೇಳಿ ಅಲ್ಲಿಂದ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆದರು. ಆ ಗೆಳೆಯನ ಸಹವಾಸವೇ ಬೇಡ ಎಂದು ದೂರ ಬಂದಿದ್ದರು.

ಆದರೆ, ದೂರ ಹೋದರೂ ಚಾಟಿಂಗ್ ಮಾತ್ರ ನಿಂತಿರಲಿಲ್ಲ. ನಿತೇಶ್ ಎಚ್ಚರಿಕೆ ನೀಡಿದಾಗಲೆಲ್ಲಾ ರಂಜಿತಾ ಹೇಳುತ್ತಿದ್ದ ಒಂದೇ ಮಾತು, "ಅವನು ನನ್ನ ಅಣ್ಣನ ಸಮಾನ, ಅವನಿಗೆ ನಾನು ರಾಖಿ ಕಟ್ಟಿದ್ದೇನೆ" ಎಂದು! ಅಣ್ಣ ಎಂದು ನಂಬಿಸಿದವನೇ ಈಗ ಕಿಡ್ನಾಪ್ ಮಾಡಿದ್ದಾನೆ ಅಥವಾ ಓಡಿಸಿಕೊಂಡು ಹೋಗಿದ್ದಾನೆ ಎಂಬುದು ನಿತೇಶ್ ಆರೋಪ.

"ಹೊಟ್ಟೆ ನೋವು" ಎಂದು ರಜೆ ಹಾಕಿ ಪರಾರಿ!

ಮೂರು ದಿನಗಳ ಹಿಂದೆ ಈ ನಾಟಕಕ್ಕೆ ಅಂತ್ಯ ಸಿಕ್ಕಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ, ಅಂದು ಮಧ್ಯಾಹ್ನ "ಹೊಟ್ಟೆ ನೋವು ಬರುತ್ತಿದೆ" ಎಂದು ಅರ್ಧ ದಿನ ರಜೆ ಪಡೆದು ಆಫೀಸ್‌ನಿಂದ ಹೊರಬಂದಿದ್ದಾಳೆ. ಮೊದಲೇ ಬ್ಯಾಗ್ ಪ್ಯಾಕ್ ಮಾಡಿ ರೆಡಿ ಇಟ್ಟುಕೊಂಡಿದ್ದ ಆಕೆ, ಪತಿ ಕೆಲಸದಲ್ಲಿರುವಾಗ ಮನೆಯಿಂದ ಮಾಯವಾಗಿದ್ದಾಳೆ.

ನಿತೇಶ್ ಮನೆಗೆ ಬಂದು ನೋಡಿದಾಗ ಹೆಂಡತಿಯೂ ಇಲ್ಲ, ಬಟ್ಟೆ ಬರೆಗಳೂ ಇಲ್ಲ. ಎಲ್ಲಾ ಕಡೆ ಹುಡುಕಾಡಿದಾಗ ಆಕೆ ತನ್ನ ಆ 'ರಾಖಿ ಅಣ್ಣ' ನವೀನ್ ಜೊತೆಗೇ ಹೋಗಿರುವ ಸತ್ಯದ ಸುಳಿವು ಸಿಕ್ಕಿದೆ.

ಜಯನಗರ ಠಾಣೆಯಲ್ಲಿ ದೂರು: ಪೊಲೀಸರ ತನಿಖೆ

ಪತ್ನಿ ನಾಪತ್ತೆಯಾಗಿಲ್ಲ, ಆಕೆಯನ್ನು ನವೀನ್ ಪ್ರೀತಿಯ ನೆಪದಲ್ಲಿ ಕರೆದೊಯ್ದಿದ್ದಾನೆ ಎಂದು ನಿತೇಶ್ ಈಗ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ರಂಜಿತಾಳ ಮೊಬೈಲ್‌ನ ಸಿಡಿಆರ್ (CDR) ಮತ್ತು ಟವರ್ ಲೊಕೇಶನ್ ಟ್ರೇಸ್ ಮಾಡುತ್ತಿದ್ದಾರೆ. ನವೀನ್ ಕೂಡ ನಾಪತ್ತೆಯಾಗಿದ್ದು, ಇಬ್ಬರೂ ಒಟ್ಟಾಗಿ ಎಲ್ಲಿದ್ದಾರೆ ಎಂಬ ಹುಡುಕಾಟ ನಡೆದಿದೆ.

"ನ್ಯಾಯ ಕೊಡಿಸಿ" ಎಂದು ಅಳಲು

"ನಾನು ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ. ಅಣ್ಣ ಅಂತ ರಾಖಿ ಕಟ್ಟಿದವನೇ ಈ ರೀತಿ ಬೆನ್ನಿಗೆ ಚೂರಿ ಹಾಕುತ್ತಾನೆ ಎಂದು ಅಂದುಕೊಂಡಿರಲಿಲ್ಲ. ನನಗೆ ನ್ಯಾಯ ಸಿಗಬೇಕು, ಇಲ್ಲದಿದ್ದರೆ ಬದುಕುವುದರಲ್ಲಿ ಅರ್ಥವಿಲ್ಲ" ಎಂದು ನಿತೇಶ್ ನೋವು ತೋಡಿಕೊಂಡಿದ್ದಾರೆ. ಸ್ನೇಹ ಮತ್ತು ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ ದ್ರೋಹಗಳು ಇಂದಿನ ಸಮಾಜದಲ್ಲಿ ಸಂಬಂಧಗಳ ಮೇಲಿನ ನಂಬಿಕೆಯನ್ನೇ ಕಳೆಯುವಂತೆ ಮಾಡುತ್ತಿವೆ. ಸದ್ಯ ಜಯನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಜೋಡಿ ಎಲ್ಲಿ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

Latest News