Mar 1, 2026 Languages : ಕನ್ನಡ | English

ಟಾಕ್ಸಿಕ್ ಸಿನಿಮಾ ಬಿಡುಗಡೆ ಹೊತ್ತಲ್ಲೇ ಚರ್ಚೆ ಹೆಚ್ಚಿಸಿದ ಟಾಕ್ಸಿಕ್-2 ಸುದ್ದಿ - ಅಸಲಿಗೆ ಇನ್ನೊಂದು ಭಾಗ ಬರೋದು ನಿಜಾನಾ?

ಕನ್ನಡ ಚಿತ್ರರಂಗದ ಹೆಮ್ಮೆ, ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಕೆಜಿಎಫ್' ಸರಣಿಯ ಭರ್ಜರಿ ಯಶಸ್ಸಿನ ನಂತರ ಯಶ್ ಅವರ ಇಮೇಜ್ ದೇಶಾದ್ಯಂತ ಬೆಳೆದಿದೆ. ಕೆಜಿಎಫ್ 1 ಮತ್ತು 2 ಸಿನಿಮಾಗಳು ಈಗಾಗಲೇ ಹೊಸ ದಾಖಲೆ ಬರೆದಿವೆ ಮತ್ತು 'ಕೆಜಿಎಫ್-3' ಕೂಡ ಅನೌನ್ಸ್ ಆಗಿದೆ. ಈಗ ಎಲ್ಲರ ಕಣ್ಣು 'ಟಾಕ್ಸಿಕ್' ಮೇಲಿದೆ. ಈ ಸಿನಿಮಾ ಬಿಡುಗಡೆಯಾಗುವ ಮೊದಲೇ ಈಗ ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್-2' ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದು ಯಶ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಕಥೆ ಎರಡು ಭಾಗಗಳಲ್ಲಿ ಬರಲಿದೆಯೇ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಕಥೆ ಎರಡು ಭಾಗಗಳಲ್ಲಿ ಬರಲಿದೆಯೇ?

'ಟಾಕ್ಸಿಕ್' ಸಿನಿಮಾ ಕೂಡ ಕೆಜಿಎಫ್ ಮಾದರಿಯಲ್ಲೇ ಅತಿ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತದ ಸಿನಿಮಾ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಗಾಂಧಿನಗರದ ಗಲ್ಲಿಯಿಂದ ಹಿಡಿದು ಬಾಲಿವುಡ್ ವರೆಗೂ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಸಿನಿಮಾದ ಕಥೆ ತುಂಬಾ ದೊಡ್ಡದಾಗಿದೆ. ಹೀಗಾಗಿ ಇದನ್ನು ಒಂದೇ ಭಾಗದಲ್ಲಿ ತೋರಿಸುವ ಬದಲು ಎರಡು ಭಾಗಗಳಲ್ಲಿ ಮಾಡಲು ಚಿತ್ರತಂಡ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ರನ್ ಟೈಮ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ 'ಟಾಕ್ಸಿಕ್' ಸಿನಿಮಾದ ಅವಧಿ ಸುಮಾರು 2 ಗಂಟೆ 20 ನಿಮಿಷ ಇರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಬಜೆಟ್ ಮತ್ತು ಅದ್ದೂರಿ ತಾರಾಗಣ ಇರುವ ಸಿನಿಮಾಗೆ ಈ ಸಮಯ ತುಂಬಾ ಕಡಿಮೆ ಎಂಬುದು ಅಭಿಮಾನಿಗಳ ವಾದ. ಯಾಕೆಂದರೆ, ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ ಮತ್ತು ಕಥೆಯು ಹಲವು ಆಯಾಮಗಳನ್ನು ಹೊಂದಿದೆ. ಕೇವಲ 140 ನಿಮಿಷಗಳಲ್ಲಿ ಸಂಪೂರ್ಣ ಕಥೆಯನ್ನು ಅರ್ಥವಾಗುವಂತೆ ಹೇಳಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ.

ಒಂದು ವೇಳೆ ಸಿನಿಮಾದ ಅವಧಿ ಅಂದುಕೊಂಡಿದ್ದಕ್ಕಿಂತ ಕಡಿಮೆಯಿದ್ದರೆ, ಚಿತ್ರತಂಡ ಕಥೆಯನ್ನು ಕಟ್ ಮಾಡದೆ ಅದನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ಗ್ಯಾಂಗ್‌ಸ್ಟರ್ ಕಥೆಯಾಗಿರುವ ಕಾರಣ, ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಈ ಉದ್ದೇಶದಿಂದ 'ಟಾಕ್ಸಿಕ್-1' ಮತ್ತು 'ಟಾಕ್ಸಿಕ್-2' ಬರಬಹುದು ಎನ್ನಲಾಗುತ್ತಿದೆ. ಆದರೆ ಈ ಕುರಿತು ನಿರ್ದೇಶಕರು ಅಥವಾ ಸ್ವತಃ ಯಶ್ ಅವರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸಿನಿಮಾ ತೆರೆಗೆ ಬಂದ ಮೇಲೆ ಅಥವಾ ಚಿತ್ರತಂಡದಿಂದ ಪ್ರಕಟಣೆ ಬಂದ ಮೇಲೆಯೇ ಇದಕ್ಕೆ ಸ್ಪಷ್ಟನೆ ಸಿಗಲಿದೆ.

ಸಿನಿಮಾದ ಟ್ರೈಲರ್ ಮತ್ತು ಪೋಸ್ಟರ್‌ಗಳಲ್ಲಿ ಯಶ್ ಅವರ ಲುಕ್ ಬಹಳ ವಿಭಿನ್ನವಾಗಿ ಮೂಡಿಬಂದಿದೆ. ಅವರ ಮಾಸ್ ಅವತಾರ ನೋಡಿದ ಅಭಿಮಾನಿಗಳು ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ರನ್ ಟೈಮ್ ಮತ್ತು ಸೀಕ್ವೆಲ್ ಬಗ್ಗೆ ಬರುತ್ತಿರುವ ಸುದ್ದಿಗಳು ಕೇವಲ ವದಂತಿಗಳೇ ಅಥವಾ ನಿಜವೇ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಅಂತಿಮವಾಗಿ ಯಶ್ ಮತ್ತೊಂದು ಅಚ್ಚರಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಲಿದ್ದಾರೆಯೇ ಎಂಬ ಕುತೂಹಲ ಮನೆಮಾಡಿದೆ. 

Latest News